Advertisement
ಸಿದ್ಧಾಂತ ಗಾಳಿಗೆ: ಹಲವು ವರ್ಷ ಒಂದೇ ಪಕ್ಷದಲ್ಲಿದ್ದು ಆ ಪಕ್ಷದ ಸಿದ್ಧಾಂತವನ್ನು ಮೈ ಗೂಡಿಸಿಕೊಂಡಿದ್ದ ನಾಯಕರು ಪ್ರಮುಖ ಹುದ್ದೆ ಅಲಂಕರಿಸಿದ್ದರು. ಆದರೆ, ಈ ಬಾರಿ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಸ್ವ ಪಕ್ಷದ ಸಿದ್ಧಾಂತಕ್ಕೆ ತಿಲಾಂಜಲಿ ಹೇಳಿ ಪûಾಂತರ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಉಳಿದುಕೊಳ್ಳಲು ಟಿಕೆಟ್ ಒಂದೇ ಮಾನದಂಡ ಎಂಬಂತೆ ಆಗಿದೆ. ಈಗಾಗಲೇ ಅಧಿಕಾರ ಅನುಭವಿಸಿರುವ ಹಾಗೂ ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಹಾರಲು ಮುಂದಾಗಿರುವುದು ರಾಜಕೀಯ ಪಕ್ಷಗಳ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
Related Articles
Advertisement
ಬಂಡಾಯದ ಬಿಸಿ: ಪ್ರಮುಖ ಪಕ್ಷಗಳಲ್ಲಿ ಟಿಕೆಟ್ ಕೇಳಿ ವಂಚಿತರಾದವರು ಪಕ್ಷದ ವಿರುದ್ಧ ಸಿಡಿದೆದ್ದು ಪಕ್ಷೇತರರಾಗಿ ನಿಲ್ಲಲು ಸಿದ್ಧತೆ ನಡೆಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಜೆಡಿಎಸ್‌ನಿಂದ ಟಿಕೆಟ್ ವಂಚಿತರಾದ ನರಸೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕುಣಿಗಲ್‌ನಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತ ರಾಜೇಶ್‌ಗೌಡರು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಯಾವ ಕ್ಷೇತ್ರಗಳಲ್ಲಿ ಪಕ್ಷಾಂತರ? : ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರು ಬಂಡಾಯವೆದ್ದು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ ಬದ್ಧ ವೈರಿಗಳಂತೆ ವರ್ತಿಸುತ್ತಿದ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹೊನ್ನಗಿರಿಗೌಡ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಎನ್. ಬೆಟ್ಟಸ್ವಾಮಿ ಟಿಕೆಟ್ ಕೈ ತಪ್ಪುತ್ತಿದ್ದಂತೆ ಜೆಡಿಎಸ್‌ನತ್ತ ಮುಖ ಮಾಡಿದ್ದು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಅಧಿಕೃತವಾಗಿ ತೆನೆ ಹೊತ್ತಿರುವುದು ಗುಬ್ಬಿ ಕ್ಷೇತ್ರದಲ್ಲಿ ರಾಜಕೀಯವಾಗಿ ತೀವ್ರ ಸಂಚಲನ ಮೂಡಿಸಿದೆ.
ಇನ್ನು ಕಾಂಗ್ರೆಸ್ ವಿರುದ್ಧ ಗದಾ ಪ್ರಹಾರ ಮಾಡುತ್ತಿದ್ದ ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ತೆನೆ ಇಳಿಸಿ ಕೈ ಹಿಡಿದಿದ್ದಾರೆ. ಈ ಮೂಲಕ, ಮೂಲ- ವಲಸಿಗ ಕಾಂಗ್ರೆಸ್ಸಿಗರ ನಡುವೆ ಹೊಂದಾಣಿಕೆ ಸಾಧ್ಯವಾಗದೆ ಹೊನ್ನಗಿರಿಗೌಡ ಕಾಂಗ್ರೆಸ್ ತೊರೆದು ಜೆಡಿಎಸ್ ಮನೆ ಸೇರಿದ್ದಾರೆ.
