Advertisement

ಗುಜರಾತಲ್ಲಿ ಗರಿಗೆದರಿದ ರಾಜಕೀಯ

06:25 AM Oct 24, 2017 | Team Udayavani |

ಹೊಸದಿಲ್ಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿ, ಗುಜರಾತ್‌ ವೇಳಾ ಪಟ್ಟಿ ಪ್ರಕಟ ಮಾಡದೇ ಇರುವುದನ್ನು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ)ಎ.ಕೆ.ಜೋತಿ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಎದ್ದಿರುವ ಆಕ್ಷೇಪಣೆಗಳಿಗೆ ಮೊದಲ ಬಾರಿಗೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಜೋತಿ ಅವರು, ಹಿಮಾಚಲ ಪ್ರದೇಶದಲ್ಲಿನ ಮೂರು ಜಿಲ್ಲೆಗಳಲ್ಲಿ ಹಿಮಪಾತವಾಗುವುದರಿಂದ ಅಲ್ಲಿ ವೇಳಾಪಟ್ಟಿ ವಿಳಂಬ ಮಾಡದೆ ಪ್ರಕಟಿಸಬೇಕು ಎಂಬ ಮನವಿ ಸಲ್ಲಿಕೆಯಾಗಿತ್ತು. ಹೀಗಾಗಿಯೇ ನವೆಂಬರ್‌ ಮೊದಲ ವಾರದಲ್ಲಿಯೇ ಚುನಾವಣೆ ನಡೆಸಲು ನಿರ್ಧರಿಸಲಾಯಿತು ಎಂದಿದ್ದಾರೆ. 

Advertisement

ಗುಜರಾತ್‌ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೆರೆಪೀಡಿತ ರಾಜ್ಯದಲ್ಲಿ ಪರಿಹಾರ ಕಾಮಗಾರಿಗಳು ಪ್ರಗತಿಯಲ್ಲಿವೆ. ಸರಕಾರಿ ವ್ಯವಸ್ಥೆ ಅದರಲ್ಲಿ ನಿರತವಾಗಿರುತ್ತದೆ. ಮಧ್ಯದಲ್ಲಿ ಚುನಾವಣೆಯೂ ಘೋಷಣೆಯಾದರೆ ಆಡಳಿತ ವ್ಯವಸ್ಥೆ ಚುನಾವಣೆ ಮತ್ತು ಪರಿಹಾರ ಕಾಮಗಾರಿಗಳಲ್ಲಿ ನಿರತವಾಗಿರಬೇಕಾಗುತ್ತದೆ. ಚುನಾವಣಾ ಕರ್ತವ್ಯಕ್ಕೆ ಆಯೋಗ ಸಿಬ್ಬಂದಿ ಪೂರೈಕೆ ಮಾಡದೇ ಇರುವುದರಿಂದ ಸರಕಾರಿ ಅಧಿಕಾರಿಗಳನ್ನೇ ನೆಚ್ಚಿಕೊಂಡಿರಬೇಕಾಗುತ್ತದೆ. ಮಾದರಿ ನೀತಿ ಸಂಹಿತೆ ಜಾರಿಯಾದರೆ ಗುಜರಾತ್‌ನ ಅಧಿಕಾರಿಗಳಿಗೆ ಪರಿಹಾರ ಕಾಮಗಾರಿ ನಡೆಸಲು ಅವಕಾಶ ಇರುವುದಿಲ್ಲ. ಹೀಗಾಗಿ ದಿನಾಂಕ ಘೋಷಣೆ ವಿಳಂಬ ಮಾಡಿದ್ದೇವೆ ಎಂದಿದ್ದಾರೆ.

ಹಿಮಾಚಲ ಪ್ರದೇಶದ ಫ‌ಲಿತಾಂಶ ಆ ರಾಜ್ಯದ ಮೇಲೆ ಪ್ರತಿಕೂಲ ಫ‌ಲಿತಾಂಶ ಬೀಳದಂತೆ ವ್ಯವಸ್ಥೆ ಮಾಡುವುದು ಆಯೋಗದ ಹೊಣೆ ಎಂದೂ ಅವರು ಹೇಳಿದ್ದಾರೆ. 2001ರಲ್ಲಿ ಕಾನೂನು ಮತ್ತು ನ್ಯಾಯ ಖಾತೆ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಸ್ತಾಪಿಸಿದ ಸಿಇಸಿ, ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಯ ಬೇಕಾದ ದಿನಕ್ಕಿಂತ ಮೂರು ವಾರಗಳಿಗಿಂತ ಮೊದಲು ದಿನಾಂಕ ಘೋಷಣೆ ಮಾಡಬೇಕಾ ಗಿಲ್ಲ. ದಿನಾಂಕ ಘೋಷಣೆ ಮಾಡಿದ ದಿನದಿಂದ ಪ್ರಕ್ರಿಯೆ ಮುಕ್ತಾಯವಾಗುವ ವರೆಗೆ  ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದರೆ ಅದೊಂದು ಸವಾಲು ಇರುತ್ತಿತ್ತು. ಆದರೆ ಹಿಮಾಚಲ ಮತ್ತು ಗುಜರಾತ್‌ನಲ್ಲಿ ಅಂಥ ಸಮಸ್ಯೆ ಇಲ್ಲ ಎಂದಿದ್ದಾರೆ.

ಕೈ ಆಯೋಗ
ಕೇಂದ್ರ ಚುನಾವಣಾ ಆಯೋಗವು ಶೀಘ್ರವೇ ಗುಜರಾತ್‌ ಚುನಾವಣಾ ದಿನಾಂಕವನ್ನು ಪ್ರಕಟಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. ಸೋಲಿನ ಭೀತಿ ಯಲ್ಲಿರುವ ಬಿಜೆಪಿ ಚುನಾವಣೆಯಿಂದ ದೂರ ಸರಿಯುತ್ತಿದೆ. ಚುನಾವಣಾ ಆಯೋಗ ಬಿಜೆಪಿ ಪರ ವಹಿಸದೇ, ದಿನಾಂಕ ಘೋಷಣೆ ಮಾಡಿ, ನೀತಿ ಸಂಹಿತೆ ಜಾರಿ ಮಾಡಲಿ ಎಂದು ಪಕ್ಷದ ವಕ್ತಾರ ಮನೀಶ್‌ ತಿವಾರಿ ಸೋಮವಾರ ಆಗ್ರಹಿಸಿದ್ದಾರೆ. ಕಾಂಗ್ರೆಸ್‌ನ ಆರೋಪಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮುಖ್ಯ ಚುನಾವಣಾ ಆಯುಕ್ತ ಜೋತಿ, “ನಾವು ಯಾರನ್ನೂ ಯಾವುದೇ ಘೋಷಣೆ ಮಾಡದಂತೆ ತಡೆಯಲು ಸಾಧ್ಯವಿಲ್ಲ. ಈಗ ರಾಹುಲ್‌ ಗಾಂಧಿ ಗುಜರಾತ್‌ಗೆ ಹೋಗಿಲ್ಲವೇ? ಎಲ್ಲ ರಾಜಕಾರಣಿಗಳಿಗೂ ಗುಜರಾತ್‌ಗೆ ಹೋಗಿ ಮತದಾರರನ್ನು ಸೆಳೆಯುವ ಮುಕ್ತ ಅವಕಾಶವಿದೆ. ದಿನಾಂಕ ಘೋಷಣೆಯಾದ ನಂತರವೇ ನೀತಿ ಸಂಹಿತೆ ಜಾರಿಯಾಗುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next