Advertisement

ಸೇನಾ ಸನ್ನದ್ಧತೆಗೆ ಧಕ್ಕೆ ತರುತ್ತಿದೆ ರಾಜಕೀಯ

06:00 AM Oct 11, 2018 | Team Udayavani |

ಒಂದು ನಿರ್ದಿಷ್ಟ ಕಂಪೆನಿಯನ್ನು ಏಕೆ ಆಯ್ಕೆ ಮಾಡಲಾಯಿತು ಎಂದು ಪ್ರಶ್ನಿಸುವ ಮೂಲಕ ಪ್ರಧಾನಮಂತ್ರಿಯನ್ನು ಕಳ್ಳ ಎಂದು ದೂಷಿಸುವುದು ಕಾಂಗ್ರೆಸ್‌ ಅಧ್ಯಕ್ಷರಿಗೆ ರಾಜಕೀಯ ಲಾಭ ತಂದುಕೊಡಬಹುದಾದರೂ ಅದರ ಕೆಟ್ಟ ಪರಿಣಾಮ ಯುದ್ಧ ಸಿದ್ಧತೆಯ ಮೇಲಾಗಲಿದೆ ಎನ್ನುವುದು ಗಮನಾರ್ಹ. HAL ಈ ಅವಕಾಶ ಏಕೆ ನೀಡಲಾಗಲಿಲ್ಲ ಎಂದು ದೊಡ್ಡ ಸ್ವರದಲ್ಲಿ ಪ್ರಶ್ನಿಸುತ್ತಿರುವವರು ತಮ್ಮ ಪಕ್ಷದ ಸುದೀರ್ಘ‌ ಆಡಳಿತಾವಧಿಯಲ್ಲಿ ಏಅಔಗೆ ಎಷ್ಟು ಮಹತ್ವ ನೀಡಿದ್ದರು ಎನ್ನುವುದನ್ನು ದೇಶ ಚೆನ್ನಾಗಿ ತಿಳಿದಿದೆ.

Advertisement

ಕಳೆದ ವರ್ಷ ಡೋಕ್ಲಾಂ ವಿಷಯದಲ್ಲಿ ಭಾರತ-ಚೀನಾ ಸೇನೆ 72 ದಿನ ಭೂತಾನ್‌ ಗಡಿಯಲ್ಲಿ ಎದುರು ಬದುರಾಗಿ ನಿಂತಾಗ ಸಂಪೂರ್ಣ ದೇಶ ಯುದ್ಧ ಭೀತಿಗೊಳಗಾಗಿತ್ತು. ಆಗ ರಕ್ಷಣಾ ಸಚಿವರೂ ಆಗಿದ್ದ ಅರುಣ್‌ ಜೇಟ್ಲಿಯವರು 1962ರ ಭಾರತಕ್ಕೂ ಇಂದಿನ ಭಾರತಕ್ಕೂ ಅಜಗಜಾಂತರವಿದೆ ಎಂದು ಚೀನಾಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಲ್ಲದೆ ನಮ್ಮ ರಕ್ಷಣಾ ಸಾಮರ್ಥ್ಯದ ಕುರಿತು ದೇಶವಾಸಿಗಳಲ್ಲಿ ಆತ್ಮವಿಶ್ವಾಸ ತುಂಬುವ ಮಾತುಗಳನ್ನೇನೋ ಆಡಿದ್ದರು. ಆದರೆ ಅದಕ್ಕೂ ಕೆಲವು ದಿನಗಳ ಮೊದಲು ಭಾರತದ ಮಹಾಲೇಖಪಾಲರ ವರದಿಯಲ್ಲಿ ದೇಶದ ಯುದ್ಧ ಸಾಮರ್ಥ್ಯದ ಕುರಿತು ಗಂಭೀರ ಚಿಂತೆ ವ್ಯಕ್ತಪಡಿಸಲಾಗಿತ್ತು. 

