ಕಲಬುರಗಿ: ಪಾರದರ್ಶಕ, ಪಕ್ಷಾತೀತವಾಗಿ ನಡೆಯಬೇಕಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಈಗ ರಾಜಕೀಯ ರಂಗವಾಗಿ ಮಾರ್ಪಟ್ಟಿದೆ. ಇದೇ ಆ. 25 ರಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಿಗದಿಯಾಗಿದ್ದು, ಆ. 27ರಂದು ಕಾರ್ಯಕಾರಿಣಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ.
ಪ್ರಮುಖವಾಗಿ ಕಾಂಗ್ರೆಸ್, ಬಿಜೆಪಿ ಬೆಂಬಲಿತ ಎಂಬಂತೆ ಪ್ಯಾನೆಲ್ ಗಳು ರಚನೆಗೊಂಡಿವೆ .ಇದಕ್ಕೆ ಪುಷ್ಟಿ ಎಂಬಂತೆ 27 ಜನರ ಪ್ಯಾನಲ್ ನವರು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಭಾವಚಿತ್ರ ಗಳಿರುವ ಕರಪತ್ರ ( ಪಾಂಪ್ಲೆಟ್) ಮುದ್ರಿಸಿ ಇವರು ಬೆಂಬಲವಿರುವ ನಮ್ಮ ತಂಡಕ್ಕೆ ಮತ ನೀಡಬೇಕು ಎಂದು ಪ್ರಚಾರ ಪ್ರಾರಂಭಿಸಿದ್ದಾರೆ.
ಇದನ್ನು ಕಂಡು ಕೆರಳಿದ ಉಳಿದ ಅಭ್ಯರ್ಥಿಗಳು ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ತಂಡ ಎಂದು 16 ಜನರ ಪ್ಯಾನಲ್ ಮಾಡಿಕೊಂಡು ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಪೋಟೋ ಜತೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ವಿ.ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಸಂಸದ ಬಿ. ವೈ. ರಾಘವೇಂದ್ರ ಭಾವಚಿತ್ರಗಳಿರುವ ಕರಪತ್ರ ಮುದ್ರಿಸಿ ಎಲ್ಲಾ ನಾಯಕರ ಬೆಂಬಲವಿರುವ ನಮ್ಮ ಪ್ಯಾನಲ್‌ಗೆ ಬೆಂಬಲಿಸಿ ಎಂದು ಪ್ರಚಾರ ಆರಂಭಿಸಿದ್ದಾರೆ. ಇದರಿಂದ ಇಲ್ಲಿಯವರೆಗೂ ಪಕ್ಷಾತೀತವಾಗಿದ್ದ ಮಹಾಸಭೆ ಈ ಚುನಾವಣೆಯಲ್ಲಿ ರಾಜಕೀಯ ಅಖಾಡವಾಗಿ ಮಾರ್ಪಟ್ಟಿದೆ.
ಎರಡು ಪ್ಯಾನಲ್‌ನವರು ಜಿದ್ದಿಗೆ ಬಿದ್ದವರಂತೆ ಪ್ರಚಾರ ನಡೆಸಿದ್ದು, 31,000 ಸಾವಿರ ಕ್ಕಿಂತಲು ಹೆಚ್ಚಿರುವ ಮತದಾರರ ವಿಶ್ವಾಸಗಳಿಸಿ ಮತ ಪಡೆಯಲು ಪ್ರಯತ್ನ ನಡೆಸುತಿದ್ದಾರೆ. ಆದರೆ ಮತದಾರರು ಯಾವ ಪ್ಯಾನಲ್ ಗೆ ಬೆಂಬಲಿಸುತ್ತಾರೆ ಎನ್ನುವ ಕೂತುಹಲ ಮೂಡಿದೆ. ರಾಜ್ಯ ಕಾರ್ಯಕಾರಿಣಿಯಲ್ಲೆ ಈ ಪೈಪೋಟಿ ಉಂಟಾದರೆ ಸೆ. 29 ರಂದು ನಡೆಯಲಿರುವ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದೇ ಸದ್ಯದ ಕುತೂಹಲ.