ಬೆಂಗಳೂರು: ರಾಜಕೀಯ ಮತ್ತು ಹಣಕಾಸಿನ ವಿಚಾರವಾಗಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರೊಬ್ಬರ ಕಚೇರಿಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ವಿಜಯನಗರದ ಚೋಳರಪಾಳ್ಯದಲ್ಲಿ ಶುಕ್ರವಾರ ನಡೆದಿದೆ.
ಮಹಾಲಕ್ಷ್ಮೀ ಹಲ್ಲೆಗೊಳಾಗದ ಕಾಂಗ್ರೆಸ್ ಕಾರ್ಯಕರ್ತೆ. ವಿಜಯನಗರದ ಚೋಳರಪಾಳ್ಯದ ಕಚೇರಿಯಲ್ಲಿದ್ದ ಮಹಾಲಕ್ಷ್ಮೀ ಮೇಲೆ ಮೂವರು ಯುವಕರು ಹಲ್ಲೆ ನಡೆಸಿದ್ದಾರೆ. ರಾಜಕೀಯ ವೈಷಮ್ಯ ಹಾಗೂ ಹಣಕಾಸಿನ ವಿಚಾರವಾಗಿಯೇ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಹಾಲಕ್ಷ್ಮೀಕಾಂಗ್ರೆಸ್ ಕಾರ್ಯಕರ್ತೆ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘ ಕರ್ನಾಟಕ ವಲಯದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕಚೇರಿಯಲ್ಲಿದ್ದ ವೇಳೆ ನವೀನ್, ರೋಹಿತ್ ಮತ್ತು ಅಪರಿಚಿತನೊಬ್ಬ ಬಂದು ಮಹಾಲಕ್ಷ್ಮೀ ಮೇಲೆ ರಾಡ್‌ನಿಂದ ತಲೆ ಬೆನ್ನು ಹಾಗೂ ಕೈಗಳ ಮೇಲೆ ಹಲ್ಲೆ ಗಂಭೀರವಾಗಿ ಹಲ್ಲೆ ನಡೆಸಿರುವ ದುಷ್ಕರ್ಮಿಗಳು, ಮಹಾಲಕ್ಷ್ಮೀ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಪರಾರಿಯಾಗಿದ್ದಾರೆ.
ಮಹಾಲಕ್ಷ್ಮೀ ಅವರ ಕೂಗಾಟ ಕೇಳಿದ ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಗಳ ಕೃತ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಮಹಾಲಕ್ಷ್ಮೀ ಅವರು ಆರೋಪಿಗಳ ಜತೆ ಹಣಕಾಸಿನ ವ್ಯವಹಾರ ನಡೆಸಿದ್ದರು. ಇದೇ ವಿಚಾರವಾಗಿ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಮಹಾಲಕ್ಷ್ಮೀಅವರ ಬೆಂಬಲಿಗರು ಇದು ರಾಜಕೀಯ ದ್ವೇಷಕ್ಕೆ ನಡೆದಿರುವ ಕೃತ್ಯ. ಸ್ಥಳೀಯ ಕಾರ್ಪೋರೇಟರ್ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.