 ಚೀನಾ ಮತ್ತು ಪಾಕಿಸ್ತಾನವನ್ನು ಏಕಕಾಲದಲ್ಲಿ ಎದುರಿಸಲು ಕನಿಷ್ಠ ಅಗತ್ಯವಾಗಿರುವ 42 ಸ್ಕ್ವಾಡ್ರನ್‌ಗಳ 750 ಯುದ್ಧ ವಿಮಾನಗಳ ಬದಲಾಗಿ ಹಳೆಯ ಮಾದರಿಯ ಮಿಗ್‌ 21 ವಿಮಾನಗಳು ಸೇವೆಯಿಂದ ನಿವೃತ್ತವಾಗುವುದರೊಂದಿಗೆ ತನ್ನ ಬಳಿ 2032ರ ಹೊತ್ತಿಗೆ ಕೇವಲ 22 ಸ್ಕ್ವಾಡ್ರನ್‌ ಮಾತ್ರ ಶತ್ರುಗಳೊಂದಿಗೆ ಸೆಣಸಲು ಲಭ್ಯವಾಗಿರುವುದಾಗಿ ವಾಯುಪಡೆ ತಿಳಿಸಿತ್ತು. ಸೇನೆಗೆ ಅಗತ್ಯವಾಗಿರುವ 40 ಬಗೆಯ ಅತ್ಯಂತ ಆವಶ್ಯಕವೆನಿಸಿದ ಮದ್ದುಗುಂಡುಗಳ ಸಂಗ್ರಹ ಕೇವಲ 10 ದಿನಗಳ ಯುದ್ಧಕ್ಕೆ ಮಾತ್ರ ಸಾಕಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿತ್ತು. ನಮ್ಮ ಮಿಲಿಟರಿ ಬಳಿ ಇರುವ ಸುಮಾರು ಶೇ.64 ಯುದೊœàಪಕರಣಗಳು ಹಳೆಯದಾಗಿದ್ದು ಕೇವಲ ಶೇ.24 ಮಾತ್ರ ಆಧುನಿಕ ಆಯುಧಗಳ ಸಾಲಿನಲ್ಲಿ ನಿಲ್ಲುತ್ತವೆ. ಕಾಲಕಾಲಕ್ಕೆ ಇಂತಹ ವರದಿಗಳು ದೇಶದ ಗಮನ ಸೆಳೆಯುತ್ತವೆ.  ದುರದೃಷ್ಟವೆಂದರೆ ನಮ್ಮ ರಾಜಕೀಯ ಪಕ್ಷಗಳು ದೇಶದ ರಕ್ಷಣೆಯಂತಹ ಮಹತ್ವಪೂರ್ಣ ವಿಷಯದಲ್ಲಿ ಒಂದೆಡೆ ಕುಳಿತು ಸರ್ವಾನುಮತದ ನಿರ್ಣಯ ತೆಗೆದುಕೊಳ್ಳುವ ಬದಲಾಗಿ ಪರಸ್ಪರ ಕಾದಾಟ-ಕೆಸರೆರಚಾಟದಲ್ಲಿ ತೊಡಗಿರುವುದು. ರಫೆಲ್‌ ಯುದ್ಧ ವಿಮಾನ ಖರೀದಿಯ ಕುರಿತು ಕಾಂಗ್ರೆಸ್‌ ನಾಯಕರು ಮಾಡುತ್ತಿರುವ ಅಬ್ಬರದ ಆರೋಪದ ಹಿನ್ನೆಲೆಯಲ್ಲಿ ದೇಶದ ಯುದ್ಧ ಸನ್ನದ್ಧತೆಯ ಕುರಿತಂತೆ ನಮ್ಮ ರಾಜಕಾರಣಿಗಳ ಬೇಜವಾಬ್ದಾರಿಯುತ ನಡತೆ ದೇಶದ ಸುರಕ್ಷತೆ ಬಯಸುವ ನಾಗರಿಕರನ್ನು ಚಿಂತೆಗೀಡುಮಾಡಿದೆ.

