ಚೆನ್ನೈ:ತಮಿಳುನಾಡಿನಲ್ಲಿ ರಜಿನಿ ಮಕ್ಕಳ್ ಮಂಡ್ರಂ ಹೆಸರಿನ ರಾಜಕೀಯ ಸಂಘಟನೆ ಸ್ಥಾಪಿಸಿ ಭರ್ಜರಿ ಜನಪ್ರಿಯತೆ ಗಳಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಇದೀಗ ದಿಢೀರನೆ ತನ್ನ ಚುನಾವಣಾ ರಾಜಕೀಯ ಸೇರ್ಪಡೆ ಕುರಿತು ಮರು ವಿಮರ್ಶೆ ಮಾಡುವುದಾಗಿ ಸುಳಿವು ನೀಡಿದ್ದು, ಸೂಕ್ತ ಸಮಯದಲ್ಲಿ ತನ್ನ ನಿರ್ಧಾರವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.
ತನ್ನ ರಾಜಕೀಯ ಭವಿಷ್ಯದ ಬಗ್ಗೆ ತಾನೇ ಖುದ್ದಾಗಿ ಬರೆದಿದ್ದಾರೆನ್ನಲಾದ ಪತ್ರವೊಂದು ಬಹಿರಂಗಗೊಂಡ ನಂತರ ರಜನಿ ರಾಜಕೀಯದ ಕುರಿತು ಹಲವಾರು ಊಹಾಪೋಹಗಳು ಹರಿದಾಡತೊಡಗಿತ್ತು.
ರಜನಿಕಾಂತ್ ನೀಡಿರುವ ಪ್ರಕಟಣೆ ಪ್ರಕಾರ, ಬಹಿರಂಗಗೊಂಡ ಪತ್ರ ನನ್ನದಲ್ಲ, ಆದರೆ ನನ್ನ ಆರೋಗ್ಯ ಮತ್ತು ವೈದ್ಯರ ಸಲಹೆಯ ಮಾಹಿತಿ ನಿಜವಾದದ್ದು ಎಂದು ತಿಳಿಸಿದ್ದಾರೆ. ನಾನು “ರಜಿನಿ ಮಕ್ಕಳ್ ಮಂಡ್ರಂ ಜತೆ ಚರ್ಚಿಸಿದ ನಂತರ ಸೂಕ್ತ ಸಮಯದಲ್ಲಿ ನನ್ನ ರಾಜಕೀಯದ ನಿಲುವಿನ ಬಗ್ಗೆ ಘೋಷಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಡಿಆರ್‌ಎಸ್‌ಗೆ ಮನವಿ ಬೇಡ: ಅಂಪೈರ್‌ರಿಂದಲೇ ಸಲಹೆ, ಅನಿಲ್ ಚೌಧರಿ ವಿವಾದ!
ಕಳೆದ ಎರಡು ವರ್ಷಗಳ ಕಾಲ ರಜನಿಕಾಂತ್ ಅವರು ಹಲವಾರು ರಾಜಕೀಯ ವಿಷಯಗಳ ಬಗ್ಗೆ ಮಾತನಾಡಿದ್ದರು. ಆದರೆ ರಾಜಕೀಯ ಅಖಾಡಕ್ಕೆ ಇಳಿಯಲು ವಿಳಂಬ ಮಾಡಿದ್ದರು. ಸಿನಿಮಾರಂಗದ ಮಿತ್ರ ಕಮಲ್ ಹಾಸನ್ ಅವರು ಕೂಡಾ ಹೊಸ ಪಕ್ಷವನ್ನು ಸ್ಥಾಪಿಸಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಇದೀಗ ಕೋವಿಡ್ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರೆ ತನ್ನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ರಜನಿಕಾಂತ್ ಪ್ರತಿಕ್ರಿಯೆಯಾಗಿದೆ. ರಜನಿಕಾಂತ್ ಆಪ್ತ ಮೂಲಗಳ ಪ್ರಕಾರ, ರಜಿನಿ ಮಕ್ಕಳ್ ಮಂಡ್ರಂ ಅಧ್ಯಕ್ಷರ ಜತೆ ಮಾತುಕತೆ ನಡೆಸಿ ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಘೋಷಿಸಲಿದ್ದಾರೆ ಎಂದು ತಿಳಿಸಿದೆ.