ಬೆಂಗಳೂರು: ಬೆಳಗ್ಗಿನ ವೇಳೆಗೆ ವಿಮಾನ ನಿಲ್ದಾಣಕ್ಕೆ ಬಾರದಂತೆ ಮುಖ್ಯಮಂತ್ರಿ ಸಹಿತ ಅನೇಕ ಗಣ್ಯರನ್ನು ಪ್ರಧಾನಿ ಕಾರ್ಯಾಲಯ ಮನವಿ ಮಾಡಿತ್ತು. ಹೀಗಿರುವಾಗ ಬಿಜೆಪಿ ನಾಯಕರಿಗಷ್ಟೇ ಅವಕಾಶ ಮಾಡಿಕೊಟ್ಟಿದ್ದರೆ ಎಷ್ಟು ಸಮಂಜಸವಾಗಿರುತ್ತಿತ್ತು? ಹೀಗಾಗಿ ಅವರನ್ನೂ ಬಿಟ್ಟಿಲ್ಲ. ಆದ್ದರಿಂದ ಸಾರ್ವಜನಿಕರು ಮತ್ತು ಕಾರ್ಯಕರ್ತರ ಜತೆಗೆ ಬಿಜೆಪಿ ನಾಯಕರಿದ್ದರು. ಇದು ಪ್ರಧಾನಿ ಕಾರ್ಯಾಲಯದ ಕಾರ್ಯವೈಖರಿ ಹಾಗೂ ಬಿಜೆಪಿ ನಾಯಕರ ನಮ್ರತೆಯನ್ನು ತೋರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್‌ನವರು ಕನಿಷ್ಠವಾದರೂ ಬೆಳೆಯಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವ್ಯಂಗ್ಯವಾಡಿದ್ದಾರೆ.
ಟ್ರೋಲ್ ಪಾರ್ಟಿಯಾದ ಕಾಂಗ್ರೆಸ್ ಪಕ್ಷವು ಎಂದಿನಂತೆ ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡಿದೆ. ಇದರಲ್ಲಿ ಅಸಹಜ ಎನ್ನುವುದೇನೂ ಇಲ್ಲ. ವಂಶವಾಹಿ ಗಣ್ಯತೆ ಮತ್ತು ಸುಳ್ಳು ಅಹಂಕಾರಗಳಿಂದ ಕೂಡಿದ ಪಕ್ಷವು ಕೆಳಕ್ಕೆ ಎಳೆಯುವುದನ್ನು ಬಿಟ್ಟು ಮತ್ತೇನನ್ನೂ ಮಾಡುವುದಿಲ್ಲ. ಪ್ರಧಾನಿಗಳು ನಮ್ಮ ನಾಯಕರು. ವಿಜ್ಞಾನಿಗಳನ್ನು ಅಭಿನಂದಿಸಲು ಅವರು ಬಂದಿದ್ದಾರೆ. ನಾವು ಅವರನ್ನು ಸ್ವಾಗತಿಸಿದ್ದೇವೆ. ಈ ಸಂದರ್ಭದಲ್ಲಿ ನಾವು ಸಾಮಾನ್ಯ ಜನರಾಗಲು ಸಿದ್ಧರಿರುತ್ತೇವೆ. ನಮಗೆ ಯಾವುದೇ ಅಂಜಿಕೆ, ಪೊಳ್ಳು ಅಹಂಕಾರಗಳಿಲ್ಲ. ಯಾರು ಮೊದಲು ಅಭಿನಂದಿಸಬೇಕೆಂಬ ಸ್ಪರ್ಧೆ ಇಲ್ಲಿನ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ನಡೆದಿದೆ ಎಂದು ಸಂತೋಷ್ ಹೇಳಿದ್ದಾರೆ.
ಕಾಂಗ್ರೆಸ್‌ಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದದ್ದು ಚಂದ್ರಯಾನದ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದರೂ ನಮ್ಮ ಪಕ್ಷದ ಮುಖಂಡರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಭಾಗಿ ಯಾಗಿ ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು ಹುಡುಕಲೆತ್ನಿಸಿರುವ ನಿಮಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು ಎಂದು ಬಿಜೆಪಿ ಟ್ವೀಟ್ ಮಾಡಿದೆ.
“ಕಾಮಾಲೆ ಕಣ್ಣಿನವರಿಗೆ ಕಾಣುವು ದೆಲ್ಲ ಹಳದಿಯೇ’ ಎಂಬಂತೆ ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಂತೆ ಸೇವೆ ಮಾಡುವ ಕಾಂಗ್ರೆಸಿಗರಿಗೆ ಪ್ರಧಾನಿಗಳ ಅಧಿಕೃತ ಭೇಟಿಗೂ, ಅನೌಪಚಾರಿಕ ಭೇಟಿಗೂ ವ್ಯತ್ಯಾಸ ತಿಳಿದಿಲ್ಲ.
ತಮ್ಮ ಮೋಜಿಗಾಗಿ ಲಕ್ಷದ್ವೀಪಕ್ಕೆ ತೆರಳಲು ಸೇನಾ ನೌಕೆ ಬಳಸುತ್ತಿದ್ದವರು ಬಿಟ್ಟುಹೋದ ಸಂಸ್ಕಾರದಲ್ಲಿ ಬೆಳೆದ ವರಿಗೆ ಇವು ಅರ್ಥ ಆಗದು. ಅಂದ ಹಾಗೆ ಮಲ್ಲಿಕಾರ್ಜುನ ಖರ್ಗೆಗೆ ಗಾಂಧಿ ಕುಟುಂಬ ಕೊಟ್ಟಿರುವ ಮರ್ಯಾದೆ ಯನ್ನು ಕರ್ನಾಟಕ ನೋಡಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.