ಭಾಲ್ಕಿ: ಜೀವಂತ ದೇವರಿರುವ ದೇವಾಲಯವೇ ಶಾಲೆಯಾಗಿದೆ. ಹೀಗಾಗಿ ಶಾಲೆಯಲ್ಲಿ ರಾಜಕೀಯ ನಡೆಯಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾಯ ಹರನಾಳ ಹೇಳಿದರು. ತಾಲೂಕಿನ ಕಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ದೇವಾಲಯದಲ್ಲಿ ಶಾಲಾ ಸುಧಾರಿಸುವ ಕೆಲಸವಾಗಬೇಕು. ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಶಾಲಾ
ಮೇಲುಸ್ತುವಾರಿ ಸದಸ್ಯರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು. ಶಿಕ್ಷಣ ಇಲಾಖೆಗೆ ಸಮುದಾಯದ ಸಹಕಾರ ಅತ್ಯಗತ್ಯ. ಹೀಗಾಗಿ ಶಾಲಾ ಮೇಲುಸ್ತುವಾರಿ ಸದಸ್ಯರು ತಮ್ಮ ಮಕ್ಕಳಿಗೆ ಅಕ್ಷರ ಜ್ಞಾನ ಕೊಡಿಸುವಲ್ಲಿ ಶಿಕ್ಷಕರೊಂದಿಗೆ ಸಹಕರಿಸಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ಮತ್ತು ಅಕ್ಷರ ದಾಸೋಹ ಹೋಜನೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ, ಪ್ರೌಢಶಾಲೆ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ರಾಜಕುಮಾರ ನೇಳಗೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ರಾಜಕುಮಾರ ಮಾತನಾಡಿದರು. ಇದೇ ವೇಳೆ ನೂತನವಾಗಿ ಆಯ್ಕೆಯಾದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರನ್ನು ಗೌರವಿಸಲಾಯಿತು. ದಾನಿಗಳು ಕೊಡುಗೆಯಾಗಿ ನೀಡಿದ ನೋಟ್‌ಬುಕ್ ಮತ್ತು ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಸ್ವಾಮಿ ದಾಡಗಿ, ಉಪಾಧ್ಯಕ್ಷ ಮೋಹನ ಬಿರಾದಾರ, ಸದಸ್ಯರಾದ ಮಲ್ಲಪ್ಪಾ ಹುಲಿ, ಪ್ರಶಾಂತ, ರಾಜಕುಮಾರ ಜೊಳದಪಕೆ, ಆನಂದ ಹಳೆಂಬರೆ, ಭಗವಾನ ವಲಂಡೆ ಉಪಸ್ಥಿತರಿದ್ದರು.