ವಿದೇಶಿ ಅವಲಂಬನೆ
ರಕ್ಷಣೋಪಕರಣಗಳು ಮತ್ತು ಯುದ್ಧ ವಿಮಾನಗಳಿಗಾಗಿ ಇನ್ನೂ ವಿದೇಶಗಳನ್ನು ಅತ್ಯಧಿಕವಾಗಿ ಅವಲಂಬಿಸಬೇಕಾದ ಸ್ಥಿತಿಯಲ್ಲಿರುವ ನಮ್ಮ ವ್ಯವಸ್ಥೆಯಲ್ಲಿ ರಕ್ಷಣಾ ಖರೀದಿಯಲ್ಲಿ ಅನೇಕ ದೇಶಿ- ವಿದೇಶಿ ಕಮಿಷನ್‌ ಏಜೆಂಟ್‌ಗಳು, ದಲ್ಲಾಳಿಗಳು ಸಕ್ರಿಯವಾಗಿದ್ದಾರೆ ಎನ್ನುವ ಮಾತನ್ನು ಹಲವಾರು ವರ್ಷಗಳಿಂದ ಕೇಳುತ್ತಿದ್ದೇವೆ. ರಾಜಕಾರಣಿಗಳು, ಸೇನಾ ಮತ್ತು ಅಧಿಕಾರಿಗಳಿಗೆ ನಾನಾ ತರಹದ ಆಮಿಷ ಹಾಗೂ ಲಂಚ ನೀಡಲಾಗುತ್ತದೆ ಎನ್ನುವ ಆರೋಪ ಹಲವಾರು ಬಾರಿ ಕೇಳಿ ಬಂದಿದೆ. ನಿವೃತ್ತ ವಾಯು ಸೇನಾ ಮುಖಸ್ಥರೋರ್ವರು ವಿದೇಶೀ ಕಂಪೆನಿಯೊಂದಕ್ಕೆ ಲಾಭ ಮಾಡಿಕೊಡಲು ನಿಯಮಗಳನ್ನು ಸಡಿಲಿಸಿದರು ಎನ್ನುವ ಆರೋಪದ ಕುರಿತು ತನಿಖೆ ಇನ್ನೂ ಪ್ರಗತಿಯಲ್ಲಿದೆ. ಸ್ವೀಡನ್ನಿನ ಬೋಫೋರ್ಸ್‌ ಫಿರಂಗಿ ಖರೀದಿಯಲ್ಲಿ ಮಧ್ಯವರ್ತಿಗಳ ಮೂಲಕ ರಾಜಕಾರಣಿಗಳಿಗೆ ಲಂಚ ನೀಡಲಾಗಿತ್ತು ಎನ್ನುವ ಆರೋಪ ದೊಡ್ಡ ಹಗರಣ ರೂಪ ಪಡೆದುಕೊಂಡು ಮಿಸ್ಟರ್‌ ಕ್ಲೀನ್‌ ಎನಿಸಿದ್ದ ರಾಜೀವ್‌ ಗಾಂಧಿಯವರ ವರ್ಚಸ್ಸನ್ನೇ ಕುಂದಿಸಿತ್ತು. ಅಂತಿಮವಾಗಿ ಸುದೀರ್ಘ‌ವಾಗಿ ನಡೆದ ತನಿಖೆಯಲ್ಲಿ ಆರೋಪ ಸಾಬೀತಾಗದಿದ್ದರೂ ದಶಕಗಳ ತನಕ ಕಾಂಗ್ರೆಸನ್ನು ಬೋಫೋರ್ಸ್‌ ಹಗರಣ ಬೆಂಬಿಡದೆ ಕಾಡಿತು. 

