ಇಡೀ ವಿಶ್ವದಲ್ಲಿಯೇ ಅತ್ಯಂತ ಕಿರಿದಾದ ಲಿಖಿತ ಸಂವಿಧಾನವಿದ್ದರೆ ಅದು ಅಮೇರಿಕ ಸಂವಿಧಾನ. ಕೇವಲ 6 ಸಾವಿರ ಪದಗಳು 20 ನಿಮಿಷಗಳಲ್ಲಿ ಓದಿ ಮುಗಿಸ ಬಹುದಾದ ಸಂವಿಧಾನ. ಇದಕ್ಕೆ ವಿರುದ್ಧವಾಗಿ ನಿಲ್ಲುವ ಸಂವಿಧಾನವಿದ್ದರೆ ಅದು ಭಾರತೀಯ ಸಂವಿಧಾನ ಅನ್ನುವುದರಲ್ಲಿ ಎರಡು ಮಾತಿಲ್ಲ. ಇಷ್ಟೊಂದು ಚಿಕ್ಕದಾದ ಸಂವಿಧಾನದಲ್ಲಿ ಇಷ್ಟೊಂದು ಬಲಿಷ್ಠವಾದ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಕಟ್ಟಿ ನಿಲ್ಲಿಸಿದ್ದಾರೆ ಅಂದರೆ ನಮಗೆ ಆಶ್ಚರ್ಯವಾಗಲೇ ಬೇಕು. ಇದು ಹೇಗೆ ಸಾಧ್ಯವಾಯಿತು ಅಂದರೆ ಅಮೇರಿಕಾದ ಜನರಲ್ಲಿನ ರಾಜಕೀಯ; ಆರ್ಥಿಕ ಪ್ರಬುದ್ಧತೆ.
ಈ ಪ್ರಬುದ್ಧತೆಯನ್ನು ಅಲ್ಲಿನ ರಾಜಕಾರಣಿಗಳು ಕೂಡಾ ಮೈಗೂಡಿಸಿಕೊಂಡಿರುವುದು ಕೂಡಾ ಒಂದು ಕಾರಣವಾಗಿರಬಹುದು. ಚುನಾವಣಾ ಸಂದರ್ಭದಲ್ಲಿ ಪರಸ್ಪರ ಏನೇ ಬೈದುಕೊಂಡಿದ್ದರು ಕೂಡಾ ಚುನಾವಣಾ ಅನಂತರದಲ್ಲಿ ಅವರವರ ಕತ೯ವ್ಯಕ್ಕೆ ಮತ್ತೆ ತೆರಳಿ ಬಿಡುವ ರಾಜಕೀಯ ಪರಿಪಾಠ ಅಮೇರಿಕ ರಾಜಕೀಯದ ಇನ್ನೊಂದು ಪರಿಪಾಠ. ನಮ್ಮ ಹಾಗೇ ದಿನದ 24 ಗಂಟೆ 365 ದಿನವೂ ರಾಜಕೀಯ ಹಗೆತನ ಮತ್ತು ಯಾವಾಗ ಸರ್ಕಾರ ಉರುಳಿಸಿ ನಾನು ಮತ್ತೆ ಅಧಿಕಾರಕ್ಕೆ ಏರ ಬಹುದು ಅನ್ನುವ ಅಧಿಕಾರ ಲಂಪಾಟತನ ಅಲ್ಲಿ ಹುಟ್ಟಿ ಬರುವ ಮನಸ್ಥಿತಿ ಜನರಲ್ಲಿಯೂ ಇಲ್ಲ ರಾಜಕೀಯ ಪಕ್ಷಗಳಲ್ಲಿಯೂ ಮೂಡಿ ಬರಲೇ ಇಲ್ಲ..ಇದು ಅವರಿಗೆ ಅಲ್ಲಿನ ಸಂವಿಧಾನ ಕಲಿಸಿದ ಪಾಠವಲ್ಲ ಬದಲಾಗಿ ಅವರು ಮೈಗೂಡಿಸಿಕೊಂಡ ಶ್ರೇಷ್ಠ ರಾಜಕೀಯ ಮುತ್ಸದಿತನದ ನಡವಳಿಕೆ ಎಂದೇ ವ್ಯಾಖ್ಯಾನಿಸಲಾಗಿದೆ. ಹಾಗಾಗಿ ಅಮೇರಿಕಾದ ಸಂವಿಧಾನದಲ್ಲಿ ಉಲ್ಲೇಖಿಸದ ಅದೆಷ್ಟೋ ರಾಜಕೀಯ ನಡೆಗಳು ನಡಾವಳಿಕೆಯ ರೂಪದಲ್ಲಿ ಅಮೇರಿಕಾದ ನೆಲದಲ್ಲಿ ಗಟ್ಟಿಯಾಗಿ ನೆಲೆಯೂರಿದೆ ಎಂದೇ ಹೇಳಬೇಕಾಗಿದೆ.
