Advertisement

Political: ಎಚ್‌ಡಿಕೆ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ: ಡಿ.ಕೆ. ಶಿವಕುಮಾರ್‌

02:28 AM Aug 11, 2024 | Team Udayavani |

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಯವರ ಗಂಡಸ್ತನ ಹಾಗೂ ನಪುಂಸಕ ರಾಜಕಾರಣದ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ಹೌದು ಅವರೊಬ್ಬರೇ ಗಂಡಸು. ನಾನು ಜೈಲಲ್ಲಿದ್ದಾಗ ಅವರು ಬಂದು ನನ್ನ ನೋಡಿದ್ದರು. ಜೈಲಿನ ಒಳಗೆ ನಾನು ಎಷ್ಟು ಶಕ್ತಿಯಲ್ಲಿದ್ದೆ ಎಂದು ನೋಡಿದ್ದಾರೆ . ಅವರು ಎಲ್ಲವನ್ನು ಬಿಚ್ಚಿ ತೋರಿಸಲಿ ಎಂದು ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗಾರರ ಜತೆಗೆ ಮಾತನಾಡಿ, ನನ್ನನ್ನು ಮಿಲಿಟರಿ ಬಂದು ಕರೆದುಕೊಂಡು ಹೋಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಂದರೆ ನಾನು ಮತ್ತೆ ಜೈಲಿಗೆ ಹೋಗುತ್ತೇನೆ ಎಂದರ್ಥ. ನಾನು ಜೈಲು ನೋಡಿರುವವನು. ಮಗನ ಸೋಲಿನ ಅನಂತರ ಅವರ ಮಾತು ಮಿತಿ ಮೀರಿದೆ. ನನ್ನ ವಿರುದ್ಧ ಇರುವ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅವರ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ ಎಂದರು.

ನಾನು ಅವರ ಸಹೋದರನ ಆಸ್ತಿ ವಿವರ ಕೇಳಿದ್ದೇನೆ ನಿಜ. ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪ ಯೋಗ ಮಾಡಿಕೊಂಡಿದ್ದಾರೆ. ನನ್ನ ಮೇಲೆ, ನನ್ನ ಸಹೋದರ, ತಂಗಿ, ಪತ್ನಿ ಮೇಲೆ ಅದಿರು ಕಳ್ಳತನದ ಸುಳ್ಳು ಕೇಸ್‌ ಹಾಕಿಸಿ
ದ್ದರು. ಆದರೆ ಅವರು ಸಿಎಂ ಆಗಿದ್ದಾಗ ನಾನು ಪ್ರಾಮಾಣಿಕ ವಾಗಿ ಕೆಲಸ ಮಾಡಿದ್ದಾರೆ. ಆದರೆ ಈಗ ಅವರು ನನಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ಬೆದರಿಕೆಗೆ ಈ ಡಿ.ಕೆ. ಶಿವಕುಮಾರ್‌ ಹೆದರುವುದಿಲ್ಲ. ನಾನು ವಿಧವೆಯರಿಗೆ ಗನ್‌ ಪಾಯಿಂಟ್‌ನಲ್ಲಿಟ್ಟು ಈ ಆಸ್ತಿ ಬರೆಸಿಕೊಂಡಿದ್ದೇನೆ ಎಂದು ಆರೋಪಿಸಿದ್ದಾರೆ. ಹಾಗಾದರೆ ಅವರನ್ನು ಕರೆದುಕೊಂಡು ಬಂದು ಎಫ್ಐಆರ್‌ ದಾಖಲಿಸಲಿ ಎಂದು ತಿರುಗೇಟು ನೀಡಿದರು.

