ವಿಧಾನಸಭೆ: ರಾಜಕಾರಣಿಗಳು ಲಂಚ ತಿನ್ನುವುದನ್ನು ಕಡಿಮೆ ಮಾಡಿದರೆ ರಾಜ್ಯದ ಸಾಲದ ಹೊರೆ ಕಡಿಮೆಯಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಜೆಟ್‌ನಲ್ಲಿ ಸಮಗ್ರವಾಗಿ ಚಿಂತನೆ ಬರಬೇಕು. ಚುನಾವಣೆ ಬಂದ ಸಂದರ್ಭ ಜನಪ್ರಿಯ ಬಜೆಟ್ ಕೊಡುವುದು ಸಾಮಾನ್ಯವಾಗಿದೆ. ಜನಪ್ರಿಯ ಬಜೆಟ್ ಕೊಟ್ಟವರು ಜಯಗಳಿಸಿದ್ದು ಯಾರೂ ಇಲ್ಲ. ಈಗ ಜಯ ಗಳಿಸಲು ಕೊನೆಯ 15 ದಿನ ಸಾಕು. ಈಗ ಜನ ಗಾಳಿ ನೋಡುತ್ತಾರೆ. ರಾಜಕಾರಣಿಗಳು ತಿನ್ನುವುದು ಕಡಿಮೆ ಮಾಡಬೇಕು. ಆಗ ರಾಜ್ಯದ ಸಾಲ ಕಡಿಮೆ ಆಗುತ್ತದೆ. ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದೇನೆ. ಮುಂದೆ ಮಂತ್ರಿ ಆಗುತ್ತೇನೆ ಇಲ್ಲವೋ. ಸಾವಿರಾರು ಕೋಟಿ ಲೂಟಿ ಮಾಡುವುದು.
ದೊಡ್ಡ ದೊಡ್ಡ ಮನೆ ಕಟ್ಟುವುದು. ಐಷಾರಾಮಿ ಜೀವನ ಮಾಡುವುದು. ಈ ವ್ಯವಸ್ಥೆಯಲ್ಲಿ ಕರ್ನಾಟಕ ಬಿಹಾರಕ್ಕಿಂತ ಕೆಟ್ಟ ಪರಿಸ್ಥಿಗೆ ಹೋಗಿದೆ ಎಂದು ಆರೋಪ ಮಾಡಿದರು.
ಬಜೆಟ್‌ನಲ್ಲಿ ಗೋ ಸಂಪತ್ತು ರಕ್ಷಣೆಗೆ ಹೆಚ್ಚು ಅನುಕೂಲ ಮಾಡುವ ಕೆಲಸ ಮಾಡಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಸಿಎಂ ಬೊಮ್ಮಾಯಿ ಕುರಿಗಾರರ ಪರ ಘೋಷಣೆ ಮಾಡಿದ್ದಾರೆ. ಇದು ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಬಜೆಟ್ ಆಗಿದೆ. ನನಗೆ ಆತಂಕ ಇರುವುದು ಬಜೆಟ್‌ನಲ್ಲಿ ಆಗಿರುವುದು ಅನುಷ್ಟಾನ ಆಗಬೇಕು. ಘೋಷಣೆಗೆ ಮಾತ್ರ ಸೀಮಿತ ಆಗಬಾರದು. ಅತಿ ಅಶಿಸ್ತಿನ ಇಲಾಖೆ ಅಂದರೆ ಹಣಕಾಸು ಇಲಾಖೆ. ಯಾರು ಸಿಎಂ ಆಗಿದ್ದಾರೆ ಅವರಿಗೆ ಹೆಚ್ಚಿನ ಹಣ ಕೊಡುತ್ತಾರೆ. ಶಾಸಕರು ಹೋದರೆ ಅವರನ್ನು ಆರ್ಥಿಕ ಇಲಾಖೆ ಕೂರುವುದಕ್ಕೂ ಹೇಳುವುದಿಲ್ಲ. ಹಣವನ್ನು ಬಿಡುಗಡೆ ಮಾಡುವುದಿಲ್ಲ ಎಂದರು.
ಮುಖ್ಯಮಂತ್ರಿ ಆದವರು ಇಡೀ ರಾಜ್ಯದ ಸಿಎಂ ಆಗಿ ಕೆಲಸ ಮಾಡಬೇಕು. ಜಿಲ್ಲೆಗೆ ಸೀಮಿತವಾಗಿ ಕೆಲಸ ಮಾಡಬಾರದು. ನನ್ನ ಜಿಲ್ಲೆಗೆ ಎಲ್ಲಾ ಆಗಬೇಕು. ವಿಮಾನ ನಿಲ್ದಾಣ ನಮ್ಮ ಜಿಲ್ಲೆಗೇ ಆಗಬೇಕು, ಮೆಡಿಕಲ್ ಕಾಲೇಜು ನಮಗೇ ಆಗಬೇಕು, ಕೃಷಿ ವಿವಿ ನಮ್ಮ ಜಿಲ್ಲೆಗೆ ಆಗಬೇಕು. ಎಲ್ಲವೂ ನಮ್ಮ ಜಿಲ್ಲೆಗೆ ಆಗಬೇಕು ಎಂದು ತಾರತಮ್ಯ ಮಾಡಬಾರದು ಎಂದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಆರೋಪ ಮಾಡಿದರು.
ಯುಪಿ ಮಾದರಿ ಬುಲ್ಡೋಜರ್ ಹೊಡೆಸಿ:
ಗೋರಕ್ಷಕರು ಹಾಗೂ ಹಿಂದುಗಳ ಹತ್ಯೆ ಮಾಡುವ ಗೂಂಡಾಗಳನ್ನು ಯುಪಿ ಮಾದರಿಯಲ್ಲಿ ಗೂಂಡಾ ಕಾಯ್ದೆಯಲ್ಲಿ ಬಂಧಿಸಿ ಅವರ ಆಸ್ತಿಯನ್ನು ಬುಲ್ಡೋಜರ್ ಹೊಡೆಸಿ ಮುಟ್ಟುಗೋಲು ಹಾಕಿಕೊಳ್ಳಬೇಕು.
ರಾಜ್ಯದಲ್ಲಿ ಹಿಂದೂ ದೇಗುಲಗಳ ಮೇಲೆ ಮಾತ್ರ ನಿಯಂತ್ರಣವಿದೆ. ಚರ್ಚ್, ಮಸೀದಿಗಳ ಮೇಲೆ ನಿಯಂತ್ರಣ ಇಲ್ಲ. ನಮ್ಮಸರ್ಕಾರ ಅದನ್ನ ತೆಗೆದು ಹಾಕಿದೆ. ಮೆಕ್ಕಾ, ಮಸೀದಿಗೆ ಹೋಗುವವರಿಗೆ ಲಕ್ಷಗಟ್ಟಲೆ ಹಣ ಕೊಡುತ್ತಿದ್ದರು. ಕಾಶಿ ಯಾರ್ತಾರ್ಥಿಗಳಿಗೆ ಈಗ 5 ಸಾವಿರ ಕೊಡುವುದಾಗಿ ಹೇಳಿದ್ದಾರೆ. ಅಷ್ಟೇ ಹಣ ಸಾಲುವುದಿಲ್ಲ. ಹೆಚ್ಚಿನ ಹಣ ನೀಡಬೇಕೆಂದು ಯತ್ನಾಳ್ ಆಗ್ರಹಿಸಿದರು.