Advertisement
ಹಿಂದೂ ಧರ್ಮ ಹಾಗೂ ದೇಶದ ರಾಜಕೀಯದ ಕುರಿತಾದ ತಮ್ಮ ಹೇಳಿಕೆಗಳಿಂದಾಗಿ ಶಶಿ ತರೂರ್ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಉದಾಹರಣೆಗೆ ಕಾಂಗ್ರೆಸ್ ಪಕ್ಷ “ಕೋಕ್ ಲೈಟ್’ ಅಥವಾ “ಪೆಪ್ಸಿ ಜೀರೋ’ ಹಾಗೆ ಸಾಫ್ಟ್ ಹಿಂದುತ್ವವನ್ನು ದೇಶದ ಜನತೆಗೆ ಮಾರಲು ನೋಡಿದರೆ ತೊಂದರೆಯಲ್ಲಿ ಸಿಲುಕಿ ಹಾಕಿಕೊಳ್ಳುತ್ತದೆ ಎಂದು ಹೇಳಿದರು. ಅಲ್ಲದೇ, ಸದ್ಯದಲ್ಲಿ ಆಡಳಿತದಲ್ಲಿರುವ ಪಕ್ಷದ ಹಿಂದು ಧರ್ಮದ ಪರಿಕಲ್ಪನೆ “”ವಿಕಾರ ತಿರುಚುವಿಕೆ” (ಗ್ರೊಟೆಸ್ಕ್ ಡಿಫಾರ್ಮಿಟಿ) ಎಂದು ಹೇಳಿದ್ದಾರೆ. ಹೀಗೆ ಹಿಂದುತ್ವ ಹಾಗೂ ಹಿಂದೂ ಧರ್ಮಗಳ ಕುರಿತಾದ ಮರು ಚಿಂತನೆಗೆ ತರೂರ್ ಮುನ್ನುಡಿ ಹಾಡಿದ್ದಾರೆ.
Related Articles
Advertisement
ಎರಡರ ನಡುವಿನ ಸಂಬಂಧದ ಕುರಿತು ಹೇಳುವುದರ ಮೊದಲು ಹಿಂದೂ ಧರ್ಮದ ಮುಖ್ಯ ಗುಣ ಲಕ್ಷಣಗಳನ್ನು ಗಮನಿಸಿಕೊಳ್ಳಬೇಕು. ಜಗತ್ತಿನ ಅತಿ ಪ್ರಾಚೀನ ಧರ್ಮಗಳ ಲ್ಲೊಂದಾದ ಹಿಂದೂ ಧರ್ಮದ ಪ್ರಮುಖ ಅಂಶವೆಂದರೆ ಅದು ಸಾವಿರಾರು ವರ್ಷಗಳ ಕಾಲಮಾನದಲ್ಲಿ ಪ್ರಕೃತಿಯ ನಡುವೆ ಮಾನವ ದೈವತ್ವವನ್ನು ಹುಡುಕಿಕೊಳ್ಳಲು ನಿರಂತರ ನಡೆಸಿದ ಪ್ರಯತ್ನದ ಫಲ.
