Advertisement

ಕೆಆರ್‌ಎಸ್‌ ಉಳಿವಿನ ಹೋರಾಟದ ದನಿ ಅಡಗಿಸಿದ ರಾಜಕಾರಣ

06:00 AM Oct 02, 2018 | Team Udayavani |

ಮಂಡ್ಯ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ದೂರದೃಷ್ಟಿಯ ಮತ್ತು ಸರ್‌ ಎಂ.ವಿಶ್ವೇಶ್ವರಯ್ಯನವರ ತಾಂತ್ರಿಕತೆಯ ಫ‌ಲದಿಂದ ಐತಿಹಾಸಿಕವಾಗಿ ನಿರ್ಮಾಣಗೊಂಡ ಕೃಷ್ಣರಾಜಸಾಗರ ಜಲಾಶಯಕ್ಕೆ ಕಲ್ಲು ಗಣಿಗಾರಿಕೆಯಿಂದಾಗಿ ಅಪಾಯದ ಮುನ್ಸೂಚನೆ ವ್ಯಕ್ತವಾಗುತ್ತಿದ್ದರೂ ಜಿಲ್ಲೆಯಲ್ಲಿ ಕೆಆರ್‌ಎಸ್‌ ಉಳಿವಿನ ಪರವಾದ ಧ್ವನಿ ಬಲವಾಗಿ ಕೇಳಿಬರುತ್ತಿಲ್ಲ.

Advertisement

ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ವಿವಾದ ಭುಗಿಲೆದ್ದ ಸಂದರ್ಭದಲ್ಲೆಲ್ಲಾ ಉಗ್ರ ಹೋರಾಟದ ಮೂಲಕ ರಾಜ್ಯ ಮತ್ತು ರಾಷ್ಟ್ರದ ಗಮನವನ್ನು ಸೆಳೆಯುತ್ತಿದ್ದ ಮಂಡ್ಯ ಜಿಲ್ಲೆಯಲ್ಲಿ ಈಗ ಕೆಆರ್‌ಎಸ್‌ ಸಂರಕ್ಷಣೆಗಾಗಿ ಸಾಮೂಹಿಕ ಹೋರಾಟಗಳು ತಲೆ ಎತ್ತದಿರುವುದರ ಸುತ್ತ ರಾಜಕಾರಣದ ಮೇಲಾಟ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್‌-ಜೆಡಿಎಸ್‌ನ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಜಿಲ್ಲೆಯಲ್ಲೂ ಕೂಡ ಸಾಂಪ್ರದಾಯಿಕ ಎದುರಾಳಿ ಪಕ್ಷಗಳು ಪರಸ್ಪರ ಸಮನ್ವಯತೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ಈಗ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಮಾಲೀಕತ್ವದಲ್ಲಿ ಎರಡೂ ಪಕ್ಷಗಳ ಮುಖಂಡರ ಪಾಲುದಾರಿಕೆ ಇರುವುದರಿಂದ ಗಣಿಗಾರಿಕೆ ವಿರುದ್ಧ ರಾಜಕೀಯವಾದ ಪ್ರತಿರೋಧ ವ್ಯಕ್ತವಾಗುತ್ತಿಲ್ಲ. ಜಿಲ್ಲೆಯ ಮಟ್ಟಿಗೆ ಸಾಂಕೇತಿಕ ವಿರೋಧಪಕ್ಷದ ನಾಯಕತ್ವ ವಹಿಸಿರುವ ಬಿಜೆಪಿ ಪ್ರಬಲ ಹೋರಾಟ ನಡೆಸುವಲ್ಲಿ ವಿಫ‌ಲವಾಗಿದ್ದು, ಇದು ಅಕ್ರಮ ಗಣಿಗಾರಿಕೆಗೆ ಸಹಕಾರಿಯಾಗಿದೆ.