ಸ್ವಾತಂತ್ರ್ಯಾನಂತರ ಕಾಲಕಾಲಕ್ಕೆ ಎಲ್ಲಾ ಸರಕಾರಗಳು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಕುರಿತಂತೆ ಬದ್ಧತೆ ವ್ಯಕ್ತಪಡಿಸುತ್ತಾ ಬಂದಿವೆಯಾದರೂ ಇನ್ನೂ ನಮ್ಮ ರಕ್ಷಣಾ ಪಡೆಗಳು ತಮ್ಮ ಅಗತ್ಯದ ಆಯುಧಗಳಿಗಾಗಿ ವಿದೇಶಗಳನ್ನೇ ಅತಿಯಾಗಿ ಅವಲಂಬಿಸಬೇಕಾದ ಸ್ಥಿತಿಯಲ್ಲಿರಬೇಕಾಗಿರುವುದು ವಿಷಾದದ ಸಂಗತಿ. ಸ್ವಾತಂತ್ರೊತ್ತರದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರಕಾರಗಳು ರಕ್ಷಣಾ ಉಪಕರಣ ಉತ್ಪಾದನಾ ಕ್ಷೇತ್ರವನ್ನು ಖಾಸಗಿ ಕ್ಷೇತ್ರಕ್ಕೆ ತೆರೆಯುವುದರಲ್ಲಿ ತೋರಿದ ನಿರಾಸಕ್ತಿ, ಸರಕಾರಿ ಮದ್ದುಗುಂಡು ಫ್ಯಾಕ್ಟರಿಗಳು, ಏಅಔನಂತಹ ಸಾರ್ವಜನಿಕ ರಂಗದ ಉದ್ಯಮಗಳಲ್ಲಿ ವ್ಯಾಪಿಸಿರುವ ಅದಕ್ಷತೆ, ನೌಕರಶಾಹಿಯ ವಿಳಂಬ ಗತಿಯನ್ನು ಸುಧಾರಿಸಲಾಗದಿರುವುದೇ ನಮ್ಮ ದೇಶ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಇಂದಿಗೂ ಹಿಂದುಳಿದಿರಲು ಕಾರಣ. ಇಸ್ರೇಲ್, ಸ್ವೀಡನ್‌ನಂತಹ ಚಿಕ್ಕ ರಾಷ್ಟ್ರಗಳ ಖಾಸಗಿ ಕಂಪೆನಿಗಳು ಅತ್ಯಾಧುನಿಕ ಆಯುಧಗಳ, ಯುದ್ಧ ವಿಮಾನಗಳ ನಿರ್ಮಾಣ ಕ್ಷೇತ್ರದಲ್ಲಿ ಇಂದು ನಿಪುಣತೆ ಪಡೆದಿವೆ. ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಟಾಟಾ, ಲಾರ್ಸನ್‌ ಅಂಡ್‌ ಟ್ಯೂಬ್ರೋ, ರಿಲಯನ್ಸ್‌ನಂತಹ ಭಾರತೀಯ ಕಂಪೆನಿಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ. ಸಾಫ್ಟ್ವೇರ್‌ ಉದ್ಯಮದಲ್ಲಿ ಭಾರತ ಇಂದು ವಿಶ್ವವೇ ಗುರುತಿಸುವಷ್ಟು ಪ್ರಗತಿ ಸಾಧಿಸಿರುವಂತೆ ಮುಂದಿನ ಒಂದೆರಡು ದಶಕಗಳಲ್ಲಿ ನಮ್ಮ ಖಾಸಗಿ ರಕ್ಷಣಾ ಉದ್ಯಮಗಳು ವಿಕಸನಗೊಳ್ಳುವ ಹೇರಳ ಅವಕಾಶಗಳಿವೆ.

