ಲಕ್ನೋ: ಲೋಕಸಭೆ ಚುನಾವಣೆಗಾಗಿ ಸಮಾಜವಾದಿ ಪಕ್ಷ ಮಂಗಳವಾರ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಕಾಂಗ್ರೆಸ್ ಜತೆಗೆ ಸ್ಥಾನ ಹೊಂದಾಣಿಕೆ ವಿಚಾರ ಇನ್ನೂ ಇತ್ಯರ್ಥವಾಗದೆ ಅತಂತ್ರ ಸ್ಥಿತಿಯಲ್ಲಿ ಇರುವಾಗಲೇ ಪಕ್ಷದ ಎಕ್ಸ್ ಖಾತೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಕೆಲ ದಿನಗಳ ಹಿಂದೆ ಎಸ್‌ಪಿ ಅಧ್ಯಕ್ಷ ಅಖೀಲೇಶ್ ಯಾದವ್ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಕೇವಲ 11 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಸ್ಪಷ್ಟಪಡಿಸಿದ್ದರು. ಕಾಂಗ್ರೆಸ್ ಹೆಚ್ಚು ಸ್ಥಾನಕ್ಕೆ ಪಟ್ಟುಹಿಡಿದರೆ ಏಕಾಂಗಿಯಾಗಿ ಸ್ಪರ್ಧೆ ಮಾಡುವ ಬಗ್ಗೆಯೂ ಇಂಗಿತ ವ್ಯಕ್ತಪಡಿಸಿದ್ದರು.
ಅಖೀಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಮೈನ್‌ಪುರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ರಾಮ್‌ಗೋಪಲ್ ಯಾದವ್ ಫಿರೋಜ್‌ಬಾದ್ ಕ್ಷೇತ್ರ, ಧರ್ಮೇಂದ್ರ ಯಾದವ್ ಬುಡೌಲ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಹಾಲಿ ಶಾಸಕ ರವಿದಾಸ್ ಮೆಲ್ಹೋತ್ರಾ ಲಕ್ನೋ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.
ಬಿಹಾರ, ಪಶ್ಚಿಮ ಬಂಗಾಳ, ಪಂಜಾಬ್ ಬಳಿಕ ಉತ್ತರ ಪ್ರದೇಶದಲ್ಲಿಯೂ ಕೂಡ ಕಾಂಗ್ರೆಸ್‌ಗೆ ಸ್ಥಾನ ಹೊಂದಾಣಿಕೆಯಲ್ಲಿ ಹಿನ್ನಡೆಯಾಗುವ ಅಂಶ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.