Advertisement

ರಾಜಕಾರಣಿಗಳು ಪಂಚರ್‌ ಅಂಗಡಿಯವರಂತೆ!

11:44 AM Aug 28, 2017 | Team Udayavani |

ಬೆಂಗಳೂರು: “ಬಹುತೇಕ ರಾಜಕಾರಣಿಗಳು ಪಂಚರ್‌ ಅಂಗಡಿಯವರಿದ್ದಂತೆ. ತಾವೇ ರಸ್ತೆಯಲ್ಲಿ ಮೊಳೆ ಹಾಕಿ ವಾಹನಗಳು ಪಂಚರ್‌ ಆಗುವಂತೆ ಮಾಡಿ, ನಂತರ ಪಂಚರ್‌ ಹಾಕಿ ಉಪಕಾರ ಮಾಡಿದವರಂತೆ ವರ್ತಿಸುತ್ತಾರೆ,’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನಿಶ್‌ ಸಿಸೋಡಿಯಾ ಹೇಳಿದ್ದಾರೆ.

Advertisement

ಬೆಂಗಳೂರಲ್ಲಿ ಆಮ್‌ ಆದ್ಮಿ ಪಕ್ಷ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಹುತೇಕ ರಾಜಕಾರಣಿಗಳು ಸರ್ಕಾರದಿಂದ ಜನ ಸಾಮಾನ್ಯರಿಗೆ ಸುಲಭವಾಗಿ ಸಿಗಬೇಕಾದ ಸೌಲಭ್ಯಗಳು ಸಿಗದಂತೆ ಮಾಡಿ, ನಂತರ ಸೌಲಭ್ಯ ಕೊಡಿಸಲು ತಾವು ಕಷ್ಟ ಪಟ್ಟಂತೆ ತೋರಿಸಿಕೊಂಡು ಜನಮನ್ನಣೆ ಗಳಿಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ. 

ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪರೇಡ್‌ ನಡೆಯುತ್ತದೆ. ನಮ್ಮ ಸೇನಾ ಸಾಮರ್ಥ್ಯ ಪ್ರದರ್ಶಿಸುತ್ತೇವೆ. ಆದರೆ, ನಮ್ಮ ಪ್ರಜಾಪ್ರಭುತ್ವ ಬಿಂಬಿಸುವ ಯಾವುದೇ ಸ್ಥಬ್ದ ಚಿತ್ರ ಇರುವುದಿಲ್ಲ. ಸರ್ಕಾರದ ಭವಿಷ್ಯದ ದೃಷ್ಠಿಕೋನವನ್ನು ಬಿಂಬಿಸುವ ಪ್ರಯತ್ನ ಯಾರೂ ಮಾಡುವುದಿಲ್ಲ ಎಂದರು.

ದೆಹಲಿಯಲ್ಲಿ ಆಪ್‌ ಸರ್ಕಾರ ಬಜೆಟ್‌ಗೂ ಮೊದಲು ಜನ ಸಾಮಾನ್ಯರ ಅಭಿಪ್ರಾಯ, ವಿಧಾನಸಭಾ ಕ್ಷೇತ್ರವಾರು ಜನರು ಸೂಚಿಸಿರುವ ಯೋಜನೆಗಳಿಗೆ ಮಾತ್ರ ಹಣ ಖರ್ಚು ಮಾಡಲು ಪ್ರತಿ ವಿಧಾನ ಸಭಾ ಕ್ಷೇತ್ರಗಳಿಗೆ 20 ಲಕ್ಷ ರೂಪಾಯಿ ಮೀಸಲಿಡಲು ತೀರ್ಮಾನಿಸಿದೆವು. ಸರ್ಕಾರದ ಈ ಯೋಜನೆಗೆ ಲೆಪ್ಟಿನೆಂಟ್‌ ಗೌರ್ನರ್‌ ಅನುಮತಿ ಕೊಡಲಿಲ್ಲ. ಅದರ ಪರಿಣಾಮವಾಗಿ ಯೋಜನೆ ಜಾರಿಯಾಗಲಿಲ್ಲ ಎಂದರು. 

