Advertisement

ಗರಿಗೆದರಿದ ರಾಜಕೀಯ

02:12 PM Nov 10, 2021 | Team Udayavani |

ಬೀದರ: ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್‌ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಗಡಿ ಜಿಲ್ಲೆ ಬೀದರನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ಕಾಂಗ್ರೆಸ್‌ ವಶದಲ್ಲಿದ್ದ ಜಿಲ್ಲೆಯ ಒಂದು ಸ್ಥಾನಕ್ಕೆ ಪೈಪೋಟಿ ನಡೆಯಲಿದ್ದು, ಮೂರು ಪಕ್ಷಗಳು ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ಶುರು ಮಾಡಿವೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತಗೆ ಚುನಾವಣೆ ನಡೆಯದೇ ಸ್ಥಾನಗಳು ತೆರವಾಗಿರುವ ಸಂದರ್ಭದಲ್ಲೇ ಚುನಾವಣಾ ಆಯೋಗ ಮಂಗಳವಾರ ವಿಧಾನ ಪರಿಷತ್‌ನ 25 ಸ್ಥಾನಗಳ ಕದನಕ್ಕೆ ಅಧಿಸೂಚನೆ ಹೊರಡಿಸಿದೆ.

ನಾಮಪತ್ರ ಸಲ್ಲಿಕೆಗೆ ನ. 23 ಕೊನೆಯ ದಿನವಾಗಿದ್ದು, ಡಿ. 10 ರಂದು ಮತದಾನ ಮತ್ತು ಡಿ. 14ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೀದರ ಜಿಲ್ಲೆಯ ಒಂದು ಮೇಲ್ಮನೆ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 6 ಕ್ಷೇತ್ರಗಳ ಪೈಕಿ ಭಾಲ್ಕಿ, ಹುಮನಾಬಾದ ಮತ್ತು ಬೀದರ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌, ಔರಾದ ಮತ್ತು ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಬೀದರ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್‌ ನ ಶಾಸಕರಿದ್ದರೆ, ಲೋಕಸಭೆ ಬಿಜೆಪಿ ಮಡಿಲಲ್ಲಿದೆ. ಇನ್ನೂ 175 ಗ್ರಾಮ ಪಂಚಾಯತ ಪೈಕಿ ಶೇ. 40 ರಿಂದ 45ರಷ್ಟು ಪಂಚಾಯತನಲ್ಲಿ ಕಾಂಗ್ರೆಸ್‌ ಬೆಂಬಲಿತರು ಅಧಿಕಾರದಲ್ಲಿದ್ದರೆ, ಇನ್ನುಳಿದಂತೆ ಬಿಜೆಪಿ ಮತ್ತು ಜೆಡಿಎಸ್‌ ಪಾಲಾಗಿವೆ.

ಇದನ್ನೂ ಓದಿ: ಸಕ್ರೆಬೈಲು ಆನೆ ಬಿಡಾರದಲ್ಲಿರುವ ಮರಿಯಾನೆಗೆ ‘ಪುನಿತ್’ ಎಂದು ಹೆಸರನ್ನಿಟ್ಟ ಅರಣ್ಯ ಇಲಾಖೆ

Advertisement

“ಕೈ’ ವಶದಲ್ಲಿರುವ ಮೇಲ್ಮನೆ ಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿ ಹಿಡಿತ ಸಾಧಿಸಲು ಮತ್ತು ವಿಪಕ್ಷ ಕಾಂಗ್ರೆಸ್‌ ಸ್ಥಾನವನ್ನು ಉಳಿಸಿಕೊಳ್ಳಲು ಶತಾಯಗತಾಯ ತಂತ್ರಗಾರಿಕೆ-ಕಸರತ್ತು ಆರಂಭಿಸಿವೆ. ಇಲ್ಲಿ ಜೆಡಿಎಸ್‌ ಸ್ಪರ್ಧೆಯೊಡ್ಡುವ ಸಾಧ್ಯತೆ ಇಲ್ಲವಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಸಂಜಯ ಖೇಣಿ ಅವರನ್ನು ಮಣಿಸಿ ವಿಧಾನ ಪರಿಷತ್‌ ಪ್ರವೇಶಿಸಿದ್ದ ಮಾಜಿ ಸಿಎಂ ಧರಂಸಿಂಗ್‌ ಪುತ್ರ ವಿಜಯಸಿಂಗ್‌ ಅವರು ಮತ್ತೂಮ್ಮೆ ಸ್ಪರ್ಧೆಗಿಳಿಯುವ ಸಾಧ್ಯತೆ ಕಡಿಮೆ.

ಮುಂಬರುವ ವಿಧಾನ ಪರಿಷತ್‌ಗೆ ತಯಾರಿ ನಡೆಸುತ್ತಿರುವ ಅವರ ಮೇಲೆ ಒತ್ತಡ ಇದೆ. ಅಷ್ಟೇ ಅಲ್ಲ ಬೀದರ ದಕ್ಷಿಣ ಕ್ಷೇತ್ರದಲ್ಲಿ ಪರಾಭವ ಗೊಂಡಿರುವ ಅಶೋಕ ಖೇಣಿ ಅವರನ್ನು ಕಣಕ್ಕಿಳಿಸುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಆಸಕ್ತಿ ಹೊಂದಿದ್ದಾರೆ. ಆದರೆ, ಖೇಣಿ ಅವರಿಗೆ ಸ್ಪರ್ಧಿಸುವ ಆಸಕ್ತಿ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಕಳೆದ ಬಾರಿ ಜೆಡಿಎಸ್‌ನಿಂದ ಅಖಾಡಕ್ಕಿಳಿದಿದ್ದ ಸುಬ್ಟಾರೆಡ್ಡಿ ಈಗ ಕಾಂಗ್ರೆಸ್‌ ಗೆ ಸೇರಿದ್ದು, ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ ಎಂಬುದು ಮೂಲಗಳು ಖಚಿತಪಡಿಸಿದೆ. ರಾಜ್ಯದ ಆಡಳಿತ ನಡೆಸುತ್ತಿರುವ ಕಮಲ ಪಾಳಯದಲ್ಲಿ ಆಕಾಂಕ್ಷಿತ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಮಾಜಿ ಸಚಿವ ದಿ| ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೆಸರು ಮುಂಚೂಣಿಯಲ್ಲಿದೆ. ಅದರೊಟ್ಟಿಗೆ ಈಚೆಗೆ ಜೆಡಿಎಸ್‌ನಿಂದ ಮರಳಿ ಬಿಜೆಪಿಗೆ ಸೇರಿರುವ ಪ್ರಕಾಶ ಖಂಡ್ರೆ ಮತ್ತು ಸದ್ಯ ಕೆಎಸ್‌ಐಐಡಿಸಿ ಅಧ್ಯಕ್ಷರಾಗಿರುವ ಡಾ| ಶೈಲೇಂದ್ರ ಬೆಲ್ದಾಳೆ ಅವರ ಹೆಸರುಗಳು ಸಹ ಸಧ್ಯ ಚರ್ಚೆಯ ಚಾವಡಿಯಲ್ಲಿವೆ.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆ ಅಖಾಡ ರಂಗೇರಲಿದೆ. ಸದ್ಯ ಮತದಾರರ ಬಲಾಬಲದಲ್ಲಿ ಹೆಚ್ಚು ಬಲ ಹೊಂದಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿಗೆ ಜಿಲ್ಲೆ ಸಾಕ್ಷಿಯಾಗಲಿದೆ. ­

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next