Advertisement

ಸೂಕ್ತ ತಯಾರಿಯಿಲ್ಲದೆ ಎದುರಿಸಬೇಕಾಗಿದ್ದ 1962ರ ಚೀನಾದೊಂದಿಗಿನ ಯುದ್ಧದ ಸೋಲಿನ ನೋವು ಐದು ದಶಕಗಳ ನಂತರವೂ ಭಾರತೀಯರನ್ನು ಕಾಡುತ್ತಿದೆ. ರಕ್ಷಣಾ ಸನ್ನದ್ಧತೆ ಒಂದು ನಿರಂತರ ಪ್ರಕ್ರಿಯೆ ಆಗಿದ್ದು ಚುರುಕು ನಿರ್ಣಯ ಪ್ರಕ್ರಿಯೆಯಿಂದ ಮಾತ್ರ ಅದು ಗತಿಶೀಲವಾಗಿರಲು ಸಾಧ್ಯವಾಗುತ್ತದೆ. ರಾತೋರಾತ್ರಿಯ ತಯಾರಿಯಿಂದ ಸೇನೆ ತನ್ನ ಸಾಮರ್ಥ್ಯ ವರ್ಧಿಸಿಕೊಳ್ಳುವುದು ಸಾಧ್ಯವಿಲ್ಲ. ಸೈನಿಕರ ಕಠಿಣ ತರಬೇತಿಯೊಂದರಿಂದಲೇ ಆಧುನಿಕ ಕ್ಷಿಪ್ರ ಯುದ್ಧದಲ್ಲಿ ಯಶಸ್ಸು ಸಾಧ್ಯವಿಲ್ಲ. ರಕ್ಷಣಾ ಖರೀದಿಯಲ್ಲಿನ ನಿರ್ಧಾರ ರಾಹಿತ್ಯ ಮತ್ತು ಅನಿಶ್ಚಿತ ಸ್ಥಿತಿ ದೇಶದ ರಕ್ಷಣಾ ಸನ್ನದ್ಧತೆಯ ಮೇಲೆ ದೂರಗಾಮಿ ಪರಿಣಾಮವನ್ನು ಬೀರುವುದರ ಕುರಿತು ಯುಪಿಎ ಮೊದಲ ಮತ್ತು ಎರಡನೇ ಅವಧಿಯಲ್ಲೂ ಕಂಡಿದ್ದೇವೆ. ಬೋಫೋರ್ಸ್‌ ಹಗರಣದಿಂದ ಆದ ರಾಜಕೀಯ ನಷ್ಟದಿಂದ ಕಂಗೆಟ್ಟ ಕಾಂಗ್ರೆಸ್‌ 2004-14ರ ಕೇಂದ್ರದಲ್ಲಿನ ತನ್ನ ಅಧಿಕಾರವಧಿಯಲ್ಲಿ ರಕ್ಷಣಾ ಖಾತೆಯನ್ನು ಶುದ್ಧ ಹಸ್ತರೆನ್ನಿಸಿದ್ದ ಎ. ಕೆ. ಆಂಟನಿಯವರಿಗೆ ಒಪ್ಪಿಸಿತ್ತು. ತಮಗೆ ಕಳಂಕ ತಟ್ಟಬಹುದೆಂಬ ಭಯದಲ್ಲಿ ಆಂಟನಿಯವರು ಪ್ರಮುಖ ರಕ್ಷಣಾ ಖರೀದಿಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೇ ದೇಶದ ಸೇನಾ ಪಡೆಗಳ ಸಾಮರ್ಥ್ಯ ಕ್ಷೀಣಿಸುವಂತೆ ಮಾಡಿದರು. ರಕ್ಷಣಾ ಇಲಾಖೆಯಲ್ಲಿ ಒಂದು ದಶಕದವರೆಗೆ ಅನಿಶ್ಚಯ ಮತ್ತು ನಿರ್ಧಾರ ರಹಿತ ಸ್ಥಿತಿ ಮುಂದುವರೆಯಿತು. 

