ಮೈಸೂರು : ನನ್ನ ಈಗಿನ ಸಂಸದ ಸ್ಥಾನದ ಅವಧಿ ಮುಗಿದರೆ ನನ್ನ ಚುನಾವಣೆ ರಾಜಕಾರಣಕ್ಕೆ 50 ವರ್ಷವಾಗಲಿದ್ದು ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಹಿರಿಯ ರಾಜಕೀಯ ಮುತ್ಸದ್ದಿ, ಚಾಮರಾಜ ನಗರ (ಮೀಸಲು) ಲೋಕಸಭಾ ಸದಸ್ಯ ವಿ.ಶ್ರೀನಿವಾಸಪ್ರಸಾದ್ ತುಂಬಿದ ಸಭೆಯಲ್ಲಿ ಸೋಮವಾರ ಘೋಷಣೆ ಮಾಡಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ನನ್ನ ಆರೋಗ್ಯ ಸರಿಯಿಲ್ಲದ ಕಾರಣ ಹೆಚ್ಚು ಸಮಯ ನಿಲ್ಲಲು ಆಗುವುದಿಲ್ಲ.ಹಾಗಾಗಿ ಕುಳಿತೇ ಮಾತನಾಡುತ್ತಿದ್ದೇನೆ ಎಂದರು.
”ದಲಿತರು ಬಡವರು ಎಂದು ಕಾಯಿನ್ ಮಾಡಿಬಿಟ್ಟಿದ್ದಾರೆ.ಶೋಷಣೆಗೆ ಒಳಗಾದವರು ದಲಿತರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಪ್ರತ್ಯೇಕ ಕಾಲೋನಿಗಳಲ್ಲಿ ವಾಸಿಸುತ್ತಿದ್ದಾರೆ. ಸಾಮಾಜಿಕವಾಗಿ ಎಲ್ಲರೊಂದಿಗೆ ಒಟ್ಟಾಗಿ ವಾಸಿಸಲು ಇನ್ನೂ ಸಾಧ್ಯವಾಗಿಲ್ಲದಿರುವುದು ವಿಪರ್ಯಾಸವಾಗಿದೆ. ನಮಗೆ ಡಾ. ಬಿ. ಆರ್ . ಅಂಬೇಡ್ಕರ್ ಮಾರ್ಗದರ್ಶಕರಾಗಿದ್ದಾರೆ.ಕತ್ತಲಿನಲ್ಲಿದ್ದ ನಮಗೆ ಬೆಳಕು ನೀಡಿದವರು ಅಂಬೇಡ್ಕರ್” ಎಂದರು.
‘ದಲಿತರು ಅವಮಾನಕ್ಕೆ ಒಳಗಾಗಿದ್ದಾರೆ. ಆ ಅವಮಾನವನ್ನು ಅನುಭವಿಸಿರುವವರಿಗೇ ಆ ನೋವು ಗೊತ್ತು. ಅಸ್ಪೃಶ್ಯತೆ ಅಸಮಾನತೆ ಮಾನಸಿಕ ಕಾಯಿಲೆಯಾಗಿದೆ. ಈ ದೇಶ ಹುಚ್ಚರ ಸಂತೆಯಂತಾಗಿದ್ದು, ಇದರ ನಡುವೆಯೇ ಇದ್ದು ಜಯಿಸಬೇಕು ಎಂದು ನಾವು ಬದುಕುತ್ತಿದ್ದೇವೆ. ಇನ್ನು ಒಂದೂವರೆ ವರ್ಷಕ್ಕೆ ಸಂಸದ ಅವಧಿ ಮುಕ್ತಾಯವಾಗುತ್ತದೆ.ಅಲ್ಲಿಗೆ ನಾನು ನಿವೃತ್ತಿ ಆಗುತ್ತೇನೆ. ಇದುವರೆಗೆ 14 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.
11 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ” ಎಂದು ಹೇಳಿದರು.
”ಸಂಸತ್ತು ಜಗತ್ತಿನ ಪ್ರಜಾಪ್ರಭುತ್ವದ ಬಹುದೊಡ್ಡ ಕೇಂದ್ರ. ಸ್ಥಾಯಿ ಸಮಿತಿಗಳ ಮೂಲಕ ದೇಶದ ಪ್ರವಾಸ ಮಾಡಿದ್ದೇನೆ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನವರಿಕೆ ಮಾಡಿಕೊಂಡಿದ್ದೇನೆ. ಜಾತಿಯತೆ, ಅಸ್ಪೃಶ್ಯತೆ ಹೇಗೆ ನಮ್ಮನ್ನು ಕೊಲ್ಲುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಸ್ಪೃಶ್ಯತೆಯ ಹಿಂಸೆ ಕೇಳಿದರೆ ಬೇರೆಯವರಿಗೆ ರಕ್ತ ಕುದಿಯುತ್ತದೆ. ಇನ್ನು ಅನುಭವಿಸುವವರ ಕಥೆ ಏನಾಗಬೇಡ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ಸುಲಭವಲ್ಲ. ಹಿಂದೂ ಧರ್ಮದ ಅಸಮಾನತೆ ವಿರುದ್ಧ ಹೋರಾಡಲು ಸಾಧ್ಯವಾಗದೆ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಿದರು. ನಮಗೆ ಧಾರ್ಮಿಕ ವಿಮೋಚನೆ ನೀಡಿದರು” ಎಂದು ಹೇಳಿದರು.