ಕೊನೆಗೂ ಭಾರತೀಯರಿಗೆ ಕೋವಿಡ್-19 ವಿರುದ್ಧದ ಲಸಿಕೆ ಲಭ್ಯವಾಗುವ ದಿನಗಳು ಸನ್ನಿಹಿತವಾಗುತ್ತಿವೆ. ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶ ನಾಲಯವು, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸುತ್ತಿರುವ ಆಕ್ಸ್‌ಫರ್ಡ್ ಇನ್‌ಸ್ಟಿಟ್ಯೂಟ್‌ನ ಕೊವಿಶೀಲ್ಡ್ ಲಸಿಕೆ ಮತ್ತು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ದೇಶೀಯ ಲಸಿಕೆ ಕೊವ್ಯಾಕ್ಸಿನ್‌ಗೆ ಅನುಮತಿ ನೀಡಿದೆ. ಪ್ರಸಕ್ತ ಪ್ರಮುಖವಾಗಿ ಕೊವಿಶೀಲ್ಡ್ ಅನ್ನು ಬಳಸಿದರೆ, ಕೊವ್ಯಾಕ್ಸಿನ್ ಅನ್ನು ತುರ್ತು ಸಂದರ್ಭಕ್ಕೆ ಮಾತ್ರ ಬಳಸಲಾಗುತ್ತದೆ ಎನ್ನಲಾಗಿದೆ.
ಇದು ನಿಸ್ಸಂಶಯವಾಗಿಯೂ ಭಾರತೀಯರು ಸಂಭ್ರಮಿಸಬೇಕಾದ ಸಂಗತಿ. ಅತ್ಯಂತ ವೇಗವಾಗಿ ಹರಡುವ ಕೊರೊನಾದಂಥ ವೈರಸ್‌ಗೆ ಲಸಿಕೆ ಕಂಡುಹಿಡಿಯಲು ಸಾಧ್ಯವೇ ಎನ್ನುವ ಪ್ರಶ್ನೆ ಆರಂಭಿಕ ಸಮಯದಲ್ಲಿ ಮೂಡಿತ್ತು. ಒಂದು ವರ್ಗದ ಜಾಗತಿಕ ವೈಜ್ಞಾನಿಕ ವಲಯವೇ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಹೀಗಿರುವಾಗ, ಭಾರತ ಸೇರಿದಂತೆ, ಜಾಗತಿಕ ವಿಜ್ಞಾನಿಗಳ ಅವಿರತ ಪ್ರಯತ್ನದ ಫಲವಾಗಿ ಕೋವಿಡ್ ವಿರುದ್ಧ ಈಗ ಹಲವು ಲಸಿಕೆಗಳು ಸಿದ್ಧವಾಗಿವೆ. ಭಾರತದಲ್ಲೇ 2 ಲಸಿಕೆಗಳು ಲಭ್ಯವಾಗಲಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ಆದರೆ ದುರಂತವೆಂದರೆ, ಲಸಿಕೆಯ ವಿಚಾರದಲ್ಲೂ ನಮ್ಮ ದೇಶದಲ್ಲಿ ರಾಜಕೀಯ ಆರಂಭವಾಗಿರುವುದು. ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್, ತಾವು “ಬಿಜೆಪಿಯ ಲಸಿಕೆ’ಯನ್ನು ಪಡೆಯುವುದಿಲ್ಲ ಎಂಬ ಅತ್ಯಂತ ಬಾಲಿಶ ಹೇಳಿಕೆ ನೀಡಿದರು. ಇದರಿಂದ ತಮ್ಮ ಬೆಂಬಲಿಗರಿಗೆ ಎಂಥ ಋಣಾತ್ಮಕ ಸಂದೇಶ ಹೋಗುತ್ತದೆ ಎನ್ನುವ ಕಿಂಚಿತ್ ಅರಿವಿರಬೇಕಲ್ಲವೇ? ಇದರ ಬೆನ್ನಲ್ಲೇ ಈಗ ಶಶಿ ತರೂರ್, ಜೈರಾಮ್ ರಮೇಶ್ ಸೇರಿದಂತೆ ಕೆಲವು ಹಿರಿಯ ಕಾಂಗ್ರೆಸ್ ನಾಯಕರು, ದೇಶೀಯವಾಗಿ ಅಭಿವೃದ್ಧಿಯಾದ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗದಲ್ಲಿರುವಾಗಲೇ ಅದನ್ನು ಬಳಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಕೊವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗಕ್ಕೆ ನಿಗದಿಯಾದಷ್ಟು ಸ್ವಯಂಸೇವಕರು ಲಭ್ಯರಾಗಿಲ್ಲ ಎನ್ನುವುದು ನಿಜವಾದರೂ ಈ ನಿರ್ಣಾಯಕ ಹಂತದ ಪ್ರಯೋಗದಲ್ಲಿ ಭಾಗವಹಿಸಿದವರಲ್ಲೆಲ್ಲ ಲಸಿಕೆ ಪರಿಣಾಮಕಾರಿತ್ವ ತೋರಿದೆ ಎನ್ನುವುದು ಸಾಬೀತಾಗಿದೆ. ಲಸಿಕೆಯೊಂದು ಜನರ ಆರೋಗ್ಯಕ್ಕೆ ಅಪಾಯಕಾರಿಯಾಗುತ್ತದೆ ಎಂದರೆ ಯಾವ ರಾಷ್ಟ್ರವೂ ಅದರ ಬಳಕೆಗೆ ಅನುಮತಿ ನೀಡುವುದಿಲ್ಲ. ಕೂಲಂಕಷ ಅಧ್ಯಯನ ನಡೆಸಿಯೇ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ ಇಂಥ ನಿರ್ಧಾರಕ್ಕೆ ಬಂದಿರುತ್ತದೆ. ಹೀಗಿರುವಾಗ, ಅದು ಜನಜೀವನದೊಂದಿಗೆ ಆಟವಾಡುವಂಥ ನಿರ್ಣಯಕ್ಕೆ ಬಂದಿರುತ್ತದೆ ಎಂದು ಭಾವಿಸುವುದು ತಪ್ಪು. ಭಾರತ್ ಬಯೋಟೆಕ್‌ವಿಚಾರಕ್ಕೆ ಬರುವುದಾದರೆ, ಜಿಕಾ ವೈರಸ್ ಅನ್ನು ಮೊದಲು ಗುರುತಿಸಿದ, ಜಿಕಾ ಹಾಗೂ ಚಿಕೂನ್‌ಗುನ್ಯಾ ಲಸಿಕೆಗೆ ಮೊದಲು ಜಾಗತಿಕ ಪೇಟೆಂಟ್ ಅರ್ಜಿ ಹಾಕಿದ ಸಂಸ್ಥೆ ಅದು.
ದುರಂತವೆಂದರೆ, ಕೆಲವು ವಿಷಯಗಳಲ್ಲಿ ನಮ್ಮ ರಾಜಕಾರಣಿಗಳ ಅಪ್ರಬುದ್ಧ ವರ್ತನೆ. ಪ್ರಪಂಚದ ಬೇರಾವುದೇ ದೇಶದಲ್ಲೂ ವಿಪಕ್ಷಗಳು ಅಲ್ಲಿ ಬಳಸಲಾಗುವ ಲಸಿಕೆಯನ್ನು “ಆಡಳಿತ ಪಕ್ಷದ’ ಲಸಿಕೆಯೆಂದೋ ಅಥವಾ ವಿಜ್ಞಾನಿಗಳಿಗೆ ಅವಮಾನ ಮಾಡುವ ರೀತಿಯಲ್ಲಿ ಅದರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂಥ ಕೆಲಸ ಮಾಡುತ್ತಿಲ್ಲ. ರಾಜಕಾರಣಿಗಳೆಂದಷ್ಟೇ ಅಲ್ಲ, ಲಸಿಕೆ ಅಭಿವೃದ್ಧಿ ಸಂಸ್ಥೆಗಳ ವರ್ತನೆಯೂ ಸರಿಯಿಲ್ಲ. ಸೀರಂ ಇನ್‌ಸ್ಟಿಟ್ಯೂಟ್‌ನ ಪೂನಾವಾಲಾ, ವಿಶ್ವದಲ್ಲಿ ಕೇವಲ 3 ಲಸಿಕೆಗಳಷ್ಟೇ ಪರಿಣಾಮಕಾರಿ, ಉಳಿದವೆಲ್ಲ ನೀರಿನಷ್ಟೇ ಸುರಕ್ಷಿತ ಎಂದು ಭಾರತ್ ಬಯೋಟೆಕ್‌ಗೆ ಪರೋಕ್ಷ ಮೂದಲಿಸಿರುವುದು, ಇದಕ್ಕೆ ಪ್ರತಿಯಾಗಿ ಭಾರತ್ ಬಯೋಟೆಕ್ ಸಮರ್ಥನೆಗೆ ಮುಂದಾಗುವಂಥ ಪರಿಸ್ಥಿತಿ ಬಂದಿರುವುದು ಬೇಸರದ ಸಂಗತಿ. ಇಂಥ ವಿಚಾರಗಳಲ್ಲಿ ಅನವಶ್ಯಕ ಆರೋಪ, ರಾಜಕೀಯ ಮುಂದುವರಿದರೆ ಜನಸಾಮಾನ್ಯರಲ್ಲಿ ಅತಿಯಾದ ಗೊಂದಲ ಉಂಟಾಗುತ್ತದೆ ಎನ್ನುವುದು ಎಲ್ಲರಿಗೂ ನೆನಪಿರಬೇಕು.