Advertisement

ಕಾವೇರಿದ ಕಣ; ಮೂರು ಪಕ್ಷಗಳಲ್ಲೂ ಬಿರುಸಿನ ರಾಜಕಾರಣ ಆರಂಭ

11:22 PM Feb 21, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಅಧಿವೇಶನದ ಮಧ್ಯೆಯೂ ರಾಜಕೀಯ ವಿದ್ಯಮಾನಗಳು ಬಿರುಸಾಗುತ್ತಿವೆ. ಕಳೆದ ವಾರ ಕರಾವಳಿ ಜಿಲ್ಲೆಯ ನಾಯಕರಿಗೆ ಟಾಸ್ಕ್ ನಿಗದಿ ಮಾಡಿ ತೆರಳಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಫೆ. 23ರಂದು ಬೆಂಗಳೂರಿಗೆ ಆಗಮಿಸಲಿದ್ದು, ರಾಜಧಾನಿಯ ನಾಯಕರಿಗೆ ರಾಜಕೀಯ ಪಾಠ ಮಾಡಲಿದ್ದಾರೆ.

Advertisement

ಎರಡು ದಿನಗಳಿಂದ ರಾಜ್ಯದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಂಗಳವಾರ ಪ್ರವಾಸ ಮುಗಿಸಿ ದಿಲ್ಲಿಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ ಅಮಿತ್‌ ಶಾ ಅವರೂ ಆಗಮಿಸುತ್ತಿದ್ದು, ಅದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಫೆ. 27ರಂದು ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಈ ವಾರ ಪೂರ್ತಿ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯದಲ್ಲೇ “ಶತಪಥ’ ನಡೆಸಲಿದ್ದು, ಕೇಸರಿ ಪಾಳಯಕ್ಕೆ ಚುನಾವಣ ಶಕ್ತಿಮದ್ದು ನೀಡಲಿದ್ದಾರೆ.

ನಾಳೆ ಉನ್ನತ ಮಟ್ಟದ ಸಭೆ
ರಾಜ್ಯ ನಾಯಕರ ಒಟ್ಟಾರೆ ಚುನಾವಣ ಸಿದ್ಧತೆ ಬಗ್ಗೆ ಅಮಿತ್‌ ಶಾ ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದ್ದು, ಗುರುವಾರ ಬೆಂಗಳೂರಿನಲ್ಲಿ ನಡೆಯುವ ಹೈವೋಲ್ಟೆàಜ್‌ ಸರಣಿ ಸಭೆಯತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ. ಈ ಸಭೆ ಬೆಂಗಳೂರಿನ ಜತೆಗೆ ಹಳೇ ಮೈಸೂರು ಭಾಗದ ರಾಜಕೀಯ ಬೆಳವಣಿಗೆಯ ಮೇಲೂ ಪ್ರಭಾವ ಬೀರಲಿದ್ದು, ಹಳೆ ಮೈಸೂರು ಭಾಗದಲ್ಲಿ ಒಂದಿಷ್ಟು ರಾಜಕೀಯ ಚಟುವಟಿಕೆ ಬಿರುಸುಗೊಳ್ಳಬಹುದು ಎನ್ನಲಾಗುತ್ತಿದೆ.

ಶಾ ಅವರು ಗುರುವಾರ ಮಧ್ಯಾಹ್ನ ಬಳ್ಳಾರಿ ಜಿಲ್ಲೆ ಸಂಡೂರಿಗೆ ಆಗಮಿಸಲಿದ್ದು, ಅಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಾದ ಬಳಿಕ ಸಂಜೆ ಬೆಂಗಳೂರಿಗೆ ಆಗಮಿಸುವ ಅವರು ಪುರಭವನದಲ್ಲಿ ಆಯೋಜಿಸಿರುವ “ಭಾರತದ ರಾಜಕೀಯದ 65 ವರ್ಷಗಳು ಮತ್ತು ನರೇಂದ್ರ ಮೋದಿ ಸರಕಾರದ ಮಾದರಿ ಬದಲಾವಣೆಗಳು’ ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 8 ಗಂಟೆಯಿಂದ 10 ಗಂಟೆಯ ವರೆಗೆ ಬೆಂಗಳೂರು ನಗರದ ಎಲ್ಲ ಶಾಸಕರು, ಪರಾಜಿತ ಅಭ್ಯರ್ಥಿಗಳು, ವಿಧಾನ ಪರಿಷತ್‌ ಸದಸ್ಯರು, ಸಂಸದರು, ಪದಾಧಿಕಾರಿಗಳ ಜತೆಗೆ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಲಿದ್ದಾರೆ.