ಭಾರತದ ಸುಪ್ರೀಂ ಕೋರ್ಟ್ ಸರಿಯಾಗಿಯೇ ಹೇಳಿರುವಂತೆ ಅದೊಂದು ನಿರ್ದಿಷ್ಟ ಸ್ವರೂಪದ ಧರ್ಮವಲ್ಲ. ಒಂದು ಜೀವನ ವಿಧಾನ. ದೇವರ ಅಸ್ಮಿತೆಯ ಕುರಿತಾಗಿ, ದೇವರು ಮತ್ತು ಮನುಷ್ಯರ ಸಂಬಂಧದ ಕುರಿತಾಗಿ ಸತತವಾಗಿ ಚಿಂತಿಸುತ್ತಾ ಆಂತರಿಕ ಭಿನ್ನಾಭಿಪ್ರಾಯಗಳನ್ನು, ಬಂಡಾಯಗಳನ್ನು ಹೊಂದಿ ಅವೆಲ್ಲವನ್ನೂ ತನ್ನೊಡಲಿನೊಳಗೆ ತುಂಬಿಕೊಳ್ಳುತ್ತಲೇ ಮುನ್ನಡೆದ ಧರ್ಮ ಅದು. ತಿಳಿದಂತೆ ಹಿಂದೂ ಧರ್ಮದೊಳಗೇ ನೂರಾರು ಪರಂಪರೆಗಳಿವೆ. ಆಚರಣೆಗಳಿವೆ. ಆರಾಧನಾ ವಿಧಾನಗಳಿವೆ. ಕುತೂಹಲವೆಂದರೆ ದೈವತ್ವದ ಪರಿಕಲ್ಪನೆಯನ್ನು ಕೂಡ ನೇರವಾಗಿ ಹೀಗೆ ಎಂದು ಹಿಡಿದಿಡಲು ಹಿಂದೂ ಧರ್ಮ ಪ್ರಯತ್ನಿಸುವುದೇ ಇಲ್ಲ. ಅಂತಹ ಪರಿಕಲ್ಪನೆಯನ್ನೇ ಅದು ವಿರೋಧಿಸುತ್ತದೆ.
ಧಾರ್ಮಿಕತೆ ತೀರ ಖಾಸಗಿ ವಿಚಾರ. ಭಕ್ತ ಆರಾಧ್ಯ ದೈವದ ಜತೆ ನಡೆಸುವ ಅನುಸಂಧಾನ ಅದು ಎಂಬ ಅರಿವು ಹಿಂದೂ ಧರ್ಮಕ್ಕಿದೆ. ಹಾಗಾಗಿಯೇ ಕೆಲವು ಚಿಂತನ ವಿಧಾನಗಳಲ್ಲಿ ದೈವತ್ವದ ಪರಿಕಲ್ಪನೆಯನ್ನು ಅದು ವಿವರಿಸುವುದು ನಕಾರಾತ್ಮಕವಾಗಿ. ನೇತಿ ಅಂದರೆ ಇದು ಅಲ್ಲ ಎಂದು. ಯಾವುದು ಎನ್ನುವುದನ್ನು ಅದು ಹೇಳುವುದಿಲ್ಲ. ಅದನ್ನು ಭಕ್ತ ಕಂಡುಕೊಳ್ಳಬೇಕು. ಅದು ಅನುಭಾವದ ವಿಷಯ. ಹೀಗೆ ಅದು ಎಂದರೆ ಏನು ಎನ್ನುವುದನ್ನು ಹಿಂದೂ ಧರ್ಮ ನಿಗೂಢವಾಗಿಯೇ ಉಳಿಸುತ್ತದೆ. ಮೂರ್ತಿ ಪೂಜೆ ಇದ್ದರೂ ಧಾರ್ಮಿಕ ಅನುಭವ ತೀರಾ ಅಮೂರ್ತವಾದದ್ದು ಹಾಗೂ ವೈಯಕ್ತಿಕವಾದದ್ದು ಎನ್ನುವ ಕಲ್ಪನೆ ಅಲ್ಲಿ ಇದೆ. ಕುಂಭ ಮೇಳವನ್ನು ಗಮನಿಸಿದರೆ ಹಿಂದೂ ಧರ್ಮದಲ್ಲಿ ದೇವರನ್ನು ಕಂಡುಕೊಳ್ಳುವ ವೈವಿಧ್ಯತೆ ಮತ್ತು ಕೇಂದ್ರ ರಹಿತತೆ ಅರ್ಥವಾಗುತ್ತದೆ.
