Advertisement

ಕ್ಯಾಂಟೀನ್‌ ಬಗ್ಗೆ ರಾಜಕೀಯ ಅಪಪ್ರಚಾರ

06:35 AM Mar 20, 2019 | Team Udayavani |

ಬೆಂಗಳೂರು: ರಾಜಕೀಯ ದುರುದ್ದೇಶದಿಂದ ಬಿಜೆಪಿಯವರು ಇಂದಿರಾ ಕ್ಯಾಂಟೀನ್‌ ಆಹಾರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಕ್ಯಾಂಟೀನ್‌ ಊಟ ಗುಣಮಟ್ಟದಿಂದ ಕೂಡಿದ್ದು, ಜನರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮೇಯರ್‌ ಗಂಗಾಂಬಿಕೆ ಭರವಸೆ ನೀಡಿದರು.

Advertisement

ಇಂದಿರಾ ಕ್ಯಾಂಟೀನ್‌ಗಳಲ್ಲಿ ವಿಷಕಾರಿ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂಬ ಬಿಜೆಪಿ ಸದಸ್ಯ ಉಮೇಶ್‌ ಶೆಟ್ಟಿ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಎರಡು ವರ್ಷಗಳಿಂದ ಇಂದಿರಾ ಕ್ಯಾಂಟೀನ್‌ನಲ್ಲಿ  ಲಕ್ಷಾಂತರ ಜನ ಆಹಾರ ಸೇವಿಸಿದ್ದು, ಯಾರಿಂದಲೂ ದೂರು ಬಂದಿಲ್ಲ.

ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಕ್ಯಾಂಟೀನ್‌ ಆಹಾರದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಟೀಕಿಸಿದರು. ಕ್ಯಾಂಟೀನ್‌ಗಳ ಆಹಾರ ವಿಷಕಾರಿ ಎಂದು ಆರೋಪಿಸುವ ಮೂಲಕ ಲಕ್ಷಾಂತರ ಜನರಲ್ಲಿ ಆತಂಕ ಮೂಡಿಸಿರುವ ಉಮೇಶ್‌ ಶೆಟ್ಟಿ ರಾಜಕೀಯ ಮಾಡುತ್ತಿದ್ದಾರೆ.

ಖಾಸಗಿ ಸಂಸ್ಥೆ ನೀಡಿದ ದಾಖಲೆ ತಂದು ಆರೋಪ ಮಾಡುವುದು ಎಷ್ಟು ಸರಿ? ಉಮೇಶ್‌ ಶೆಟ್ಟಿ ಅವರ ಆರೋಪದ ಹಿನ್ನೆಲೆಯಲ್ಲಿ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ. ಅವರ ಆರೋಪ ಸುಳ್ಳು ಎಂಬುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್‌ಗಳಿಗೆ ಎರಡು ಖಾಸಗಿ ಸಂಸ್ಥೆಗಳು 18 ಇಂದಿರಾ ಅಡುಗೆ ಮನೆಗಳಿಂದ ಆಹಾರ ಪೂರೈಕೆ ಮಾಡುತ್ತಿವೆ. ಅದರಂತೆ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು, ಆರೋಗ್ಯ ವಿಭಾಗದ ಅಧಿಕಾರಿಗಳು ನಿರಂತರವಾಗಿ ಅಡುಗೆ ಮನೆಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸುತ್ತಾರೆ. ಕೆಲವೊಮ್ಮೆ ಕೆಲವೆಡೆ ಸಣ್ಣಪುಟ್ಟ ಸಮಸ್ಯೆಗಳು ಆಗಿರಬಹುದು.

Advertisement

ಆದರೆ, ನಗರದ ಎಲ್ಲ ಕ್ಯಾಂಟೀನ್‌ಗಳಲ್ಲಿ ವಿಷಕಾರಿ ಆಹಾರ ನೀಡಲಾಗುತ್ತಿದೆ ಎಂದು ಹೇಳುವುದು ರಾಜಕೀಯವಲ್ಲವೆ ಎಂದು ಕಿಡಿ ಕಾರಿದರು. ಸುದ್ದಿಗೋಷ್ಠಿಯಲ್ಲಿ ಉಪಮೇಯರ್‌ ಭದ್ರೇಗೌಡ, ಮಾಜಿ ಮೇಯರ್‌ಗಳಾದ ಮಂಜುನಾಥರೆಡ್ಡಿ, ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾ ನಾರಾಯಣ್‌ ಹಾಜರಿದ್ದರು. 

ಕ್ಯಾಂಟೀನ್‌ನದ್ದೇ ಆಹಾರ ಎಂದು ನಂಬುವುದು ಹೇಗೆ?: ಉಮೇಶ್‌ ಶೆಟ್ಟಿ ಅವರು ಎಂ.ಎಸ್‌.ರಾಮಯ್ಯ ಆಸ್ಪತ್ರೆ ಪ್ರಯೋಗಾಲಯದಲ್ಲಿ ಆಹಾರ ಪರೀಕ್ಷೆ ಮಾಡಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಅವರು ಪರೀಕ್ಷೆ ಮಾಡಿಸಿರುವ ಆಹಾರ ಇಂದಿರಾ ಕ್ಯಾಂಟೀನ್‌ನಿಂದಲೇ ಸಂಗ್ರಹಿಸಿದ್ದು ಎಂದು ನಂಬುವುದು ಹೇಗೆ? ಎಂದು ಮೇಯರ್‌ ಪ್ರಶ್ನಿಸಿದರು.