ಈ ಸಭೆಯಲ್ಲಿ ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ಒಂದಿಷ್ಟು ಗುರಿ ನೀಡುವ ಸಾಧ್ಯತೆ ಇದ್ದು, ಆ ಬಳಿಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ನಳಿನ್‌ ಕುಮಾರ್‌ ಕಟೀಲು, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒಳಗೊಂಡಂತೆ ಪ್ರಮುಖರ ಜತೆಗೆ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Advertisement

ಬಿಜೆಪಿ, ಕಾಂಗ್ರೆಸ್‌ನ ಹಾಲಿ ಶಾಸಕರಿಗೆ ಜೆಡಿಎಸ್‌ ಗಾಳ
ಪಂಚರತ್ನ ಯಾತ್ರೆ ನಡುವೆಯೇ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಹಾಲಿ ಶಾಸಕರು ಹಾಗೂ ಟಿಕೆಟ್‌ ಆಕಾಂಕ್ಷಿಗಳನ್ನು ಸೆಳೆಯಲು ತೆರೆಮರೆಯ ಪ್ರಯತ್ನ ಮುಂದುವರಿಸಿರುವ ಜೆಡಿಎಸ್‌, ಮಾರ್ಚ್‌ ಮೊದಲ ವಾರದಲ್ಲಿ ಎರಡನೇ ಪಟ್ಟಿ ಬಿಡುಗಡೆಗೆ ಕಸರತ್ತು ನಡೆಸಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಕೆಲವು ಹಾಲಿ ಶಾಸಕರ ಸಹಿತ ಮುಖಂಡರು ಎಚ್‌.ಡಿ. ಕುಮಾರಸ್ವಾಮಿಯವರ ಸಂಪರ್ಕದಲ್ಲಿದ್ದು, ಮಾರ್ಚ್‌ ಮೊದಲ ವಾರದವರೆಗೆ ಕಾಲಾವಕಾಶ ಕೊಡುವಂತೆ ಕೋರಿದ್ದಾರೆ. ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆಯ ಅನಂತರ ಟಿಕೆಟ್‌ ವಂಚಿತರು ಜೆಡಿಎಸ್‌ನತ್ತ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಪುಲಿಕೇಶಿನಗರ, ಸರ್ವಜ್ಞನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ಗೆ ಬರಲು ಮುಂದಾಗಿದ್ದಾರೆ. ಮಾಜಿ ಮೇಯರ್‌ ಸಂಪತ್‌ರಾಜ್‌ ಪುಲಿಕೇಶಿನಗರ ಹಾಗೂ ಪಾಲಿಕೆಯ ಮಾಜಿ ಸದಸ್ಯ ಎ.ಆರ್‌. ಜಾಕೀರ್‌ ಸರ್ವಜ್ಞನಗರದಿಂದ ಜೆಡಿಎಸ್‌ನಿಂದ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.
ಈ ನಡುವೆ ಶಿವಾಜಿನಗರದಿಂದ ಮಾಜಿ ಸಚಿವ ರೋಷನ್‌ ಬೇಗ್‌ ಅವರ ಪುತ್ರ ರುಮಾನ್‌ ಬೇಗ್‌ ಅವರನ್ನು ಜೆಡಿಎಸ್‌ ಕಣಕ್ಕಿಳಿಸುವ ಬಗ್ಗೆಯೂ ಮಾತುಕತೆ ನಡೆದಿದ್ದು, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಈ ಕುರಿತು ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಇದರ ಜತೆಗೆ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಿಂದ ಕೆಲವು ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಕುಮಾರಸ್ವಾಮಿ ಸಂಪರ್ಕದಲ್ಲಿದ್ದಾರೆ. ಇವರು ಟಿಕೆಟ್‌ ಆಕಾಂಕ್ಷಿಗಳೂ ಆಗಿದ್ದು, ಅಲ್ಲಿ ಟಿಕೆಟ್‌ ಸಿಗದಿದ್ದರೆ ಜೆಡಿಎಸ್‌ನತ್ತ ಬರಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಟಿಕೆಟ್‌ ಕಸರತ್ತು