ಚೀನಾದ ಕಡೆಯಿಂದ ಎದುರಾಗಬಹುದಾದ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಈಗಿನ ಸರ್ಕಾರ ಅಮೆರಿಕದಿಂದ ಅಪಾಚೆ ಹೆಲಿಕಾಪ್ಟರ್‌, ಇಸ್ರೇಲ್‌ನಿಂದ ಮಾನವರಹಿತ ಡ್ರೋನ್‌ಗಳು, ರಷ್ಯಾದಿಂದ S-400 ಕ್ಷಿಪಣಿ ಸುರಕ್ಷಾ ವ್ಯವಸ್ಥೆ ಇತ್ಯಾದಿ ಖರೀದಿಗೆ ಮುಂದಾಗಿದೆ. ಒಂದಾದ ಮೇಲೆ ಇನ್ನೊಂದು ಎನ್ನುವಂತೆ ರಕ್ಷಣಾ ಒಪ್ಪಂದ ಹಾಗೂ ಮೇಕ್‌ ಇನ್‌ ಇಂಡಿಯಾ ಮೂಲಕ ಸುದೀರ್ಘ‌ ಕಾಲದಿಂದ ನನೆಗುದಿಗೆ ಬಿದ್ದಿರುವ ಸೈನ್ಯಬಲಗಳ ರಕ್ಷಣೋಪಕರಣ ಖರೀದಿ ಪ್ರಕ್ರಿಯೆಗೆ ವೇಗ ನೀಡಿರುವುದು ಸ್ತುತ್ಯರ್ಹ. ರಫೆಲ್‌ ಯುದ್ಧ ವಿಮಾನಗಳ ಖರೀದಿ ವಾಯುಪಡೆಯ ತತ್‌ಕ್ಷಣದ ಅವಶ್ಯಕತೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ವಾಯುಸೇನೆಯ ಹಾಲಿ ಮುಖ್ಯಸ್ಥರು ಮತ್ತು ನಿವೃತ್ತ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಒಂದು ನಿರ್ದಿಷ್ಟ ಕಂಪೆನಿಯನ್ನು ಏಕೆ ಆಯ್ಕೆ ಮಾಡಲಾಯಿತು ಎಂದು ಪ್ರಶ್ನಿಸುವ ಮೂಲಕ ಪ್ರಧಾನಮಂತ್ರಿಯನ್ನು ಕಳ್ಳ ಎಂದು ದೂಷಿಸುವುದು ಕಾಂಗ್ರೆಸ್‌ ಅಧ್ಯಕ್ಷರಿಗೆ ರಾಜಕೀಯ ಲಾಭ ತಂದುಕೊಡಬಹುದಾದರೂ ಅದರ ಕೆಟ್ಟ ಪರಿಣಾಮ ಯುದ್ಧ ಸಿದ್ಧತೆಯ ಮೇಲಾಗಲಿದೆ ಎನ್ನುವುದು ಗಮನಾರ್ಹ. HAL ಗೆ ಈ ಅವಕಾಶ ಏಕೆ ನೀಡಲಾಗಲಿಲ್ಲ ಎಂದು ದೊಡª ಸ್ವರದಲ್ಲಿ ಪ್ರಶ್ನಿಸುತ್ತಿರುವವರು ತಮ್ಮ ಪಕ್ಷದ ಸುದೀರ್ಘ‌ ಆಡಳಿತಾವಧಿಯಲ್ಲಿ HALಗೆ ಎಷ್ಟು ಮಹತ್ವ ನೀಡಿದ್ದರು ಎನ್ನುವುದನ್ನು ದೇಶ ಚೆನ್ನಾಗಿ ತಿಳಿದಿದೆ. HALನ ಸಾಮರ್ಥ್ಯ ಮತ್ತು ಕಾರ್ಯದಕ್ಷತೆಯ ಕುರಿತು ಏಕಾಏಕಿ ಕಾಂಗ್ರೆಸ್‌ ನಾಯಕರಿಗೆ ಅತಿ ವಿಶ್ವಾಸ ಮೂಡಿರುವುದು ಆಶ್ಚರ್ಯಕರ. ರಿಲಯನ್ಸ್‌ ಈಗಾಗಲೇ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ರಫೆಲ್‌ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಡಸಾಲ್ಟ್ ಕಂಪೆನಿ HAL ಬದಲು ರಿಲಯನ್ಸ್‌ ಅನ್ನು ಏಕೆ ಆಯ್ಕೆ ಮಾಡಿಕೊಂಡಿತು ಎನ್ನುವ ಒಂದೇ ವಿಷಯದ ಆಧಾರದ ಮೇಲೆ ಗಂಬೀರ ಭ್ರಷ್ಟಾಚಾರ ನಡೆದಿದೆ ಎಂದು ಗದ್ದಲವೆಬ್ಬಿಸುವುದರಿಂದ ರಕ್ಷಣಾ ಸಿದ್ಧತೆಯ ಮೇಲೆ ದೂರಗಾಮಿ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ. 

ಬೈಂದೂರು ಚಂದ್ರಶೇಖರ ನಾವಡ 

Advertisement

Udayavani is now on Telegram. Click here to join our channel and stay updated with the latest news.

Next