ಈಗ ತಾನೇ ನಡೆದ ಅಧ್ಯಕ್ಷೀಯ ಚುನಾವಣಾ ಸ್ವರೂಪದ ಕಡೆ ಒಮ್ಮೆ ಗಮನಹರಿಸಿ ನೇೂಡಿ. ಅಲ್ಲಿ ಕೇಂದ್ರ ಚುನಾವಣಾ ಆಯೇೂಗವಿಲ್ಲ. ಪ್ರತಿ ರಾಜ್ಯದಲ್ಲಿರುವ ಚುನಾವಣೆಗೆ ಸಂಬಂಧಿಸಿದ ಅಧಿಕಾರಗಳೇ ಇದನ್ನು ನಿಭಾಯಿಸಿ ಬಿಟ್ಟಿದ್ದಾರೆ. ನವಂಬರ್ 5 ರಂದು ನಡೆದ electoral college ನ ಪ್ರತಿನಿಧಿಗಳ ಆಯ್ಕೆ ಆಧಾರದಲ್ಲಿಯೇ ಅಮೇರಿಕಾದ ಮುಂದಿನ ಅಧ್ಯಕ್ಷ ಯಾರು ಅನ್ನುವುದನ್ನು ಅಲ್ಲಿನ ಮಾಧ್ಯಮಗಳೇ ಘೇೂಷಣೆ ಮಾಡಿದ್ದಾವೆ ಮಾತ್ರವಲ್ಲ ಅದನ್ನು ಸೇೂತ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೂಡಾ ಶಿರಸಾ ಒಪ್ಪಿಕೊಂಡು ತಲೆ ಭಾಗಿ ಒಪ್ಪಿಕೊಂಡಿದ್ದಾರೆ..
ಆದರೆ ಅದೇ ನಮ್ಮಲ್ಲಿ ಆಗಿದ್ದರೆ..?ಅಲ್ಲಿ ಇನ್ನೂ ಕೂಡಾ ಚುನಾಯಿತ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ನೀಡಿಲ್ಲ;ಇನ್ನು ಮತ್ತೆ ಇದೇ ಚುನಾಯಿತ ಸದಸ್ಯರು ಅಂದರೆ ಟ್ರಂಪ್ ಬೆಂಬಲಿತ 289 ಎಲೆಕ್ಟ್ರೊರಲ್ ಸದಸ್ಯರು ಅದೇ ರೀತಿ ಕಮಲಾ ಹ್ಯಾರಿಸ್ ಬೆಂಬಲಿತ 224 ಎಲೆಕ್ಟ್ರೊರಲ್ ಸದಸ್ಯರು ಮುಂದಿನ ಡಿಸೆಂಬರ್ ನಲ್ಲಿ ಮತದಾನ ಮಾಡಿ ಅಧ್ಯಕ್ಷರನ್ನು ಚುನಾಯಿಸ ಬೇಕಾಗಿದೆ. ನೇೂಡಿ ಇದಾಗಲೇ ಅದೆಷ್ಟು ಧೈರ್ಯದಿಂದ ಟ್ರಂಪ್ ತಾನು ಮುಂದಿನ ಅಮೇರಿಕಾದ ಅಧ್ಯಕ್ಷ ಮಾತ್ರವಲ್ಲ ಇಡಿ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡುತ್ತಿದ್ದಾರೆ. ಅದೇ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಆಗಿದ್ದರೆ ಯಾವುದೇ ಪಕ್ಷಕ್ಕೆ ಸ್ವಷ್ಟ ಬಹುಮತ ಬಂದಿದ್ದರೂ ಕೂಡಾ ಮುಂದಿನ ಸರ್ಕಾರ ಯಾರದ್ದು ಅನ್ನುವುದನ್ನು ಖಾತ್ರಿ ಪಡಿಸುವುದು ಕಷ್ಟ.
