ಪಾಂಡವಪುರ: ತಮ್ಮ ಜಮೀನು ಅಳತೆ ಮಾಡಿ ಹದ್ದುಬಸ್ತು ಮಾಡಿಕೊಡಲು ರಾಜಕಾರಣಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ತಾಲೂಕಿನ ಕೆಂಚನಹಳ್ಳಿ ಗ್ರಾಮದ ರೈತ ಕುಳ್ಳೇಗೌಡ ಅಳಲು ವ್ಯಕ್ತಪಡಿಸಿದ್ದಾರೆ.
ಕೆಂಚನಹಳ್ಳಿ ಗ್ರಾಮದ ಸರ್ವೆ ನಂಬರ್ 9/14ರಲ್ಲಿ 3 ಕುಂಟೆ ಮತ್ತು 9/2ರಲ್ಲಿ 3 ಕುಂಟೆ ಜಮೀನನ್ನು ಕುಳ್ಳೇಗೌಡ ಅವರ ತಂದೆ ಮರಿಬೆಟ್ಟೇಗೌಡ ಅವರು 1953ರಲ್ಲಿ ಖರೀದಿ ಮಾಡಿದ್ದು, ಇಂದಿಗೂ ಸದರಿ ಜಮೀನಿನ ಆರ್‌ಟಿಸಿ ಕುಳೇಗೌಡರ ಹೆಸರಲ್ಲಿದೆ. ಆದಾಗ್ಯೂ ಜಮೀನು ಪಕ್ಕದವರಾದ ಬೋರೇಗೌಡ ಮತ್ತು ಜವರೇಗೌಡ ಎಂಬವರು ತಮ್ಮ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕುಳ್ಳೇಗೌಡ ದೂರಿದ್ದಾರೆ.
ಅಳತೆ ಕಾರ್ಯ ನಡೆಯುತ್ತಿಲ್ಲ: ಈಗಾಗಲೇ ಹಲವಾರು ಬಾರಿ ಅಳತೆ ಮಾಡಲು ಸರ್ವೆ ಇಲಾಖೆಯಲ್ಲಿ ಹಣ ಕಟ್ಟಿದ್ದು, ಅಳತೆ ಮಾಡಲು ಬಂದಾಗಲೆಲ್ಲ ಅಧಿಕಾರಿಗಳಿಗೆ ರಾಜಕಾರಣಿಗಳು ಬೆದರಿಸಿ ಕಳಿಸಿದ್ದಾರೆ. ಇಂದಿಗೂ ಇದೇ ನಡವಳಿಕೆ ನಡೆಯುತ್ತಿದ್ದು, ಸರ್ವೆ ಮಾಡಲು ಬರುವ ಸರ್ಕಾರಿ ಅಧಿಕಾರಿಗಳಿಗೆ ಧಮಕಿ ಹಾಕುವುದು ಮತ್ತು ಅಳತೆ ಮಾಡಿದರೆ ವಿಷ ಕುಡಿದು ಸಾಯುತ್ತೇವೆ ಎಂದು ಬಾಜುದಾರರು ಬೆದರಿಸುವ ಕಾರಣ ಹತ್ತಾರು ವರ್ಷಗಳಿಂದ ಅಳತೆ ಕಾರ್ಯ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ವೆ ಮಾಡದಂತೆ ಒತ್ತಡ: ಅಕ್ಟೋಬರ್ 22ರಂದು ಕೆಂಚನಹಳ್ಳಿ ಗ್ರಾಮದ ಸರ್ವೆ ನಂಬರ್, 9/14 ಮತ್ತು 9/2 ರ ಜಮೀನು ಅಳತೆ ಮಾಡಲು ಪೊಲೀಸ್ ಬಂದೋಬಸ್ತ್ನಲ್ಲಿ ಬಂದ ಸರ್ವೆ ಅಧಿಕಾರಿಗಳಿಗೆ ಬಾಜುದಾರರು ವಿಷ ಕುಡಿಯುವ ಹುಸಿ ಬೆದರಿಕೆ ಹಾಕಿದ ಕೂಡಲೇ ಸರ್ವೆ ಕಾರ್ಯ ಸ್ಥಗಿತಗೊಳಿಸಲಾಯಿತು. ಜತೆಗೆ ಸರ್ವೆ ಅಧಿಕಾರಿಗಳಿಗೆ ಪದೇಪದೇ ಸ್ಥಳೀಯ ರಾಜಕಾರಣಿಗಳು ಫೋನ್ ಮಾಡಿ ಸರ್ವೆ ಮಾಡದಂತೆ ಒತ್ತಡ ಹಾಕಿದ ಪರಿಣಾಮದಿಂದಲೂ ಸರ್ವೆ ಕಾರ್ಯ ಸ್ಥಗಿತ ಮಾಡಿದರು ಎಂದು ಆರೋಪಿಸಿದ್ದಾರೆ.
ಅಳತೆ ಮಾಡಲು ಸರ್ವೆ ಅಧಿಕಾರಿಗಳು ಒಪ್ಪಿದ್ದರೂ ಸಹ ಬಾಜುದಾರರು ಕಬ್ಬು ಬೆಳೆದಿದ್ದೇವೆ.ಒಳಗೆ ಅಳತೆ ಮಾಡಲು ಬರಬೇಡಿ ಎಂದಿದ್ದಾರೆ. 2 ತಿಂಗಳ ಸಸಿ ಅಳತೆ ಅಡ್ಡಿಯಾಗುವುದಿಲ್ಲ ಎಂದುಸರ್ವೆ ಅಧಿಕಾರಿಗಳು ಹೇಳಿದರೂ, ಅವರ ಮಾತಿಗೆ ಬಾಜುದಾರರು ಬೆಲೆ ಕೊಡದೆ ಸರ್ವೆ ಕಾರ್ಯ ಸ್ಥಗಿತಗೊಳಿಸಿದ್ದಾರೆ. ತಾಲೂಕು ಆಡಳಿತ ಇಂತಹ ಸಣ್ಣ ಪುಟ್ಟ ಕಾರ್ಯಗಳಿಗೂ ತೊಡ ಕುಂಟು ಮಾಡಿದರೆ ಬಡ ರೈತರ ಪಾಡೇನು ಎಂದು ಪ್ರಶ್ನಿಸಿದ ಅವರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕೂಡಲೇ ನಮ್ಮ ಜಮೀನು ಹದ್ದುಬಸ್ತು ಮಾಡಿಕೊಡುವಂತೆ ಅವರು ಒತ್ತಾಯಿಸಿದ್ದಾರೆ.