Advertisement

Politics: ಸಿದ್ದರಾಮಯ್ಯ ಶಾಸಕ ಸ್ಥಾನ ರದ್ದು ಆಗ್ರಹಿಸಿ BJP ಮನವಿ

11:19 PM Sep 22, 2023 | Team Udayavani |

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದ್ದ ವರುಣಾ ಕ್ಷೇತ್ರದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಚುನಾವಣ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ.

Advertisement

ಶುಕ್ರವಾರ ಆಯೋಗ ಕಚೇರಿಗೆ ಭೇಟಿ ನೀಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ ನೇತೃತ್ವದ ನಿಯೋಗವು ಈ ದೂರು ಸಲ್ಲಿಸಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆ ವೇಳೆ ವರುಣಾ ಕ್ಷೇತ್ರದಲ್ಲಿ ಸಾವಿರಾರು ಕುಕ್ಕರ್‌, ಇಸಿŒ ಪೆಟ್ಟಿಗೆಗಳನ್ನು ಹಂಚಿಕೆ ಮಾಡಿದ್ದು ಗೆಲುವಿಗೆ ಸಹಕಾರಿಯಾಗಿದೆ ಎಂಬ ಅಘಾತಕಾರಿ ಹೇಳಿಕೆ ನೀಡಿದ್ದಾರೆ. ಇದು ಚುನಾವಣ ಅಕ್ರಮವನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ಇಂತಹ ನೀಚ ಮತ್ತು ಮೋಸದ ಮಾರ್ಗದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖೀಸಿದೆ.

ಚುನಾವಣೆ ಸಂದರ್ಭದಲ್ಲಿ ಉಡುಗೊರೆ ನೀಡುವುದು ಕ್ರಿಮಿನಲ್‌ ಅಪರಾಧವಾಗಿದ್ದು ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ  ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಲ್ಲಿ ಕೋರಲಾಗಿದೆ. ಅದೇ ರೀತಿ ಭ್ರಷ್ಟಾಚಾರದ ಮೂಲಕ ಸಿದ್ದರಾಮಯ್ಯ ಗೆಲುವು ಸಾಧಿಸಿರುವುದರಿಂದ ಅವರ ಶಾಸಕ ಸ್ಥಾನವನ್ನು ಆಯೋಗಕ್ಕೆ ಇರುವ ಪರಮಾಧಿಕಾರವನ್ನು ಬಳಸಿ ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ ಅವರೂ  ಈ ನಿಯೋಗದಲ್ಲಿದ್ದರು.

Advertisement

“ಚುನಾವಣೆಗಾಗಿ ಕುಕ್ಕರ್‌ ಕೊಟ್ಟಿದ್ದಾರೆಂದು ಹೇಳಿಲ್ಲ”

ಮೈಸೂರು: ಮಡಿವಾಳ ಸಮುದಾಯಕ್ಕೆ ಕುಕ್ಕರ್‌ ಹಾಗೂ ಇಸ್ತ್ರಿಪೆಟ್ಟಿಗೆ ವಿತರಣೆ ವಿಚಾರದಲ್ಲಿ ತನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಪುತ್ರ, ಮಾಜಿ ಶಾಸಕ ಡಾ| ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ನಾನು ಹೇಳಿರುವುದೇ ಒಂದು, ಮಾಧ್ಯಮಗಳು ತೋರಿಸುತ್ತಿರುವುದೇ ಇನ್ನೊಂದು. ಚುನಾವಣೆಗಾಗಿ ಸಿದ್ದರಾಮಯ್ಯ ಕುಕ್ಕರ್‌ ಕೊಟ್ಟಿದ್ದಾರೆ ಎಂದು ಎಲ್ಲೂ ನಾನು ಹೇಳಿಲ್ಲ.  ನನ್ನ ಹೇಳಿಕೆ ಆ ರೀತಿಯ ಅರ್ಥವನ್ನು ಕೊಟ್ಟಿರಬಹುದು. ಆದರೆ ಈ ಘಟನೆ ನಡೆದಿರುವುದು ಚುನಾವಣೆ ನೀತಿ ಸಂಹಿತೆಗೂ ಮೊದಲು. ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರ ಹುಟ್ಟುಹಬ್ಬದ ಪ್ರಯಕ್ತ ಜ.26 ರಂದು ವಿತರಿಸಲಾಗಿತ್ತು. ನನ್ನ ತಂದೆ ಸ್ವತಃ ಅವರ ಕೈಯಿಂದ ಹಣ ಕೊಟ್ಟಿಲ್ಲ. ಆದರೆ, ಮಾಧ್ಯಮದಲ್ಲಿ ಚುನಾವಣೆಗಾಗಿ ಹಂಚಿಕೆ ಮಾಡಲಾಗಿದೆ ಎಂದು ಬರುತ್ತಿದೆ. ಆ ಕಾರ್ಯಕ್ರಮದ ವೀಡಿಯೋ, ಫೋಟೋಗಳೂ ಇವೆ ಎಂದು ಯತೀಂದ್ರ ಶುಕ್ರವಾರ  ಸುದ್ದಿಗಾರರಿಗೆ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next