ಜಿಲ್ಲೆಯಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಪ್ರತಿ ಚುನಾವಣೆಗಳಲ್ಲೂ ಹೋರಾಟ ನಡೆಸುವ ಬಿಜೆಪಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಕೆಆರ್‌ಎಸ್‌ ಉಳಿವಿನ ಹೋರಾಟವನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿದೆ. ಕಾಂಗ್ರೆಸ್‌-ಜೆಡಿಎಸ್‌ಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಇದೊಂದು ಸದಾವಕಾಶವಾಗಿದೆ. ಆದರೆ, ಈ ಬಗ್ಗೆ ನಾಯಕರು ಗಂಭೀರ ಪ್ರಯತ್ನವನ್ನು ನಡೆಸುತ್ತಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ ಡಿವೈಎಸ್ಪಿ ನೀಡಿರುವ ವರದಿ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ವರದಿಗಳು ಬೇಬಿ ಬೆಟ್ಟದ ಕಾವಲು ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಅಪಾಯವಿದೆ ಎಂದು ನಿಖರವಾಗಿ ತಿಳಿಸಿದ್ದರೂ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಜಿಲ್ಲಾಡಳಿತದಿಂದ ಸಾಧ್ಯವಾಗಿಲ್ಲ.

Advertisement

ರೈತ ಹಿತರಕ್ಷಣಾ ಸಮಿತಿ ಮೌನ:
ಕಾವೇರಿ ಚಳವಳಿ ಸಾರಥ್ಯವನ್ನು ಸಾಂಪ್ರದಾಯಿಕವಾಗಿ ವಹಿಸಿಕೊಂಡು ಬಂದಿದ್ದ ರೈತ ಹಿತರಕ್ಷಣಾ ಸಮಿತಿಯಂತಹ ಸಂಘಟನೆ ಕೂಡ ಈ ವಿಚಾರದಲ್ಲಿ ಮೌನ ವಹಿಸಿದೆ. ಅಲ್ಲದೆ, ಪಕ್ಷಾತೀತ ವೇದಿಕೆಯಾಗಿ ಬಿಂಬಿತವಾಗಿದ್ದ ಈ ಸಂಘಟನೆ ಕೆಆರ್‌ಎಸ್‌ ಉಳಿವಿನ ವಿಚಾರದಲ್ಲಿ ಕನಿಷ್ಠ  ಸಮಾಲೋಚನೆಗೂ ಮುಂದಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ.

ರೈತಸಂಘ ಹಾಗೂ ಕನ್ನಡಪರ ಸಂಘಟನೆಗಳು ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಆಗುವ ಅಪಾಯದ ವಿರುದ್ಧ ಸಾಂಕೇತಿಕ ಹೋರಾಟಗಳನ್ನು ನಡೆಸುತ್ತಿವೆಯಾದರೂ ಗಂಭೀರವಾದ ಪರಿಣಾಮವನ್ನು ಬೀರುವಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಜಿಲ್ಲಾಡಳಿತದ ಮಟ್ಟದಲ್ಲೇ ಜಿಲ್ಲಾಧಿಕಾರಿಯೂ ಸೇರಿ ಕೆಲವು ನಿಷ್ಠಾವಂತ ಅಧಿಕಾರಿಗಳ ಗಣಿಗಾರಿಕೆ ವಿರೋಧಿ ಹೋರಾಟಕ್ಕೆ ಮತ್ತೆ ಕೆಲವು ಅಧಿಕಾರಿ ವರ್ಗ ಬೆಂಬಲಕ್ಕೆ ನಿಲ್ಲದಿರುವುದೂ ಕೂಡ ಗಣಿಗಾರಿಕೆ ಸ್ಥಗಿತಕ್ಕೆ ಅಡ್ಡಿಯಾಗಿದೆ.