ಹೀಗೆ ಹಿಂದೂ ಧರ್ಮ ಒಂದು ಕೇಂದ್ರ ರಹಿತವಾದ ಹಾಗೂ ವಿಕೇಂದ್ರೀಕೃತವಾದ ಧರ್ಮ. ಜತೆಗೇ ಕೇಂದ್ರವನ್ನು ನಿರಚನಗೊಳಿ ಸುವುದೇ ಹಿಂದೂ ಧರ್ಮದ ಸ್ವರೂಪ. ಹೀಗಾಗಿಯೇ ಹಿಂದೂ ಧರ್ಮ ರಾಜಕೀಯ ಸ್ವರೂಪವನ್ನು ಹೊಂದಿ ಬೆಳೆದ ಧರ್ಮ ಅಲ್ಲ. ಹಾಗೆಂದರೇನೆಂಬುದನ್ನು ಹೇಳಿಕೊಳ್ಳಬೇಕು. ರಾಜಕೀಯವಿರುವಲ್ಲಿ ಒಂದು ಕೇಂದ್ರವಿರುತ್ತದೆ. ಅಥವಾ ರಾಜಕೀಯ ಒಂದು ಕೇಂದ್ರವನ್ನು ಸೃಷ್ಟಿಸುತ್ತದೆ. ಹೀಗೆ ಸೃಷ್ಟಿಸುವ ಮೂಲಕ ಅದು ಇನ್ನೊಂದು ಕೇಂದ್ರವನ್ನು ಈ ಕೇಂದ್ರದಿಂದ ಪ್ರತ್ಯೇಕಿಸಲು ಪ್ರಯತ್ನಿಸುತ್ತದೆ. ಅದರಿಂದ ಇದನ್ನು ಪ್ರತ್ಯೇಕಿಸಿ ಶಕ್ತಿ ಕೇಂದ್ರವನ್ನು ಬೆಳೆಸುವುದೇ ರಾಜಕೀಯದ ಮೂಲ ಸ್ವರೂಪ. ಹೀಗೆ ರಾಜಕೀಯವೆಂದರೆ ಒಂದು ಕೇಂದ್ರವನ್ನು ಸೃಷ್ಟಿಸುವ ಮತ್ತು ಅದನ್ನು ಇನ್ನೊಂದರಿಂದ ಪ್ರತ್ಯೇಕಿಸುವ ಕ್ರಿಯೆ. ಈ ಹಿನ್ನೆಲೆಯಲ್ಲಿ ಹಿಂದೂ ಧರ್ಮವನ್ನು ನೋಡಿಕೊಂಡರೆ ಸುಲಭವಾಗಿ ಅರ್ಥವಾಗುವ ವಿಷಯವೆಂದರೆ ಹಿಂದೂ ಧರ್ಮ ಒಂದು ಕೇಂದ್ರ ಶಿಲೆಯನ್ನು ಅಥವಾ ವಸ್ತುವನ್ನು ಹೊಂದಿದ ಧರ್ಮವಲ್ಲ. ಅಥವಾ ಅದು ಸುಲಭವಾಗಿ ಒಂದು ರಾಜಕೀಯ ಕೇಂದ್ರವನ್ನು ಬೆಳೆಸಿಕೊಳ್ಳಬಲ್ಲಂತಹ ಧರ್ಮವಲ್ಲ.