ನಮ್ಮಲ್ಲಿ ಏನು ಬೇಕಾದರೂ ಆಗಬಹುದು..ಗೆದ್ದವ ಸೇೂಲ ಬಹುದು ಸೇೂತವ ಗೆಲ್ಲಬಹುದು?ಇದೇ ಭಾರತದಲ್ಲಿ ಆಗಿದ್ದರೆ ಟ್ರಂಪ್ ಬೆಂಬಲಿತ ಸದಸ್ಯರು ಡಿಸೆಂಬರ್ ನಲ್ಲಿ ಹ್ಯಾರಿಸ್ ಹಿಂದೆ ಹಾರಿ ಹೇೂದರು ಆಶ್ಚರ್ಯವಿಲ್ಲ.ಆದರೆ ಅಲ್ಲಿ ಹೀಗೆ ನಡೆಯಲು ಸಾಧ್ಯನೇ ಇಲ್ಲ.
ನಮ್ಮಸಂವಿಧಾನದಲ್ಲಿಯೇ ಪಕ್ಷಾಂತರ ಕಾಯಿದೆ ಇದೆ ಆದರೂ ಅದನ್ನೆಲ್ಲ ದಾಟಿ ಪ್ರಜಾಪ್ರಭುತ್ವಕ್ಕೆ ಕಳಂಕ ತರುವ ವಿದ್ಯಾಮಾನಗಳು ನಡೆದ ಹೇೂದ ಪ್ರಸಂಗಗಳು ನಮ್ಮ ಮುಂದೆ ಇದೆ. ಆದರೆ ಅಮೇರಿಕಾದಲ್ಲಿ ಚುನಾಯಿತ ಸದಸ್ಯರುಗಳನ್ನು ಕಟ್ಟಿ ಹಾಕುವ ಯಾವುದೇ ಕಾಯಿದೆ ಇಲ್ಲ. ಹಾಗಾದರೆ ಅಮೇರಿಕಾದಲ್ಲಿ ಈ ರಾಜಕೀಯ ನಿಷ್ಠೆ ಪ್ರಬುದ್ಧತೆ ಪ್ರಜಾಪ್ರಭುತ್ವದಲ್ಲಿ ನೈತಿಕತೆಯ ಮೌಲ್ಯ ಉಳಿದು ಕೊಂಡಿರಲು ಕಾರಣಗಳೇನು ಅನ್ನುವುದನ್ನು ಭಾರತೀಯ ಪ್ರಬುದ್ಧ ಮತದಾರರು ಅನ್ನಿಸಿಕೊಂಡ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.
ಅದೇ ರೀತಿಯಲ್ಲಿ ಅಡಿಯಿಂದ ಮುಡಿಯ ತನಕವಿರುವ ಪ್ರತಿಯೊಬ್ಬ ರಾಜಕಾರಣಿಗೂ ಇದು ಮೊದಲ ಪಾಠವಾಗ ಬೇಕು.ಈ ತತ್ವಗಳನ್ನು ಮೈಗೂಡಿಸಿಕೊಂಡ ಅನಂತರದಲ್ಲಿಯೇ ಅಮೇರಿಕಾ ಚುನಾವಣೆ ಮತ್ತು ಗೆದ್ದ ಅಧ್ಯಕ್ಷರನ್ನು ಅಭಿನಂದಿಸುವ ನೈತಿಕತೆಯನ್ನು ತೇೂರಬಹುದು.? ನಮ್ಮ ಭಾರತೀಯ ಸಂವಿಧಾನದ ಜೊತೆಗೆ ಅಮೇರಿಕಾದ ಸಂವಿಧಾನವನ್ನು ಅಧ್ಯಯನ ಮಾಡಿದ ಹಿನ್ನೆಲೆಯಲ್ಲಿಯೇ ಈ ವಾಸ್ತವಿಕ ಸ್ಥಿತಿ ಗತಿಯನ್ನು ತೌಲನಿಕವಾಗಿ ಅಧ್ಯಯನ ಮಾಡಿ ಈ ಲೇಖನವನ್ನು ತಮ್ಮ ಮುಂದೆ ವಿಶ್ಲೇಷಿಸಿದ್ದೇನೆ.
ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.