Advertisement

ರಾಜಕೀಯ ಚಟುವಟಿಕೆ ಬಿರುಸು

04:26 PM Mar 31, 2018 | Team Udayavani |

ದಾವಣಗೆರೆ: ಚುನಾವಣಾ ವೇಳಾಪಟ್ಟಿ ಘೋಷಿಸಿ ಈಗಾಗಲೇ ನಾಲ್ಕು ದಿನ ಕಳೆದಿದ್ದು, ಶುಕ್ರವಾರ ಜಿಲ್ಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ನಡೆದಿವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಶುಕ್ರವಾರ ಬೆಳಗ್ಗೆ ಹಳೇಪೇಟೆಯ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಮುಂದೆ ಕೆಂಡ ಹಾಯ್ದರು.

Advertisement

ಕೆಂಡ ಹಾಯ್ದ ನಂತರ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಏ. 3ರಂದು ಹೊನ್ನಾಳಿ, ಹರಿಹರ, ದಾವಣಗೆರೆಗೆ ಭೇಟಿ ನೀಡಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿಯವರ ಕಾರ್ಯಕ್ರಮ, ರೋಡ್‌ ಶೋ ಇತರೆ ವಿಚಾರಗಳ ಬಗ್ಗೆ ಚರ್ಚಿಸಿದರು. ವೀಕ್ಷಕಿ ಬಲ್ಕಿಶ್‌ ಬಾನು, ಜಿಲ್ಲಾ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಇದ್ದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ, ತಮ್ಮ ಮೊಮ್ಮಗನ ಮದುವೆ ಹಿನ್ನೆಲೆಯಲ್ಲಿ ಮನೆಯಲ್ಲೇ ಉಳಿದಿದ್ದರು. ಅವರು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿಲ್ಲ. ಇನ್ನು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಬಯಸಿ ಲೋಕಿಕೆರೆ ನಾಗರಾಜ್‌ ತಮ್ಮ ಅಭಿಮಾನಿಗಳೊಂದಿಗೆ ಪಕ್ಷದ ಕಚೇರಿಗೆ ತೆರಳಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ಗೆ ಮನವಿ ಸಲ್ಲಿಸಿದರು.

ಮಾಜಿ ಸಚಿವ, ಹೊನ್ನಾಳಿ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ಮುಕ್ತೇನಹಳ್ಳಿ ಗ್ರಾಮದಲ್ಲಿ ಮುಷ್ಟಿ ಧಾನ್ಯ ಅಭಿಯಾನ ಕೈಗೊಂಡರು. ಮನೆ ಮನೆಗೆ ತೆರಳಿ, ಅಕ್ಕಿ ಸಂಗ್ರಹಿಸಿ, ರೈತರು ಆತ್ಮಹತ್ಯೆಗೆ ಒಳಗಾಗದಂತೆ ಮನವಿ ಮಾಡಿಕೊಂಡರು. ಹೊನ್ನಾಳಿ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯ ಬಯಸಿದ್ದ ಗುರುಪಾದಯ್ಯ ಮಠದ್‌ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ಭ್ರಷ್ಟಾಚಾರ ವಿರೋಧಿ ವೇದಿಕೆ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದಾಗಿ ತಿಳಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಎಂ. ರಾಜಾಸಾಬ್‌ ಸುದ್ದಿಗೋಷ್ಠಿ ನಡೆಸಿ, ಶನಿವಾರ ಪಕ್ಷದ ರಾಜ್ಯ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿಯವರ ವಿಕಾಸ ಪರ್ವ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಮಾಡ್ಲಿಗೆರೆ, ಮಾಡ್ಲಿಗೆರೆ ತಾಂಡಾ, ಕಾನಹಳ್ಳಿ… ಇತರೆ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮಾಜಿ ಸಚಿವ ಗಾಲಿ ಕರುಣಾಕರೆಡ್ಡಿ ಬಳ್ಳಾರಿಯಲ್ಲೇ ಉಳಿದುಕೊಂಡಿದ್ದರು. ಬಿಜೆಪಿ ಟಿಕೆಟ್‌ ಬಯಸಿರುವ ಎನ್‌. ಕೊಟ್ರೇಶ್‌ ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಮುಖಂಡರ ಭೇಟಿ ಪ್ರಯತ್ನದಲ್ಲಿದ್ದಾರೆ. 

