ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಾ ಜಾರಿ ನಿರ್ದೇಶನಾಲಯದ ಮುಖಾಂತರ ಬಂಧಿಸಿದೆ. ಸರ್ಕಾರದ ಧೋರಣೆ ಖಂಡಿಸಿ ಸೆ.11 ರಂದು ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಒಕ್ಕಲಿಗ ಸಂಘ, ಸಂಸ್ಥೆಗಳ ನೇತೃತ್ವದಲ್ಲಿ ರಾಜ ಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ರಮೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘ, ಸಂಸ್ಥೆಗಳ ಪದಾಧಿಕಾರಿಗಳಾದ ಬಾಲಕುಂಟಹಳ್ಳಿ ಮುನಿಯಪ್ಪ, ಅಡ್ಡಗಲ್ ಶ್ರೀಧರ್ ಸೇರಿದಂತೆ ಮತ್ತಿತರರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು.
ಪ್ರತೀಕಾರ: ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ರಕ್ಷಣೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಇ.ಡಿ. ಮೇಲೆ ಒತ್ತಡ ತಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.
ಇಲಾಖೆಗಳು ದುರ್ಬಳಕೆ: ಬಂಧಿಸಿದ ನಂತರವು ಅವರಿಗೆ ಮೂಲ ಸೌಕರ್ಯ ಒದಗಿಸದೇ ಕಿರುಕುಳ ನೀಡಲಾಗುತ್ತಿದೆ. ಬಿಜೆಪಿ ದ್ವೇಷದ ರಾಜಕಾರಣದ ಮೂಲಕ ತನ್ನ ವಿರೋಧಿ ರಾಜಕೀಯ ಪಕ್ಷಗಳ ನಾಯಕರನ್ನು ದಮನ ಮಾಡಲು ಹೊರಟಿದೆ. ಇದಕ್ಕೆ ಡಿ.ಕೆ.ಶಿವಕುಮಾರ್ ಬಂಧನವೇ ಸಾಕ್ಷಿ, ಹಲವಾರು ಬಾರಿ ಬಿಜೆಪಿ ಸೇರುವಂತೆ ಒತ್ತಡ ಹೇರಿದ್ದ ಡಿ.ಕೆ.ಶಿವಕುಮಾರ್‌ಗೆ ಈಗ ಬಿಜೆಪಿ ನಾಯಕರು ಇಡಿ, ಐಟಿ ಮತ್ತಿತರ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬಾಲಕುಂಟಹಳ್ಳಿ ಮುನಿಯಪ್ಪ ಮಾತನಾಡಿ, ಶ್ರೀನಿವಾಸಗೌಡರೇ ವಿಧಾನಸಭೆಯಲ್ಲಿ ಆಪರೇಷನ್ ಕಮಲದ ಬಗ್ಗೆ ಬಿಜೆಪಿ ನಾಯಕರು ಕೋಟ್ಯಂತರ ರೂ. ಹಣದ ಆಮಿಷ ನೀಡಿರುವ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ. ಆದರೂ ಈ ಬಗ್ಗೆ ಇ.ಡಿ.ಅಧಿಕಾರಿಗಳು ತನಿಖೆ ಮಾಡಲಿಲ್ಲ. ಇ.ಡಿ ಯಲ್ಲಿ ಸುಮಾರು 2000 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದರೂ ಯಾವುದನ್ನು ವಿಚಾರಣೆ ನಡೆಸದೇ ಕೇವಲ ರಾಜಕೀಯ ಕಾರಣಗಳಿಗೆ ಡಿ.ಕೆ.ಶಿವಕುಮಾರ್‌ರನ್ನು ಬಂಧಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷಾತೀತವಾಗಿ ಹೋರಾಟ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಿಂದ ರಾಜ ಭವನದವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಗುವುದು. ಹೋರಾಟವನ್ನು ಪಕ್ಷಾತೀತವಾಗಿ ಹಮ್ಮಿಕೊಳ್ಳಲಾಗಿದೆ.
ಒಕ್ಕಲಿಗ ಸಮುದಾಯದ ವಿವಿಧ ಸಂಘ, ಸಂಸ್ಥೆಗಳು, ಸ್ವಾಮೀಜಿಗಳು, ಮಠಾಧೀಶರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಒಕ್ಕಲಿಗ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ರಾಜಕಿಯ ವೇದಿಕೆ ರಾಜ್ಯಾಧ್ಯಕ್ಷರಾದ ಬಾಲಕುಂಟಹಳ್ಳಿ ಮುನಿಯಪ್ಪ ತಿಳಿಸಿದರು.