ಬೆಳ್ತಂಗಡಿ: ಗೋಕಾಕ ವಿಧಾನ ಸಭಾ ಕ್ಷೇತ್ರದ ಈ ಬಾರಿಯ ಕಾಂಗ್ರೆಸ್ ಪಕ್ಷದ ಪ್ರಭಲ ಆಕಾಂಕ್ಷಿ ಅಶೋಕ ನಿಂಗಯ್ಯ ಸ್ವಾಮಿ ಪೂಜಾರಿ ಗೋಕಕ ಅವರು ಕುಟುಂಬ ಸಮೇತರಾಗಿ ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ಆಗಮಿಸಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಿದ ಪ್ರಸಂಗ ಸೋಮವಾರ ನಡೆಯಿತು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ನನ್ನ ಕುಟುಂಬ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ರಾಜಕಾರಣ ಮಾಡಿ ಬಂದವರು ಎಂದು ಹೇಳಿದರು.
ಮುಂದುವರೆದು, ನಾನು 2008 ಹಾಗೂ 2013 ನೇ ವಿಧಾನ ಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷದಿಂದ 2018 ರಲ್ಲಿ ಬಿಜೆಪಿಯಿಂದ ಬಳಿಕ 2019ರ ಉಪ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೆನು. ಈ ಬಾರಿ ಕಾಂಗ್ರೇಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿರುತ್ತೇನೆ.
ಪದೇ ಪದೇ ಪಕ್ಷ ಬದಲಾವಣೆ ಯಾಕೆ ಮಾಡುತ್ತೇನೆಂದರೆ, ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲೋದು ಹಣ ಬಲ ಮತ್ತು ತೋಳ್ಬಲದಿಂದ ಎಂದ ಅವರು ನಮ್ಮ ಕುಟುಂಬ ಮಧ್ಯಮ ವರ್ಗದ ಕುಟುಂಬ. ನಾನು ಜನರೊಂದಿಗೆ ಬೆರೆತು ಚುನಾವಣೆಯನ್ನು ಎದುರಿಸುವ ಅನಿವಾರ್ಯತೆ ಇದೆ. ಈ ಹಿಂದೆ ಮೂರು ಬಾರಿ ಸ್ಪರ್ಧಿಸುವಾಗಲೂ ಚುನಾವಣೆಯ ಕೊನೆಯ ಘಳಿಗೆಯಲ್ಲಿ ನನ್ನ ವಿರುದ್ದ ವಿರೋಧ ಪಕ್ಷದವರು ಹಾಗೂ ನನ್ನ ಜತೆ ಇದ್ದವರೇ ಗುಲ್ಲು ಎಬ್ಬಿಸಿರುತ್ತಾರೆ ಎಂದು ಹೇಳಿದರು.
ಅಶೋಕ್ ಪೂಜಾರ ಚುನಾವಣೆಯ ಕೊನೆಯವರೆಗೂ ಹೋರಾಟ ಮಾಡುತ್ತಾನೆ. ಕೊನೆಯ ಮೂರು ದಿನಗಳಲ್ಲಿ ಎದುರಾಳಿಯವರೊಂದಿಗೆ ಅಂದರೆ ನನ್ನ ಪ್ರತಿಸ್ಪರ್ಧಿ ರಮೇಶ್ ಜಾರಕಿಹೊಳಿಯವರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಾನೆ ಎಂಬ ಆರೋಪ ನನ್ನ ಮೇಲಿದೆ. 2008 ರಲ್ಲಿ ಪ್ರಾರಂಭವಾದ ಆರೋಪ 2023 ರ ಚುನಾವಣೆಗೂ ಮಾಡುತ್ತಿದ್ದಾರೆ ಎಂದರು.
ನಾನು ನೈತಿಕತೆಯ ರಾಜಕಾರಣ ಮಾಡಿದವನು. ಅದನ್ನು ನನ್ನ ಕ್ಷೇತ್ರದ ಮತದಾರರಿಗೆ ತಿಳಿಸಬೇಕು ಎಂಬ ಕಾರಣದಿಂದ ದೈವೀಶಕ್ತಿ ಮಂಜುನಾಥನ ಮುಂದೆ ತನ್ನ ಕ್ಷೇತ್ರದ ಮತದಾರರ ಎದುರಿನಲ್ಲಿ ನಾನು ನನ್ನ ರಾಜಕೀಯ ಜೀವನದಲ್ಲಿ ಎಂದೂ ಎದುರಾಳಿಯಿಂದ ದುಡ್ಡು ತೆಗೆದುಕೊಂಡು ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂಬುದಾಗಿ ಮಂಜುನಾಥ ದೇವರ ಮುಂದೆ ಆಣೆ ಪ್ರಮಾಣ ಮಾಡಿದ್ದೇನೆ ಎಂದ ಅವರು, ನಾವು ಒಟ್ಟು ಐದು ಮಂದಿ ಕಾಂಗ್ರೇಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ನನ್ನ ಹೋರಾಟ ಹಾಗೂ ಅನುಭವದ ರಾಜಕೀಯದ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ಸಿಗುವ ಭರವಸೆ ಇದೆ ಎಂದು ಹೇಳಿದರು.