ಇನ್ನೊಂದೆಡೆ, ವಿಪಕ್ಷ ಕಾಂಗ್ರೆಸ್‌ ಕೂಡ ಚುನಾವಣ ಸಿದ್ಧತೆಯನ್ನು ಚುರುಕುಗೊಳಿಸಿದ್ದು, ಸುಮಾರು 150 ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕಾಗಿ ಸೋಮವಾರ ರಾತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. 75 ಹೆಸರುಗಳು ಬಹುತೇಕ ಅಂತಿಮಗೊಂಡಿವೆ. ಇನ್ನುಳಿದ 75 ಕ್ಷೇತ್ರಗಳಲ್ಲಿ ತಲಾ ಎರಡು ಹೆಸರುಗಳು ಇರುವುದರಿಂದ ಈ ತಿಂಗಳ ಅಂತ್ಯದೊಳಗಾಗಿ ಸಂಭಾವ್ಯರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ. ಉಳಿದ ಆಕಾಂಕ್ಷಿಗಳನ್ನು ಪಕ್ಷದ ಹಿರಿಯರೇ ಕರೆದು ಮಾತುಕತೆ ನಡೆಸಿ ಬಂಡಾಯ ಅಥವಾ ಪಕ್ಷಾಂತರ ನಡೆಸದೆ ಇರುವಂತೆ ಮನವೊಲಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದೆಲ್ಲದರ ಮಧ್ಯೆ ಫೆ. 24ರಿಂದ ಮೂರು ದಿನಗಳ ಕಾಲ ಛತ್ತೀಸ್‌ಗಢದ ನಯಾ ರಾಯು³ರದಲ್ಲಿ 3 ದಿನಗಳ ಕಾಲ ಎಐಸಿಸಿ ಅಧಿವೇಶನ ನಡೆಯಲಿದ್ದು, ಅಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಫೆ. 27ರಂದು ಪಂಚರತ್ನ ಸಮಾವೇಶ
ಭದ್ರಾವತಿಯಿಂದ ಮಂಗಳವಾರದಿಂದ ಆರಂಭಗೊಂಡಿರುವ ಪಂಚರತ್ನ ಯಾತ್ರೆ ಮಾರ್ಚ್‌ 1ರ ವರೆಗೆ ನಡೆಯಲಿದ್ದು, ಅದರ ನಡುವೆ ಫೆ. 27ರಂದು ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅನಂತರ ಮಾರ್ಚ್‌ ಮೊದಲ ವಾರದಲ್ಲಿ ಎರಡನೇ ಪಟ್ಟಿ ಸಂಬಂಧ ಸಭೆ ನಡೆಯಲಿದೆ. ಹಾಸನ, ಹೊಳೆನರಸೀಪುರ ಟಿಕೆಟ್‌ ವಿಚಾರದಲ್ಲಿ ಹಗ್ಗಜಗ್ಗಾಟ ನಡೆದಿದ್ದು, ಹೊಳೆನರಸೀಪುರದಿಂದ ಭವಾನಿ ಹಾಗೂ ಹಾಸನದಿಂದ ರೇವಣ್ಣ ಸ್ಪರ್ಧೆಗೆ ಬಯಸಿದ್ದಾರೆ. ಆದರೆ ಅಲ್ಲಿ ಸ್ವರೂಪ್‌ಗೆ ಟಿಕೆಟ್‌ ನೀಡುವ ಭರವಸೆ ನೀಡಲಾಗಿದೆ. ಮತ್ತೂಂದೆಡೆ ಕೆ.ಆರ್‌. ಪೇಟೆಯಿಂದ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳೂ ಇವೆ.

Advertisement

Udayavani is now on Telegram. Click here to join our channel and stay updated with the latest news.

Next