ಮೂಲತಃ ಹಿಂದೂ ಧರ್ಮ ರಾಜಕೀಯೇತರವಾದದ್ದು. ಹಿಂದೂ ಧರ್ಮದ ವೈಶಿಷ್ಟತೆ ಮತ್ತು ಶ್ರೇಷ್ಠತೆ ಎಂದರೆ ಈಗಾಗಲೇ ಹೇಳಿದ ಹಾಗೆ ಕೇಂದ್ರ ರಹಿತತೆ ಹಾಗೂ ಪಾರಮಾರ್ಥಿಕತೆ. ಅಲ್ಲಿ ಬದುಕು ಇರುವುದು ಸಾವಿಗಾಗಿ. ಅಂದರೆ ಸಾವಿನ ಹಿಂದಿರುವ ಮೋಕ್ಷಕ್ಕಾಗಿ. ಹೀಗೆ ಇಹಕ್ಕಿಂತಲೂ ಮುಖ್ಯವಾದದ್ದು ಪರ. ಅಲ್ಲದೇ ಹಿಂದೂ ಧರ್ಮದ ಪರಿಕಲ್ಪನೆಯಲ್ಲಿ ಆತ್ಮವನ್ನು ಗೆಲ್ಲುವುದು ರಾಜ್ಯವನ್ನು ಗೆಲ್ಲುವುದಕ್ಕಿಂತಲೂ ದೊಡ್ಡದು. ಬಹುಶಃ ಇಂತಹ ಮನಸ್ಥಿತಿಯಿಂದಾಗಿಯೇ ಅಖಂಡ ಭಾರತ ದೊಡ್ಡ ಪ್ರಮಾಣದ ಹಿಂದೂ ಜನಸಂಖ್ಯೆಯನ್ನು ಹೊಂದಿದ್ದರೂ ಕೂಡ, ಐತಿಹಾಸಿಕವಾಗಿ ಒಂದು ರಾಜಕೀಯ ಕೇಂದ್ರ ಬಿಂದುವನ್ನು ಕಟ್ಟಿಕೊಳ್ಳಲಿಲ್ಲ. ಅಕºರನಂತಹ ಒಬ್ಬ ದೊರೆಯನ್ನು ಸೃಷ್ಟಿಸಲಿಲ್ಲ. ದೊಡ್ಡ ಹಿಂದೂ ಸೈನ್ಯಕಟ್ಟಿ ಬೇರೆ ದೇಶಗಳ ಮೇಲೆ ದಾಳಿ ಇಡಲಿಲ್ಲ. ಇದಕ್ಕೆ ಅನಿಸುವಂತೆ ಇರುವ ಮೂಲ ಕಾರಣ ಹಿಂದೂ ಧರ್ಮದ ರಾಜಕೀ ಯೇತರ ಮಾನಸಿಕತೆಯೇ. ಹೊರಗಿನಿಂದ ಬಂದ ಧರ್ಮಗಳ ವಿಭಿನ್ನತೆಗಳನ್ನು ಒಪ್ಪಿಕೊಂಡು ಅವಕ್ಕೆ ಪ್ರತಿರೋಧ ಒಡ್ಡದಿರುವ ಮನಸ್ಥಿತಿಯನ್ನು ಹಿಂದೂ ಧರ್ಮ ಬೆಳೆಸಿಕೊಂಡಿದ್ದು ಕೂಡ ಅದರ ಮೂಲಭೂತವಾದ ಮುಕ್ತ ಮನೋಭಾವದ ಕಾರಣದಿಂದಲೇ.
ಈಗ ಹಿಂದುತ್ವವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಬಹುಶಃ ಹಿಂದುತ್ವ ಎಂದರೆ ಹಿಂದೂ ಧರ್ಮವೇ ಅಲ್ಲ. ಹಿಂದೂ ಧರ್ಮ ಅದರ ಆಧಾರ ಸ್ತಂಭ ಹೌದು. ಆದರೆ ಹಿಂದುತ್ವ, ಧರ್ಮದ ರಾಜಕೀಯ ಐಕ್ಯತೆಯ ಮುಖ ಎಂದೇ ಭಾವನೆ. ಅದುಬಲವಾದ ರಾಷ್ಟ್ರೀಯತೆಯ ಆಧಾರ ಪರಿಕಲ್ಪನೆ. ಹಿಂದೂ ಧರ್ಮದೊಳಗಿರುವ ವೈವಿಧ್ಯತೆಗಳೆಲ್ಲವೂ ರಾಜಕೀಯವಾಗಿ ಒಂದುಗೂಡುವ ಒಂದು ವಿಶಾಲವಾದ ರಾಷ್ಟ್ರೀಯತೆಯ ಕೊಡೆ ಹಿಂದುತ್ವ. “ಹಿಂದುತ್ವ’ದಲ್ಲಿ ಜಾತಿ ಇತ್ಯಾದಿ ಇಲ್ಲ. ಧಾರ್ಮಿಕ ಆಚರಣೆಗಳ ಕುರಿತಾದ ನಿಬಂಧನೆಗಳೆಲ್ಲ ಅಲ್ಲಿ ಇಲ್ಲ. ಬಹುಶಃ ಅದೊಂದು ಹಿಂದೂ ಧರ್ಮದ ಸುಲಭ, ಸರಳ, ರಾಷ್ಟ್ರೀಯತೆಯ ಪರಿಕಲ್ಪನೆ.