ನಾನು ಉದ್ಯಮಿಯೂ ಹೌದು
ನಾನು ಕೇವಲ ವ್ಯವಸಾಯದಲ್ಲಿ ಆಸ್ತಿ ಮಾಡಿದ್ದೇನೆ ಎಂದು ಹೇಳುವುದಿಲ್ಲ. ನಾನು ಎಷ್ಟು ರಾಜಕಾರಣಿಯೋ ಅಷ್ಟೇ ಉದ್ಯಮಿಯೂ ಹೌದು. ನನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ನಾನು ಆಸ್ತಿ ಖರೀದಿ ಮಾಡುತ್ತೇನೆ. ಇನ್ನು ಮಾರಾಟವಾಗಲು ಸಿದ್ಧವಿರುವ ಜಾಗಗಳಿದ್ದರೆ ಹೇಳಿ ಖರೀದಿ ಮಾಡುತ್ತೇನೆ ಎಂದು ಹೇಳಿದರು.

ನಮ್ಮ ಸರಕಾರವನ್ನು ಮುಟ್ಟಲಿ ನೋಡೋಣ?
ನಮ್ಮ ಸರಕಾರವನ್ನು ಹೇಗೆ 10 ತಿಂಗಳಲ್ಲಿ ತೆಗೆಯುತ್ತಾರಂತೆ. ಸಾಮರ್ಥ್ಯವಿದ್ದರೆ ನಮ್ಮ ಸರಕಾರವನ್ನು ಮುಟ್ಟಲಿ ನೋಡೋಣ ಎಂದು ಡಿಕೆಶಿ ಸವಾಲು ಹಾಕಿದರು. ಇವರು ಗೆದ್ದಿರುವುದು ಕೇವಲ ಎರಡು ಕ್ಷೇತ್ರ. ಆದರೂ ಕೇಂದ್ರದಲ್ಲಿ ಬಿಜೆಪಿಯವರು ಇವರನ್ನು ಹೇಗೆ ಸಹಿಸಿಕೊಂಡಿದ್ದಾರೆ ಗೊತ್ತಾ? ಬಿಜೆಪಿಯ ಆಂತರಿಕದಲ್ಲಿ ಏನೆಲ್ಲ ನಡೆಯುತ್ತಿದೆ ಗೊತ್ತಿದೆಯಾ? ಅಲ್ಲಿ ಅನುಭವಿಸುತ್ತಿರುವವರಿಗೆ ಗೊತ್ತು ಎಂದರು.

Advertisement

ಎಚ್‌ಡಿಕೆಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು
ಕನಕಪುರ: ಎಚ್‌.ಡಿ. ಕುಮಾರಸ್ವಾಮಿಯ ಹೇಳಿಕೆ ನೋಡುತ್ತಿದ್ದರೆ ಅವರಿಗೆ ಆದಷ್ಟು ಬೇಗ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದರು.

ನಗರದಲ್ಲಿನ ತಮ್ಮ ನಿವಾಸದಲ್ಲಿ ಶನಿವಾರ ಸಾರ್ವಜನಿಕರ ಕುಂದು ಕೊರತೆ ಅಹವಾಲುಗಳನ್ನು ಆಲಿಸಿದ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ ಅವರ ಸಾವಿಗೆ ಕಾರಣ ಯಾರು ಎಂದು ನಿಮ್ಮ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂದು ಮಾಧ್ಯಮಗಳು ಕೇಳಿದಾಗ, ನಾನು ಅವರ ತಂದೆ ವಿರುದ್ಧ 1985ರಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ.

ಬಂಗಾರಪ್ಪನವರ ಸಂಪುಟದಲ್ಲಿ ಸಚಿವನಾಗಿದ್ದೆ. ನನ್ನ ಹಾಗೂ ಎಸ್‌.ಎಂ. ಕೃಷ್ಣ ಅವರ ನಡುವಣ ಸಂಬಂಧ ಏನು ಎಂದು ಕುಮಾರಸ್ವಾಮಿಗೆ ಏನು ಗೊತ್ತಿದೆ? ಅವರಿಗೆ ಹುಚ್ಚು ಹಿಡಿದಿದೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಅವರ ಪಕ್ಷದವರಿಗೆ, ನಾಯಕರಿಗೆ, ಹಿತೈಷಿಗಳಿಗೆ ಹೇಳ್ಳೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next