ರಾಜ್ಯದಲ್ಲಿ ಆಪ್‌ ಪಕ್ಷವನ್ನು ಬಲ ಪಡಿಸಲು ಆಪ್‌ ನಾಗರಿಕ ಸಬಲೀಕರಣ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮ್ಮ ಪಕ್ಷದ ತರಬೇತಿ ಪಡೆದ ಕಾರ್ಯಕರ್ತರು ಸರ್ಕಾರ ಮತ್ತು ಜನ ಸಾಮಾನ್ಯರ ನಡುವೆ ಸೇತುವೆಯಾಗಿ ನಿಂತು ಸರ್ಕಾರ ಮಟ್ಟದಲ್ಲಿ ಜನ ಸಾಮಾನ್ಯರ ಕೆಲಸಗಳನ್ನು ಮಾಡಿ ಕೊಡುತ್ತಾರೆ. ಎಲ್ಲಿಯೂ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಬಾರದು ಎನ್ನುವುದು ನಮ್ಮ ಪಕ್ಷದ ಉದ್ದೇಶ ಎಂದರು.

Advertisement

ಡೇರಾ ಸಚ್ಚಾ ವಿವಾದ ಆತಂಕಕಾರಿ: ಪಂಜಾಬ್‌, ಹರಿಯಾಣಗಳಲ್ಲಿ ನಡೆಯುತ್ತಿರುವ ಡೇರಾ ಸಚ್ಚಾ ಹಿಂಸಾಚಾರ ಆತಂಕಕಾರಿಯಾಗಿದೆ. ಪಂಜಾಬ್‌ ಹರಿಯಾಣ ಮಾತ್ರವಲ್ಲದೇ ದೆಹಲಿಯಲ್ಲಿಯೂ ಆತಂಕದ ವಾತಾವರಣ  ನಿರ್ಮಾಣವಾಗಿದೆ. ಕೋರ್ಟ್‌ ಆದೇಶವನ್ನೇ ಪಾಲಿಸುವುದಿಲ್ಲ ಎಂದರೆ ಯಾರನ್ನ ಕೇಳುವುದು.

ಹರಿಯಾಣ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಕೇಂದ್ರ ಸರ್ಕಾರ ಜವಾಬ್ದಾರಿ ತೆಗೆದುಕೊಂಡು ಪರಿಸ್ಥಿತಿ ನಿಯಂತ್ರಿಸಬೇಕು. ಹರಿಯಾಣದಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದಕ್ಕಿಂತ ಪ್ರಜಾಪ್ರತಿನಿಧಿ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸುವಂತೆ ಮಾಡಬೇಕು ಎಂದರು. 

ಸಂಡೆ ರಾಜಕಾರಣ ನಿರುಪಯುಕ್ತ!
ಆಮ್‌ ಆದ್ಮಿ ಪಕ್ಷದ ಸಂಡೆ ರಾಜಕಾರಣದಿಂದ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ದರೋಡೆಕೋರರು, ಗೂಂಡಾಗಳು, ಲೈಂಗಿಕ ಹಗರಣ ಮಾಡಿದವರು ಅಧಿಕಾರಕ್ಕೆ ಬಂದರೆ ಏನು ಮಾಡುವುದು ಎಂಬ ಆತಂಕ ಕಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಆಯೋಗ ಪತ್ತೆ ಹಚ್ಚಿದ ಹಣ, ಹೆಂಡ, ಆಭರಣಗಳು ಏನಾಯ್ತು ಎಂದು ಕೇಳಿದರೆ, ಆಯೋಗ ಮತ್ತು ಜಿಲ್ಲಾಧಿಕಾರಿಗಳ ಬಳಿ ಉತ್ತರವೇ ಇಲ್ಲ.

ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ನಮ್ಮೊಂದಿಗೆ ಜೈಲಿನಲ್ಲಿದ್ದವರು, ಅಧಿಕಾರ ವಿಕೇಂದ್ರಿಕರಣದ ಬಗ್ಗೆ ತುಂಬಾ ತಿಳಿದುಕೊಂಡಿದ್ದರು. ಅವರು ಗೃಹ ಸಚಿವರಾದರೂ ಯಾವುದೇ ಬದಲಾವಣೆ ತರಲಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next