ಇಂದಿನ ಹಿಂದುತ್ವದ ದೊಡ್ಡ ಪ್ರಮಾಣದ ಬೆಂಬಲಿಗರು ಶಹರಗಳ ನಿವಾಸಿಗಳು, ಕೆಳ ಮತ್ತು ಮಧ್ಯಮ ವರ್ಗಗಳು ಮತ್ತು ಯುವ ಜನತೆ. ಹೆಚ್ಚಾಗಿ ಆರ್ಥಿಕವಾಗಿ ಸಬಲರಾದವರು (ಬಹುಶಃ ಎಲ್ಲ ಜಾತಿ ಧರ್ಮಗಳವರು?) ಎಲ್ಲರೂ ಸೇರಿಕೊಂಡಿದ್ದಾರೆ. ಅವರು ಧರ್ಮದ, ಜಾತಿ ಆಧರಿತ ಧಾರ್ಮಿಕ ಆಚರಣೆಗಳ ವಿಷಯದಲ್ಲಿ ಒಬ್ಬರನ್ನೊಬ್ಬರು ಒಪ್ಪದಿರಬಹುದು ಕೂಡ.
ಇನ್ನೂ ಕುತೂಹಲದ ವಿಷಯವೆಂದರೆ ಹೆಚ್ಚು ಹೆಚ್ಚಿನ ಜನ ಆರ್ಥಿಕವಾಗಿ ಸಬಲರಾಗುತ್ತಾ ಹೋದಂತೆ ಹಿಂದುತ್ವದ ಬೆಂಬಲಿಗರಾಗಿ ಮಾರ್ಪಾಡಾಗುತ್ತಿ ರುವುದನ್ನು ಗಮನಿಸಬೇಕು. ಧರ್ಮಕ್ಕೆ ಮತ್ತು ಆರ್ಥಿಕ ಸಬಲತೆಗೆ ಏನೋ ಒಂದು ಸಂಬಂಧವಿರುವುದನ್ನು ಅರಿಯಬೇಕಿದೆ. ಈ ವರ್ಗ ಹಿಂದುತ್ವದ ಮೂಲಕ ಬಯಸುವುದು ಸಾಮಾಜಿಕ ಸ್ಥಿರತೆ, ದೇಶದ ಸುಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿ. ದೇಶದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ವೀಕ್ ಆಗಿರುವುದರಿಂದಲೇ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಕೊರಗು ಬಹುಶಃ ಇದೇ. ಏಕೆಂದರೆ ಈ ವರ್ಗ ತನ್ನ ಜೀವನ ಶೈಲಿಯಲ್ಲಿ ಪಾಶ್ಚಾತ್ಯೀಕರಣಗೊಂಡ ಜನ ಸಮೂಹ. ಹಿಂದೂ ಧರ್ಮದ ಲಿಬರಲ್ ಸಾಂಸ್ಕೃತಿಕ ಸ್ವರೂಪವನ್ನಿಟ್ಟುಕೊಂಡು
ಪಾಶ್ಚಾತ್ಯ ಜೀವನ ಶೈಲಿಗೆ ಒಗ್ಗಿಕೊಂಡು ಬದುಕಲು ಇಚ್ಛಿಸುವ ವರ್ಗ ಇದು.ಇಷ್ಟೆಲ್ಲವನ್ನು ಏಕೆ ಹೇಳಿಕೊಳ್ಳಬೇಕೆಂದರೆ ಇಂದಿನ ಹಿಂದುತ್ವವನ್ನು ಅದರ ಬೆಂಬಲಿತ ವರ್ಗ ಒಂದು ಚಲನಶೀಲ ರಾಷ್ಟ್ರೀಯತೆಯ ಪರಿಕಲ್ಪನೆಯನ್ನಾಗಿ ನೋಡುತ್ತದೆ. ಬಹುಶಃ ಅದು ಹಿಂದುತ್ವವನ್ನು ಹಿಂದೂ ಧರ್ಮದ ಸಾಂಸ್ಕೃತಿಕ/ರಾಜಕೀಯ ಮುಂಚೂಣಿ