ಇನ್ನು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಹೊನ್ನಗಿರಿಗೌಡರು ಪರಾಭವಗೊಂಡಿದ್ದರು. 2018ರಲ್ಲಿ ಟಿಕೆಟ್ ಆಕಾಂಕ್ಷಿ ಯಾಗಿದ್ದರು. ಆಗ ಬಾಲಾಜಿ ಕುಮಾರ್ ರಿಗೆ ಪಕ್ಷ ಟಿಕೆಟ್ ನೀಡಿತು. ಆ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು. ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಶಾಸಕರಾಗಿದ್ದ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರಿದ್ದರಿಂದ ಕಾಂಗ್ರೆಸ್ ನಾಯಕರು ಶ್ರೀನಿವಾಸ್‌ರನ್ನು ಅಭ್ಯರ್ಥಿ ಯನ್ನಾಗಿ ಘೋಷಿಸಿತು. ಇದರಿಂದ ಬೇಸರಗೊಂಡ ಹೊನ್ನಗಿರಿಗೌಡ ಜೆಡಿಎಸ್ ಸೇರಿದ್ದಾರೆ. ಇನ್ನು ಗುಬ್ಬಿ ಕ್ಷೇತ್ರದ ಬಿಜೆಪಿ ಪ್ರಭಾವಿ ನಾಯಕರಾಗಿದ್ದ ಜಿ.ಎನ್. ಬೆಟ್ಟಸ್ವಾಮಿ 2013ರ ವಿಧಾನಸಭಾ ಚುನಾವಣೆ ಯಲ್ಲಿ ಕೆಜೆಪಿಯಿಂದ, 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಎರಡು ಚುನಾವಣೆಯಲ್ಲೂ ಗುಬ್ಬಿ ತಾಲೂಕಿನ ಲಿಂಗಾಯತ ಸಮುದಾಯ ಇವರ ಬೆಂಬಲಕ್ಕೆ ನಿಂತಿತ್ತು. ಆದರೆ, ಇದೀಗ ಪಕ್ಷ ತೊರೆದು ತೆನೆಹೊತ್ತಿರುವುದಕ್ಕೆ ಕೆಲ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮತ್ತೂಬ್ಬ ಮುಖಂಡ ಜಿ.ಎಸ್. ಪ್ರಸನ್ನಕುಮಾರ್ ಪಕ್ಷಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇವರೊಂದಿಗೆ ಇನ್ನೂ ಹಲವು ಕಾಂಗ್ರೆಸ್ ಮುಖಂಡರು ಮುಖಂಡರು, ಕಾರ್ಯಕರ್ತರು ಪಕ್ಷ ತೊರೆಯಲು ಸನ್ನದ್ಧರಾಗುತ್ತಿದ್ದಾರೆ.
ಸೊಗಡು ತುಮಕೂರು ತೆನೆ ಅಭ್ಯರ್ಥಿ ಸಾಧ್ಯತೆ: ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಜೆಡಿಎಸ್‌ನತ್ತ ಮುಖ ಮಾಡಿದ್ದು, ಸದ್ಯದಲ್ಲೇ ತೆನೆ ಹೊರುವ ಸಾಧ್ಯತೆ ಇದೆ. ಈಗಾಗಲೇ ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸೊಗಡು ಶಿವಣ್ಣ ಒಂದೆರಡು ದಿನದಲ್ಲಿ ಜೆಡಿಎಸ್ ಮನೆ ಸೇರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನು ನಗರ ವಿಧಾನಸಭಾ ಕ್ಷೇತ್ರದಿಂದ ಇವರೇ ಜೆಡಿಎಸ್ ಅಭ್ಯರ್ಥಿ ಯಾರಗಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಈಗಾಗಲೇ ಜೆಡಿಎಸ್ ಅಭ್ಯರ್ಥಿಯಾಗಿರುವ ಗೋವಿಂದರಾಜು ಅವರಿಗೆ ಪಕ್ಷ ಬಿ ಫಾರಂ ನೀಡಿದೆ. ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡ ಬೆನ್ನಲ್ಲೇ ಮಹಿಳೆಯರೊಂದಿಗೆ ದೂರವಾಣಿಯಲ್ಲಿ ಅನುಚಿತವಾಗಿ ಸಂಭಾಷಣೆ ಮಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಟಿಕೆಟ್ ಅವರಿಗೆ ಮುಳುವಾಗುವ ಸಾಧ್ಯತೆಯಿದೆ. 45 ವರ್ಷ ಜನಸಂಘದಿಂದ ಬಂದು, ಆರ್‌ಎಸ್‌ಎಸ್ ಕಾರ್ಯಕರ್ತರಾಗಿ, 4 ಬಾರಿ ಬಿಜೆಪಿ ಶಾಸಕರಾಗಿ, 2 ಬಾರಿ ಸಚಿವರಾಗಿದ್ದ ಸೊಗಡು ಶಿವಣ್ಣ ಅವರಿಗೆ ಬಿಜೆಪಿ ಟಿಕೆಟ್ ವಂಚನೆ ಮಾಡಿದೆ. ಇದರಿಂದ ಶಿವಣ್ಣ ಒಲ್ಲದ ಮನಸ್ಸಿ ನಿಂದಲೇ ಜೆಡಿಎಸ್ ಸೇರಲು ನಿರ್ಧಾರ ಮಾಡಿದ್ದಾರೆ.
ನಾನು ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿ ಆಗಿದ್ದೆ. ಆದರೆ, ವರಿಷ್ಠರು ಟಿಕೆಟ್ ನೀಡಿಲ್ಲ. ಆದರೂ, ನಾನು ಪಕ್ಷದ ವಿರುದ್ಧ ಸ್ಪರ್ಧೆ ಮಾಡಲ್ಲ. – ಡಾ.ಜೆ.ಲಕ್ಷ್ಮೀಕಾಂತ್, ಕೊರಟಗೆರೆ ಬಿಜೆಪಿ ಮುಖಂಡ
– ಚಿ.ನಿ.ಪುರುಷೋತ್ತಮ್