Advertisement

ರಾಜಕೀಯ ಅಸ್ಥಿರತೆ: ಪಕ್ಷಗಳು ತಮ್ಮ ಹೊಣೆ ನಿಭಾಯಿಸಲಿ

12:30 AM Jan 17, 2019 | |

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ರಾಜಕೀಯ ಕ್ರಾಂತಿ ಮಾಡಿ ರಾಜ್ಯದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರವನ್ನು ಬೀಳಿಸುವ ಬಿಜೆಪಿಯ ಪ್ರಯತ್ನ ಬಹುತೇಕ ವಿಫ‌ಲಗೊಂಡಿದೆ. ಕೆಲವು ದಿನಗಳಿಂದ ಕಾಣಿಸಿಕೊಂಡಿದ್ದ ರಾಜಕೀಯ ಅಸ್ಥಿರತೆ ಈಗ ಮಾಯವಾದಂತಿದೆ. ಆದರೆ ಎಷ್ಟು ದಿನ ಈ ಶಾಂತಿ ನೆಲೆ ನಿಲ್ಲಬಹುದು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗದು.

Advertisement

ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಂದ ಅತಂತ್ರ ಫ‌ಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಈ ಅಸ್ಥಿರತೆ ಪದೇ ಪದೇ ಕಾಣಿಸುತ್ತಿದೆ. 104 ಸ್ಥಾನಗಳನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊಮ್ಮಿದ್ದರೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿ ಹೆಣೆದ ರಾಜಕೀಯ ತಂತ್ರದಿಂದಾಗಿ ಸರಕಾರ ರಚಿಸಲು ಸಾಧ್ಯವಾಗಿರಲಿಲ್ಲ. ಇದರ ಪರಿಣಾಮ ಮೈ ತ್ರಿ ಸರಕಾರಗಳಲ್ಲಿ ಸಮನ್ವಯದ ಕೊರತೆ ಬಂದಾಗಲೆಲ್ಲಾ ಬಿಜೆಪಿ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಇಂಥ ಸಂದರ್ಭದಲ್ಲೆಲ್ಲಾ ಕೂಡಲೇ ಎಚ್ಚೆತ್ತುಕೊಳ್ಳುವ ಸರಕಾರದ ಅಂಗ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರತಿ ವ್ಯೂಹ ರಚಿಸಿ ತಿರುಗೇಟು ನೀಡುತ್ತಿವೆ. ಈ ಸಲವೂ ಆದದ್ದು ಇದೇ. ಸಂಕ್ರಾಂತಿಯ ಬಳಿಕ ಸರಕಾರ ಉರುಳೀತು ಎನ್ನುವ ವಾದಕ್ಕೆ ಪುಷ್ಟಿ ಎಂಬಂತೆ ಇಬ್ಬರು ಪಕ್ಷೇತರ ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸು ಪಡೆದರು. ಇದರ ಪರಿಣಾಮವಾಗಿ ಇನ್ನಷ್ಟು ಮಂದಿ ಮೈತ್ರಿ ಸರಕಾರದ ಪಕ್ಷಗಳಿಂದ ಹೊರಬರಬಹುದೆಂಬ ಊಹೆ ನಿಜವಾಗಲಿಲ್ಲ.

ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ಹೊಂದುವುದು ಇಲ್ಲವೇ ಮೈತ್ರಿ ಸರಕಾರ ಇರದಂತೆ ಮಾಡುವುದು ಮುಖ್ಯ. ಒಂದುವೇಳೆ ಅಧಿಕಾರದಲ್ಲಿದ್ದರೆ ಅದು ಒಂದಿಷ್ಟು ಹೆಚ್ಚು ಲೋಕಸಭೆ ಸ್ಥಾನ ಗೆಲ್ಲುವಲ್ಲಿ ಸಹಕಾರಿಯಾಗಬಹುದು. ಅಧಿಕಾರ ಸಿಗದಿದ್ದರೂ, ಮೈತ್ರಿ ಸರಕಾರ ಉರುಳಿದರೆ, ತನಗೆ ಹೆಚ್ಚಿನ ನಷ್ಟವಾಗುವುದು ತಪ್ಪೀತೆಂಬುದೂ ರಾಜಕೀಯ ಲೆಕ್ಕಾಚಾರವಾಗಿರಬಹುದು. ಇದಕ್ಕಾಗಿ ಆರಿಸಿದ ಮಾರ್ಗ ಬಿಜೆಪಿ ವರ್ಚಸ್ಸಿಗೇ ಹಾನಿ ತರುವಂತಿರುವುದು ಸುಳ್ಳಲ್ಲ. 

ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಆಳ್ವಿಕೆ ಬಂದಿರುವುದು ಇದೇ ಮೊದಲೇನಲ್ಲ. ಆದರೆ ಈ ಬಾರಿಯ ಸರಕಾರ ಸದಾ ಅಸ್ಥಿರತೆಯ ನೆರಳಲ್ಲೇ ಸಾಗುತ್ತಿದೆ. ಅಧಿಕಾರ ಬಂದ ಮರುದಿನದಿಂದಲೇ ಈ ಸರಕಾರ ಅಸ್ತಿತ್ವದ ಭೀತಿಯನ್ನು ಎದುರಿಸುತ್ತಿದೆ. ವಿಚಿತ್ರವೆಂದರೆ, ಮೈತ್ರಿ ಸರಕಾರದಲ್ಲಿನ ಪಕ್ಷಗಳಲ್ಲಿನ ಸಮನ್ವಯತೆಯ ಕೊರತೆ, ಅಧಿಕಾರದ ಲೆಕ್ಕಾಚಾರಗಳು ವಿಪಕ್ಷಗಳಿಗೆ ಅವಕಾಶ ಸೃಷ್ಟಿಸುತ್ತಿರುವುದೂ ಸುಳ್ಳಲ್ಲ.  ಹಾಗಾಗಿ ಇದು ವಿಪಕ್ಷ ಮತ್ತು ಆಡಳಿತ ಪಕ್ಷಗಳ “ಟಾಮ್‌ ಆ್ಯಂಡ್‌ ಜೆರಿ’ ಆಟದಂತೆ ತೋರುತ್ತಿದೆ. ಇದರಿಂದ ನಿಜವಾದ ನಷ್ಟವಾಗಿರುವುದು ರಾಜ್ಯಕ್ಕೆ. ಮುಕ್ಕಾಲು ಭಾಗ ರಾಜ್ಯ ಬರದಿಂದ ತತ್ತರಿಸುತ್ತಿದೆ. ಇನ್ನೊಂದೆಡೆ ರೈತರ ಸಾಲಮನ್ನಾ ಭರವಸೆಯನ್ನು ಈಡೇರಿಸಲು ಸರಕಾರ ಹೆಣಗಾಡುತ್ತಿದೆ. ಕರಾವಳಿಯ ಮರಳು ಸಮಸ್ಯೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿದ್ದರೂ ಸರಕಾರ ಮತ್ತು ವಿಪಕ್ಷ ಅದರ ಬಗ್ಗೆ ಗಮನಹರಿಸದೇ ರಾಜಕೀಯದಲ್ಲೇ ಮುಳುಗಿವೆ. ಯಾವ ಇಲಾಖೆಯಲ್ಲೂ ಸರಿಯಾಗಿ ಕೆಲಸವಾಗುತ್ತಿಲ್ಲ ಎಂಬ ದೂರು ಸಾಮಾನ್ಯ. 

ಅತಿ ಹೆಚ್ಚು ಶಾಸಕರಿದ್ದೂ ಬಿಜೆಪಿಗೆ ಅಧಿಕಾರ ದಕ್ಕದಂತೆ ಮಾಡಿದ್ದು ಸಂಖ್ಯಾಬಲದ ನೆಲೆಯಲ್ಲಿ ಸರಿಯಾದ ನಡೆಯೇ ಇರಬಹುದು. ಆದರೆ ನೈತಿಕವಾಗಿ ತಪ್ಪು. ಆಡಳಿತ ಪಕ್ಷಗಳ ಸಮನ್ವಯತೆಯ ಕೊರತೆಯನ್ನು ಬಳಸಿಕೊಂಡು ಅಧಿಕಾರ ಪಡೆಯುವುದಕ್ಕಿಂತ ಅದರ ಲೋಪಗಳನ್ನು ಎತ್ತಿ ಹಿಡಿದು, ಜನರಿಗೆ ವೈಫ‌ಲ್ಯವನ್ನು ಮನದಟ್ಟು ಮಾಡಿಕೊಟ್ಟು ತನ್ನ ಹೊಣೆಗಾರಿಕೆಯನ್ನೂ ಸಮರ್ಥವಾಗಿ ನಿರ್ವಹಿಸಿ ಅಧಿಕಾರ ಪಡೆಯುವುದು ಹೆಚ್ಚು ಸೂಕ್ತ ಮಾರ್ಗ. ಇದು ವಿಪಕ್ಷದ ವರ್ಚಸ್ಸು ಹೆಚ್ಚಿಸುತ್ತದಷ್ಟೇ ಅಲ್ಲ; ಮತ್ತಷ್ಟು ವರ್ಷ ಆಳುವ ಅವಕಾಶವನ್ನು ದಕ್ಕಿಸಿಕೊಡಬಹುದು. ಪ್ರಜಾತಂತ್ರದ ಮೌಲ್ಯವನ್ನೂ ಎತ್ತಿ ಹಿಡಿಯಬಹುದು. ಇದೇ ನ್ಯಾಯಯುತವಾದ ಮಾರ್ಗ. ಅದನ್ನು ಹೊರತುಪಡಿಸಿ ಅನ್ಯ ಮಾರ್ಗ ತುಳಿಯುವ ಎಲ್ಲ ಪಕ್ಷಗಳ ಪ್ರಯತ್ನಗಳೂ ಕಟು ಶಬ್ದಗಳ ಖಂಡನೆಗೆ ಅರ್ಹ. ಅದರೊಂದಿಗೇ ಮೈತ್ರಿ ಸರಕಾರವೂ ತನ್ನೊಳಗಿನ ಲೋಪಗಳನ್ನು ಸರಿಪಡಿಸಿಕೊಂಡು ಅಭಿವೃದ್ಧಿಯ ಕಡೆಗೆ ಮುಖ ಮಾಡಬೇಕು. ಆಡಳಿತ ಪಕ್ಷ ಮತ್ತು ವಿಪಕ್ಷ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವುದು ಸೂಕ್ತ.

Advertisement
Advertisement

Udayavani is now on Telegram. Click here to join our channel and stay updated with the latest news.

Next