ಯನ್ನಾಗಿ ನೋಡುತ್ತದೆ. ಪ್ರಶ್ನೆ ಇರುವುದು ಹಿಂದೂ ಧರ್ಮ ತನಗಾಗಿ ಒಂದು ಪ್ರತ್ಯೇಕವಾದ ಹೊರ ಸ್ವರೂಪವನ್ನು ಏಕೆ ಸೃಷ್ಟಿಸಿತು ಎನ್ನುವುದು. ಹಲವು ಕಾರಣಗಳಿವೆ. ಒಂದನೆಯದು ಬಹುಶಃ ಹಿಂದೂ ಧರ್ಮ ಎದುರಿಸಿದ ಒತ್ತಡಗಳು ಎಂದೇ ಹೇಳಬೇಕು. ಇಂತಹ ಹಲವರು ಭಾವಿಸುವಂತೆ ಸರಮಾಲೆಯಾಗಿ ಬಂದಿದ್ದು ಕೆಲವು ಸಮಾಜವಾದಿ ಚಿಂತಕರಿಂದ. ಬಹುಶಃ ಕೆಲವರ ಸಮಾಜವಾದಿ ಚಿಂತನೆ ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಿಸಿದ್ದೇ ಹಿಂದುತ್ವದ ಬಲವಾದ ಬೆಳವಣಿಗೆಗೆ ಕಾರಣ. ಸಮಾಜವಾದಿ ಚಳವಳಿಯ ಕೆಲವರು ಹಿಂದು ಧರ್ಮದ ಗಾಂಧಿ ಎತ್ತಿ ಹಿಡಿದ ಅಂಶಗಳನ್ನೂ ಗೌರವಿಸಲಿಲ್ಲ, ಇಂದಿಗೂ ಗೌರವಿಸುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಅಲ್ಲದೆ ಹಿಂದೂ ಮನಸ್ಸಿಗೆ ತೀವ್ರ ನೋವಾಗುವ ರೀತಿಯ ಹೇಳಿಕೆಗಳು ಮತ್ತು ಕೃತ್ಯಗಳು ನಡೆದಿದ್ದು ಸಮಾಜವಾದದ ಹೆಸರಿನಲ್ಲಿ. ಸಾರ್ವಜನಿಕವಾಗಿ, ಸೆಮಿನಾರುಗಳಲ್ಲಿ ಗೋಮಾಂಸ ಭಕ್ಷಣೆಯ ಘಟನೆಗಳನ್ನು ನೆನಪಿಸಿಕೊಳ್ಳಬೇಕು. ಹಿಂದುತ್ವ ಎನ್ನುವ ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಕಲ್ಪನೆ ಹುಟ್ಟಿಕೊಂಡಿದ್ದು ಬಹುಶಃ ಹೀಗೆ. ಪ್ರತಿಕ್ರಿಯಾತ್ಮಕವಾಗಿ. ಹಾಗೆಯೇ ಹಿಂದುತ್ವ ಹೆಮ್ಮರವಾಗಿ ಬೆಳೆಯಲು ಕಾರಣವಾದದ್ದು- ಓಲೈಕೆಯ ರಾಜಕೀಯ. ಶಾಬಾನೂ ಪ್ರಕರಣ ಮತ್ತು ನಂತರ ವಿ.