Advertisement

Politics Discussion: ದಿಲ್ಲಿಯಲ್ಲಿ ಜೆಡಿಎಸ್‌ ಶಾಸಕರು-ಡಿ.ಕೆ.ಶಿವಕುಮಾರ್‌ ಮುಖಾಮುಖಿ

02:28 AM Jan 08, 2025 | Team Udayavani |

ಬೆಂಗಳೂರು: ಹೊಸದಿಲ್ಲಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಜೆಡಿಎಸ್‌ ಶಾಸಕರಾದ ಬಂಡೆಪ್ಪ ಕಾಶೆಂಪುರ, ಸಾ.ರಾ. ಮಹೇಶ್‌ ಮುಖಾಮುಖಿಯಾಗಿದ್ದು, ಕೆಲ ಕಾಲ ಪ್ರತ್ಯೇಕವಾಗಿ ಚರ್ಚಿಸಿರುವುದು ಜೆಡಿಎಸ್‌ ವಲಯದಲ್ಲಿ ಹಲವು ಚರ್ಚೆಗೆ ಕಾರಣವಾಗಿದೆ.

Advertisement

ಜೆಡಿಎಸ್‌ ಶಾಸಕರನ್ನು ಕಾಂಗ್ರೆಸ್‌ ಪಕ್ಷವು ತನ್ನತ್ತ ಸೆಳೆಯುತ್ತಿದೆ, ಆಪರೇಷನ್‌ ಹಸ್ತ ನಡೆಯುತ್ತಿದೆ ಎಂದು ಇತ್ತೀಚೆಗಷ್ಟೇ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಏತನ್ಮಧ್ಯೆ, ದಿಲ್ಲಿಯಲ್ಲಿ ಜೆಡಿಎಸ್‌ ಶಾಸಕರು-ಡಿಸಿಎಂ ಭೇಟಿ ಕುತೂಹಲ ಹುಟ್ಟಿಸಿದೆ.

ವಿದೇಶ ಪ್ರವಾಸ ಮುಗಿಸಿ ನೇರ ದಿಲ್ಲಿಗೆ ತೆರಳಿ ಅಲ್ಲೇ ಬೀಡು ಬಿಟ್ಟಿರುವ ಡಿಸಿಎಂ ಶಿವಕುಮಾರ್‌ ಅವರು ಮಂಗಳವಾರ ಕರ್ನಾಟಕ ಭವನದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರೊಂದಿಗೆ ಸಭೆ ನಡೆಸಿ ಹೊರಬಂದರು. ಅದೇ ವೇಳೆಗೆ ಜೆಡಿಎಸ್‌ನ ಮುಖಂಡರಾದ ಬಂಡೆಪ್ಪ ಕಾಶೆಂಪೂರ, ಸಾ.ರಾ. ಮಹೇಶ್‌ ಸಹ ಕರ್ನಾಟಕ ಭವನ ಪ್ರವೇಶಿಸಿದರು. ಪರಸ್ಪರ ಮುಖಾಮುಖಿಯಾದ ನಾಯಕರು ಕೆಲ ಕಾಲ ಉಭಯ ಕುಶಲೋಪರಿ ಮಾತನಾಡಿದರು.

ಮೂಲೆಯಲ್ಲಿ ನಿಂತು ಗೌಪ್ಯ ಮಾತು
ಸುತ್ತಮುತ್ತ ಇದ್ದವರನ್ನೆಲ್ಲ ದೂರ ಕಳುಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಜೆಡಿಎಸ್‌ನ ಶಾಸಕದ್ವಯರನ್ನು ಕರೆದೊಯ್ದು ಕರ್ನಾಟಕ ಭವನದ ಮೂಲೆಯಲ್ಲಿ ನಿಲ್ಲಿಸಿಕೊಂಡು 15-20 ನಿಮಿಷಗಳ ಕಾಲ ಸಮಾಲೋಚನೆಯಲ್ಲಿ ತೊಡಗಿದರು. ಈ ಗೌಪ್ಯ ಮಾತುಕತೆ ಕುರಿತು ಪ್ರತಿಕ್ರಿಯಿಸಿದ ಬಂಡೆಪ್ಪ ಕಾಶೆಂಪುರ, ನಾವು ತಿಂಡಿ ತಿಂದು ಹೊರಬರುವಾಗ ಶಿವಕುಮಾರ್‌ ಸಿಕ್ಕಿದರು. ಅವರು ನಮ್ಮ ರಾಜ್ಯದ ಉಪ ಮುಖ್ಯಮಂತ್ರಿ. ಹಾಗಾಗಿ ಉಭಯ ಕುಶಲೋಪರಿ ನಡೆಸಿದೆವು.

Advertisement

ಅವರಿಗೆ ದಿಲ್ಲಿಯಂತೆ ಕರ್ನಾಟಕದಲ್ಲೂ ಗ್ಯಾರಂಟಿ ಹೆಚ್ಚಿಸಿ ಎಂದು ಒತ್ತಾಯಿಸಿದೆ ಎಂದಷ್ಟೇ ಹೇಳಿದರು. ಡಿಸಿಎಂ ಜತೆಗೆ ಶಾಸಕರು ನಡೆಸಿದ ಪಿಸುಮಾತು ಜೆಡಿಎಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದು ಸಹಜ ಭೇಟಿಯೋ ಅಥವಾ ಬೇರೆ ಬೆಳವಣಿಗೆಗೆ ನಾಂದಿಯೋ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next