ಒಂದೊಮ್ಮೆ ಇಂದಿರಾ ಕ್ಯಾಂಟೀನ್‌ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ತಿಳಿದರೆ ಅದನ್ನು ಪಾಲಿಕೆ ಆಯುಕ್ತರು ಅಥವಾ ಆರೋಗ್ಯ ಸ್ಥಾಯಿ ಸಮಿತಿ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡಬೇಕು. ಏಕಾಏಕಿ ಮಾಧ್ಯಮಗಳ ಎದುರು ಹೋಗುವ ಮೂಲಕ ರಾಜಕೀಯ ಮಾಡಬಾರದು ಎಂದು ತರಾಟೆಗೆ ತೆಗೆದುಕೊಂಡರು. 

ಮೂರು ದಿನ ಆಹಾರ ಪ್ರಯೋಗಾಲಯಕ್ಕೆ: ಇಂದಿರಾ ಕ್ಯಾಂಟೀನ್‌ ಆಹಾರದ ಗುಣಮಟ್ಟದ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಎಲ್ಲಾ ಇಂದಿರಾ ಅಡುಗೆ ಮನೆಗಳಲ್ಲಿ ತಯಾರಾಗುವ ಆಹಾರವನ್ನು ಮೂರು ದಿನಗಳ ಕಾಲ ಪ್ರಯೋಗಾಲಯಕ್ಕೆ ಕಳುಹಿಸುವ ಕಾರ್ಯವನ್ನು ಪಾಲಿಕೆ ಆರಂಭಿಸಿದೆ.

ಕ್ಯಾಂಟೀನ್‌ ಆಹಾರ ವಿಷಕಾರಿಯಾಗಿದೆ ಎಂದು ಕಾರ್ಪೊರೇಟರ್‌ ಉಮೇಶ್‌ ಶೆಟ್ಟಿ ಆರೋಪಿಸಿದ ಹಿನ್ನೆಲೆಯಲ್ಲಿ ಮಾ.18ರಿಂದ 20ವರೆಗೆ ಎಲ್ಲಾ ಅಡುಗೆ ಮನೆಗಳಲ್ಲಿನ ಆಹಾರವನ್ನು ಎಫ್ಎಸ್‌ಎಸ್‌ಐ ನಿಗದಿಪಡಿಸಿದ ಪ್ರಾಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ ಆಹಾರ ಕಳಪೆಯಾಗಿದೆ ಎಂದು ಆರೋಪ ಮಾಡಿದ ಉಮೇಶ್‌ ಶೆಟ್ಟಿ, ಹಲವು ಹೋಟೆಲ್‌ ಹೊಂದಿದ್ದಾರೆ. ಕ್ಯಾಂಟೀನ್‌ಗಳಿಂದ ಹೋಟೆಲ್‌ಗ‌ಳಿಗೆ ನಷ್ಟವಾಗುತ್ತಿದೆ. ಹೀಗಾಗಿ ಹೋಟೆಲ್‌ ಉದ್ಯಮಕ್ಕೆ ಸಹಾಯ ಮಾಡಲು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ.
-ಜಿ.ಪದ್ಮಾವತಿ, ಮಾಜಿ ಮೇಯರ್‌

ಉಮೇಶ್‌ ಶೆಟ್ಟಿ ತಾವು ತಂದಿದ್ದ ಬಾಕ್ಸ್‌ಗಳಲ್ಲಿ ಫೆ.26ರಂದು ಆಹಾರವನ್ನು ತೆಗೆದುಕೊಂಡು ಹೋಗಿದ್ದು, ಫೆ.28ರಂದು ಪ್ರಯೋಗಾಲಯಗಳಿಗೆ ನೀಡಿದ್ದಾರೆ. ಇವೆಲ್ಲವನ್ನು ಗಮನಿಸಿದರೆ ಚುನಾವಣಾ ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ.
-ಗಂಗಾಂಬಿಕೆ, ಮೇಯರ್‌

ಆಹಾರ ಪೂರೈಕೆ ಗುತ್ತಿಗೆದಾರರನ್ನು ಬದಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಉಮೇಶ್‌ ಶೆಟ್ಟಿ, ಕ್ಯಾಂಟೀನ್‌ ಆಹಾರದ ಗುಣಮಟ್ಟದ ಬಗ್ಗೆ ಅಪಸ್ವರ ಎತ್ತಿ, ಆಹಾರ ಪೂರೈಕೆ ಗುತ್ತಿಗೆ ಪಡೆಯಲು ಹುನ್ನಾರ ನಡೆಸಿದ್ದಾರೆ ಎಂಬ ಅನುಮಾನವಿದೆ.
-ಅಬ್ದುಲ್‌ ವಾಜೀದ್‌, ಆಡಳಿತ ಪಕ್ಷ ನಾಯಕ 

Advertisement

Udayavani is now on Telegram. Click here to join our channel and stay updated with the latest news.

Next