ಪಿ. ಸಿಂಗ್ ರಾಜಕೀಯ ಸಂಸ್ಕೃತಿ ಇತ್ಯಾದಿ. ಇನ್ನು, ಮೂಲತಃ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದ್ದ ಹಿಂದುತ್ವಕ್ಕೆ ಒಂದು ರಾಷ್ಟ್ರೀಯ ಸ್ವರೂಪ ನೀಡಿದ್ದು ದೇಶದಲ್ಲಿ ಹುಟ್ಟಿಕೊಂಡ ಇಂಟರ್‌ನೆಟ್ ಕ್ರಾಂತಿ. ಜತೆಗೆ ಒಳಗೊಳಗೇ ಬಲಗೊಳ್ಳುತ್ತಿದ್ದ ಹಿಂದುತ್ವ ಚಳವಳಿಗೆ ಹೆಚ್ಚಿನ ಶಕ್ತಿ ನೀಡಿದ್ದು ಜಾಗತೀಕರಣ. ಅದು ಮುಖ್ಯವಾಗಿ ದೇಶದ ಯುವಕ ಯುವತಿಯರಿಗೆ ಹೆಚ್ಚಿನ ಆರ್ಥಿಕ ಶಕ್ತಿ ನೀಡಿತು. ಆರ್ಥಿಕವಾಗಿ ಸಬಲವಾಗುತ್ತ ಹೋದಂತೆ ಜನಾಂಗವೊಂದು ತನ್ನ ಇತಿಹಾಸವನ್ನು ಮರು ಸೃಷ್ಟಿಸಿಕೊಳ್ಳುತ್ತದೆ. ಅಲ್ಲದೆ ಆ ಜನಾಂಗಕ್ಕೆ ಬೇಕಿರುವುದು ಡೈನಮಿಕ್ ಆಗಿರುವ ಒಂದು ಧಾರ್ಮಿಕ ರಾಜಕೀಯ ಸ್ವರೂಪ. ಅದನ್ನು ಒದಗಿಸಿದ್ದು ಹಿಂದುತ್ವ. ಇನ್ನೂ ಒಂದು ಮಹತ್ವದ ಕಾರಣವನ್ನು ಗಮನಿಸಬೇಕು. ಅದೇನೆಂದರೆ ಯುವ ಜನತೆಯ ಮನಸ್ಸಿನಲ್ಲಿರುವ, ದೇಶವನ್ನು ಜಾಗತಿಕ ಶಕ್ತಿಯಾಗಿ ನೋಡುವ ಆಸೆ. ಈಗಾಗಲೇ ಹೇಳಿದಂತೆ ಆರ್ಥಿಕತೆ ಬೆಳೆದಂತೆ ಈ ಆಸೆಯೂ ಬಲಗೊಳ್ಳುತ್ತಿದೆ. ಹಾಗಾಗಿಯೇ ಹಿಂದುತ್ವ ಆಧರಿತ ರಾಷ್ಟ್ರೀಯತೆಗೆ ದೇಶದಾದ್ಯಂತ ಭಾರೀ ಜನಬೆಂಬಲ ವ್ಯಕ್ತವಾಗಿರುವುದು. ಹೀಗೆ ಹಿಂದುತ್ವ ಒಂದು ಸಾಮಾಜಿಕ ಉತ್ಪನ್ನ. ಹಿಂದೂ ಸಾಂಸ್ಕೃತಿಯತೆಯ ಕುತೂಹಲಕಾರಿ ರಾಜಕೀಯ ಹೊರರೂಪ. ಅದನ್ನು “”ವಿಕಾರ ತಿರುಚುವಿಕೆ”ಎಂದು ಪರಿಗಣಿಸಿ ಬದಿಗೆ ಸರಿಸುವುದು ಬಹುಶಃ ಸಮಕಾಲೀನ ಸಂಸ್ಕೃತಿಯ, ಹಿಂದೂ ಧಾರ್ಮಿಕತೆಯ ತಪ್ಪು ಓದು. ಹಿಂದೂ ಧರ್ಮ ಹಾಗೂ ಹಿಂದುತ್ವ ಪರಿಕಲ್ಪನೆಗಳನ್ನು ಇನ್ನೂ ಆಳವಾಗಿ ಅಧ್ಯಯಿಸಬೇಕಿದೆ. ತರೂರ್ ಈ ವಿಷಯಗಳನ್ನು ಗಮನಿಸಬೇಕು. ಡಾ. ಆರ್.ಜಿ. ಹೆಗಡೆ