Advertisement

ಶಾಲಾ ವಾಸ್ತವ್ಯದ ಹೆಸರಲ್ಲಿ ರಾಜಕೀಯ ನಾಟಕ

07:10 AM Jun 06, 2019 | Lakshmi GovindaRaj |

ಬೆಂಗಳೂರು: “ರಾಜ್ಯದ ಮೈತ್ರಿ ಸರ್ಕಾರ ಬದುಕಿದ್ದೂ ಸತ್ತಂತಿದೆ. ವಿಧಾನಸೌಧ ಖಾಲಿಯಾಗಿದೆ. ಬರದಿಂದ ತತ್ತರಿಸಿರುವ ಜನರಿಗೆ ಸ್ಪಂದಿಸುವುದನ್ನು ಬಿಟ್ಟು ಮುಖ್ಯಮಂತ್ರಿಯವರು ಶಾಲಾ ವಾಸ್ತವ್ಯದ ಹೆಸರಲ್ಲಿ ರಾಜಕೀಯ ದೊಂಬರಾಟ ಆಡಲು ಮುಂದಾಗಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಿಡಿ ಕಾರಿದರು.

Advertisement

ನಗರದ ಅರಮನೆ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಸಂಸದರನ್ನು ಅಭಿನಂದಿಸಿ ಅವರು ಮಾತನಾಡಿದರು. ಈ ಹಿಂದೆ ಮುಖ್ಯಮಂತ್ರಿಯವರು ಗ್ರಾಮ ವಾಸ್ತವ್ಯ ನಡೆಸಿದ ಹಳ್ಳಿಗಳು ಇಂದಿಗೂ ದು:ಸ್ಥಿತಿಯಲ್ಲಿವೆ. ಇದೀಗ ಶಾಲಾ ವಾಸ್ತವ್ಯ ಮಾಡುವುದಾಗಿ ರಾಜಕೀಯ ದೊಂಬರಾಟ ಶುರು ಮಾಡಿದ್ದಾರೆ. ಅವರ ವಾಸ್ತವ್ಯಕ್ಕೆ ನಮ್ಮ ವಿರೋಧವಿಲ್ಲ.

ಇಷ್ಟು ದಿನ ತಾರಾ ಹೋಟೆಲ್‌ನಲ್ಲಿದ್ದ ಮುಖ್ಯಮಂತ್ರಿಯವರು ಇದೀಗ ಶಾಲೆಯಲ್ಲಿ ವಾಸ್ತವ್ಯ ಹೂಡುವುದಾಗಿ ಹೇಳಿದ್ದಾರೆ. ಧರ್ಮಸ್ಥಳದಲ್ಲೇ ನೀರಿನ ಅಭಾವ ಸೃಷ್ಟಿಯಾಗಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀರಿನ ಕೊರತೆ ಕಾರಣಕ್ಕೆ ಶ್ರೀಕ್ಷೇತ್ರಕ್ಕೆ ಬಾರದಂತೆ ಭಕ್ತರಲ್ಲಿ ಮನವಿ ಮಾಡಿದ್ದು, ಕೆಟ್ಟ ಕಾಲ ಬಂದಂತಾಗಿದೆ. ಮೊದಲು ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ತತ್ತರಿಸಿರುವ ಜನರಿಗೆ ಸ್ಪಂದಿಸಲಿ. ನಂತರ, ಎಲ್ಲಿ ಬೇಕಾದರೂ ವಾಸ್ತವ್ಯ ಹೂಡಲಿ ಎಂದು ಹೇಳಿದರು.

ಸಂಸದರಿಗೆ ಸಲಹೆ: ನಮ್ಮ ನಿರೀಕ್ಷೆ ಮೀರಿ ರಾಜ್ಯದ ಜನ ಬಿಜೆಪಿಯನ್ನು ಬೆಂಬಲಿಸಿದ್ದು, ನಮಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ ಜತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮಾದರಿ ರಾಜ್ಯವನ್ನಾಗಿ ರೂಪಿಸಬೇಕೆಂಬ ನಿರೀಕ್ಷೆ ತಲುಪಲು ಕೇಂದ್ರ ಸಚಿವರು, ಸಂಸದರು ಶ್ರಮಿಸಬೇಕು ಎಂದು ಬಿಎಸ್‌ವೈ ಕಿವಿಮಾತು ಹೇಳಿದರು.

ಜೋಶಿ, ಅನಂತ್‌ ಗೈರು: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದರಾದ ರಮೇಶ್‌ ಜಿಗಜಿಣಗಿ, ಅನಂತ ಕುಮಾರ್‌ ಹೆಗಡೆ ಗೈರಾಗಿದ್ದರು. ಸಂಸದರಿಗೆ ಸಂವಿಧಾನದ ಪ್ರತಿ ನೀಡಿ ಗೌರವಿಸಲಾಯಿತು. ಇದಕ್ಕೂ ಮೊದಲು ಸಂಸದರನ್ನು ಪುಷ್ಪವೃಷ್ಟಿ ಮಾಡಿ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕರ್ತರಿಗೂ ಪುಷ್ಪವೃಷ್ಟಿ ಸುರಿಸಿ, ಅಭಿನಂದನೆ ಸಲ್ಲಿಸಲಾಯಿತು.