ಗಣಿಗಾರಿಕೆ ವಿಚಾರವನ್ನು ರಾಜಕೀಯವಾಗಿ ಅವಲೋಕಿಸುವುದಾದರೆ ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅಧಿಕಾರ ಸಂದರ್ಭದಲ್ಲಿ ಸಚಿವರಾಗಿದ್ದ ಅಂಬರೀಶ್‌ ಜೆಡಿಎಸ್‌ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ ಕಾರಣದಿಂದಾಗಿ ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಬಲ ವಿರೋಧಪಕ್ಷವಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ರೈತರ ಆರ್ಥಿಕ ಒಡನಾಡಿಯಾಗಿದ್ದ ಮೈಷುಗರ್‌ ನಿಧಾನವಾಗಿ ಅವನತಿಯಾಗುತ್ತಿದ್ದರೂ ಜೆಡಿಎಸ್‌ ಗಟ್ಟಿಯಾಗಿ ದನಿ ಮಾಡಲಿಲ್ಲ. ಅದರ ದುರಂತ ಫ‌ಲವನ್ನು ಜಿಲ್ಲೆಯ ರೈತರು ಈಗ ಅನುಭವಿಸುತ್ತಿದ್ದಾರೆ.

ರಚನೆಯಾಗದ ಸುರಕ್ಷತಾ ಸಮಿತಿ:
ಈ ನಡುವೆ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು 80 ವರ್ಷ ಹಳೆಯದಾದ ಕೃಷ್ಣರಾಜಸಾಗರ ಅಣೆಕಟ್ಟೆಗೆ ಕಲ್ಲು ಗಣಿಗಾರಿಕೆಯಿಂದ ಉಂಟಾಗಿರಬಹುದಾದ ಅಪಾಯದ ಕುರಿತು ತಕ್ಷಣವೇ ಅಣೆಕಟ್ಟು ಸುರಕ್ಷತಾ ಸಮಿತಿ ರಚನೆ ಮಾಡಿಕೊಂಡು ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಆದರೆ, ರಾಜಕೀಯ ಪ್ರಭಾವ ಮತ್ತು ಪಟ್ಟಭದ್ರರ ಹಿತಾಸಕ್ತಿಯ ಕಾರಣದಿಂದಾಗಿ ಜಿಲ್ಲಾಡಳಿತ ಇದುವರೆಗೆ ಸಮಿತಿಯನ್ನು ರಚಿಸಲು ಸಾಧ್ಯವಾಗಿಲ್ಲ.

ಪ್ರಮೋದಾದೇವಿ ಅರ್ಜಿಗೂ ಬೆಲೆ ಇಲ್ಲ:
ಮೈಸೂರು ಮಹಾರಾಣಿ ಪ್ರಮೋದಾದೇವಿ ಒಡೆಯರ್‌ ಅವರು ಬೇಬಿಬೆಟ್ಟದ ಕಾವಲು ಪ್ರದೇಶ ರಾಜಮನೆತನಕ್ಕೆ ಸೇರಿದ ಆಸ್ತಿಯಾಗಿದ್ದು, ಅದು ನಮಗೇ ಸೇರಬೇಕೆಂಬ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸಿದ್ದಾರೆ. ಪ್ರಮೋದಾದೇವಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ, ಪಾಂಡವಪುರ ತಹಸೀಲ್ದಾರ್‌ ಅವರಿಗೆ ಅರ್ಜಿ ಸಲ್ಲಿಸಿ ಸದರಿ ಪ್ರದೇಶವನ್ನು ಸರ್ವೆ ನಡೆಸಿ ನಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೂ ಸಹ ರಾಜ್ಯಸರ್ಕಾರ ಬೇಬಿಬೆಟ್ಟದ ಕಾವಲು ಪ್ರದೇಶ ಸರ್ಕಾರಕ್ಕೆ ಸೇರಿದ ಆಸ್ತಿಯೋ ಅಥವಾ ರಾಜಮನೆತನಕ್ಕೆ ಸೇರಿದ ಖಾಸಗಿ ಆಸ್ತಿಯೋ ಎಂದು ನಿಖರವಾಗಿ ಗುರುತಿಸಿಲ್ಲ. ಈ ವಿಳಂಬ ಕೂಡ ಪರೋಕ್ಷವಾಗಿ ಗಣಿಗಾರಿಕೆ ಬೆಂಬಲಿಸಿದಂತಾಗಿದೆ.

– ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next