ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಫಲಿತಾಂಶದ ಬಳಿಕ ಉಂಟಾಗುವ ರಾಜಕೀಯ ಧ್ರುವೀಕರಣವನ್ನು ಕಾದು ನೋಡೋಣ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾರ್ಮಿಕವಾಗಿ ಹೇಳಿದರು.
ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನ ಪಡೆದು ಶನಿವಾರ ನಗರಕ್ಕೆ ಹಿಂತಿರುಗಿದ ಯಡಿಯೂರಪ್ಪ ಅವರು ಡಾಲರ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. “ನಾನು ಈಗಲೇ ಏನನ್ನೂ ಹೇಳುವುದಿಲ್ಲ. ಕಾಂಗ್ರೆಸ್, ಜೆಡಿಎಸ್‌ನಲ್ಲಿ ಸಾಕಷ್ಟು ಗೊಂದಲಗಳಿವೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ಫಲಿತಾಂಶದ ನಂತರ ಇದಕ್ಕೆಲ್ಲಾ ಉತ್ತರ ಸಿಗಲಿದೆ’ ಎಂದು ತಿಳಿಸಿದರು.
ಎಲ್ಲರಿಗೂ ಒಳಿತಾಗಲಿ, ಬರಗಾಲ ದೂರಾಗಲಿ, ನರೇಂದ್ರ ಮೋದಿಯವರು ಮತ್ತೂಮ್ಮೆ ದೇಶದ ಪ್ರಧಾನಿಯಾಗಲಿ, ಜನರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸಲು ತಿರುಪತಿಗೆ ಹೋಗಿದ್ದೆ. ಬೆಳಗ್ಗೆಯಷ್ಟೇ ದೇವರ ದರ್ಶನ ಪಡೆದು ಹಿಂತಿರುಗಿದ್ದೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ. ನಂತರ ರಾಜಕೀಯ ಕ್ಷೇತ್ರದಲ್ಲಿ ಏನೆಲ್ಲಾ ಏರುಪೇರುಗಳಾಗುತ್ತವೆ ಎಂಬುದನ್ನು ಕಾದು ನೋಡಬೇಕು. ಸದ್ಯದಲ್ಲೇ ನಡೆಯಲಿರುವ ಕುಂದಗೋಳ, ಚಿಂಚೋಳಿ ವಿಧಾನಸಭೆ ಉಪಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ. ಭಾನುವಾರದಿಂದ ಕುಂದಗೋಳ, ಚಿಂಚೋಳಿಯಲ್ಲಿ ಪ್ರವಾಸ ನಡೆಸಲಿದ್ದೇನೆ ಎಂದು ತಿಳಿಸಿದರು.