Advertisement

ಚಿಂಚೋಳಿ ಶಾಸಕ ಅವಿನಾಶ್‌ ಜಾಧವ್‌ ಅವರನ್ನು ಸನ್ಮಾನಿಸಲಾಯಿತು. ನಾನಾ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಪಿ.ಅರುಣ್‌ ಕುಮಾರ್‌, ಹಿರಿಯ ನಾಯಕರಾದ ಬಿ.ಶ್ರೀರಾಮುಲು, ನಗರ ಬಿಜೆಪಿ ಅಧ್ಯಕ್ಷ ಪಿ.ಎನ್‌.ಸದಾಶಿವ ಇತರರು ಪಾಲ್ಗೊಂಡಿದ್ದರು.

ತಾಕತ್ತಿದ್ದರೆ ಪರಮೇಶ್ವರ್‌ರನ್ನು ಸಿಎಂ ಮಾಡಲಿ: ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಏಳು ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಕೇಂದ್ರ ಸಂಪುಟದಲ್ಲಿ ಒಬ್ಬ ದಲಿತ ಸಂಸದರಿಗೂ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್‌ನ ಮುಖಂಡರೊಬ್ಬರು ಹೇಳಿದ್ದಾರೆ. ರಾಜ್ಯದ ದಲಿತ ಸಂಸದರೊಬ್ಬರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವಂತೆ ನಾನು ಹಾಗೂ ಕೇಂದ್ರ ಸಚಿವ ಸದಾನಂದಗೌಡ ಅವರು ಪ್ರಧಾನಿ ಬಳಿ ಮನವಿ ಮಾಡಿದ್ದೇವೆ. ಆ ಬಗ್ಗೆ ಚಿಂತಿಸುವುದು ಬೇಡ. ಅವರ ಪಕ್ಷದಲ್ಲೇ ಇರುವ ಪರಮೇಶ್ವರ್‌ ಅವರನ್ನು ತಾಕತ್ತಿದ್ದರೆ ಮುಖ್ಯಮಂತ್ರಿ ಮಾಡಿ ತೋರಿಸಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರೇಳದೇ ಯಡಿಯೂರಪ್ಪ ಸವಾಲು ಹಾಕಿದರು.

ಸರ್ಕಾರ ಇಂದು ಬೀಳಬಹುದು, ನಾಳೆ ಬೀಳಬಹುದು. ಚುನಾವಣೆ ಯಾವಾಗ ಎದುರಾದರೂ ಸಂಘಟನೆಯ ಮೂಲಕ ವಿಶೇಷ ಸರ್ಕಾರ ರಚಿಸುವ ಪ್ರತಿಜ್ಞೆ ಮಾಡಿ ಇಲ್ಲಿಂದ ಹೊರಡಬೇಕು. ಗ್ರಾಮ ಪಂಚಾಯ್ತಿಯಿಂದ ಸಂಸತ್ತಿನವರೆಗೆ ಗೆಲ್ಲುವ ಉತ್ಸಾಹದಲ್ಲಿ ಮುನ್ನಡೆಯೋಣ.
-ಕೆ.ಎಸ್‌.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ

ಪರಸ್ಪರರ ಬೆನ್ನಿಗೆ ಚೂರಿ ಹಾಕಿಕೊಂಡವರೆ ಈಗ ಅಕ್ಕಪಕ್ಕ ಕುಳಿತು ಮಾತನಾಡುತ್ತಿದ್ದಾರೆ. ಜೆಡಿಎಸ್‌ ರಾಜ್ಯಾಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ದೇವೇಗೌಡ, ನಿಖೀಲ್‌ ಕುಮಾರಸ್ವಾಮಿ ಸೋತಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಸರ್ಕಾರಕ್ಕೆ ದಿನಗಣನೆ ಶುರುವಾಗಿದೆ. ಯಾವಾಗ, ಏನು ಬೇಕಾದರೂ ನಡೆಯಬಹುದು.
-ಜಗದೀಶ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ

ರಾಜ್ಯದಲ್ಲಿ ಪಕ್ಷೇತರರು ಸೇರಿ 26 ಸ್ಥಾನವನ್ನು ಬಿಜೆಪಿ ಗೆದ್ದಿದ್ದು, ರಾಜ್ಯದ ಎಲ್ಲ ಆಗು ಹೋಗುಗಳಿಗೆ ನಾವೇ ಜವಾಬ್ದಾರಿ ಎಂಬ ಸಂದೇಶ ಸಾರಿದೆ. ದೆಹಲಿಯಲ್ಲಿ ಕಚೇರಿ ಆರಂಭಿಸಿದಂತೆ 15 ದಿನಕ್ಕೊಮ್ಮೆ ರಾಜ್ಯ ಬಿಜೆಪಿ ಕಚೇರಿಯಲ್ಲೂ ಅರ್ಧ ದಿನ ಇದ್ದು, ಕಾರ್ಯಕರ್ತರ ಅಹವಾಲು ಆಲಿಸಲು ನಿರ್ಧರಿಸಲಾಗಿದೆ.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಭಾರತ ಗೆಲ್ಲಬೇಕು ಎಂಬ ಭಾವನೆಯಿಂದ ಜನ ಬಿಜೆಪಿಗೆ ಮತ ಹಾಕಿದ್ದಾರೆ. ಅಭ್ಯರ್ಥಿ ಯಾರೆಂದು ನೋಡದೆ ಜಾತಿ, ಭಾಷೆ, ಗಡಿ ಮೀರಿ ಮತದಾನ ಮಾಡಿದ್ದಾರೆ. ಇಡೀ ದೇಶದಲ್ಲಿ ಎಲ್ಲ ಭಾಷೆ, ಜನರನ್ನು ಜೋಡಿಸುವ ರೈಲ್ವೆ ಖಾತೆ ನೀಡಿರುವುದಕ್ಕೆ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ.
-ಸುರೇಶ್‌ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next