Advertisement

ಜಗಳೂರು ಶಾಸಕ ಎಚ್‌.ಪಿ. ರಾಜೇಶ್‌ ಮುಷ್ಟೂರು ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಜಗಳೂರಿಗೆ ವಾಪಾಸ್ಸಾದ ನಂತರ ವಿವಿಧೆಡೆ ತೆರಳಿದರು. ಜೆಡಿಎಸ್‌ ಅಭ್ಯರ್ಥಿ ದೇವೇಂದ್ರಪ್ಪ ವಿಕಾಸಪರ್ವ ಸಮಾವೇಶದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಚನ್ನಗಿರಿಯಲ್ಲಿ ಮಾಜಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಹೊಳಲ್ಕೆರೆ ರಸ್ತೆಯಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿ, ಈ ಬಾರಿಯ ಚುನಾವಣೆಯಲ್ಲಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು. ಜೆಡಿಎಸ್‌ ಅಭ್ಯರ್ಥಿ ಹೊದಿಗೆರೆ ರಮೇಶ್‌ ತಾಲೂಕಿನ ಅಗರಬನ್ನಿಹಟ್ಟಿ ಗ್ರಾಮದಲ್ಲಿ ಮನೆ ಮನೆಗೆ ಕುಮಾರಣ್ಣ…. ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಹರಿಹರ ಶಾಸಕ ಎಚ್‌.ಎಸ್‌. ಶಿವಶಂಕರ್‌ ಶನಿವಾರ ನಡೆಯುವ ವಿಕಾಸಪರ್ವ ಸಮಾವೇಶ, ಬೈಕ್‌ ರ್ಯಾಲಿ ಇತರೆ ಸಿದ್ಧತೆಯಲ್ಲಿ ಸಂಪೂರ್ಣ ಬ್ಯುಸಿಯಾಗಿದ್ದರು.

ಕಾಂಗ್ರೆಸ್‌ ಟಿಕೆಟ್‌ ಬಯಸಿರುವ ಎಸ್‌. ರಾಮಪ್ಪ ದಾವಣಗೆರೆಯ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ನಡೆದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು. ಅಖೀಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಭೆ, ರೋಡ್‌ ಶೋ… ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ಒಳಗೊಂಡಂತೆ ಯಾವುದೇ ಮುಖಂಡರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ

ಮತ್ತೆ ಅಧಿಕಾರ….
ಶುಕ್ರವಾರ ಬೆಳಗ್ಗೆ ಹಳೇಪೇಟೆಯ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಮುಂದೆ ಕೆಂಡ ಹಾಯ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆ ಒಳಗೊಂಡಂತೆ ರಾಜ್ಯದಲ್ಲಿ ಕಣ್ಣಿಗೆ ಕಾಣುವಂತಹ ಮತ್ತು ಜನರಿಗೆ ತಲುಪುವಂತಹ ಹಲವಾರು ಅಭಿವೃದ್ಧಿ ಕಾಮಗಾರಿ ಆಗಿವೆ. 

ಈ ಬಾರಿಯ ಚುನಾವಣೆಯಲ್ಲೂ ಸಹ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೂಮ್ಮೆ ಅಧಿಕಾರಕ್ಕೆ ಬರುತ್ತೇವೆ. ತಮ್ಮ ತಂದೆ ಶಾಮನೂರು ಶಿವಶಂಕರಪ್ಪ ನವರಿಗೆ ಇನ್ನೂ 2-3 ಚುನಾವಣೆಯಲ್ಲಿ ಸ್ಪರ್ಧಿಸುವಷ್ಟು ಶಕ್ತಿ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಂಡ ಹಾಯ್ದ ಸಚಿವ ಎಸ್ಸೆಸ್ಸೆಂ 
ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌ ಶುಕ್ರವಾರ ಬೆಳಗ್ಗೆ ಹಳೇಪೇಟೆಯ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಎದುರು ಕೆಂಡ ಹಾಯ್ದರು.  ಪ್ರತಿ ವರ್ಷ ಶ್ರೀ ವೀರಭದ್ರೇಶ್ವರಸ್ವಾಮಿ ರಥೋತ್ಸವದ ಮುನ್ನಾ ದಿನ ನಡೆಯುವ ಕೆಂಡಾರ್ಚನೆಯಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕೆಂಡ ಹಾಯುವುದನ್ನು ತಪ್ಪಿಸುವುದೇ ಇಲ್ಲ. ಕೆಂಡ ಹಾಯುವ ದಿನ ಎಲ್ಲೇ ಇದ್ದರೂ ದಾವಣಗೆರೆಗೆ ಬಂದು ಕೆಂಡ ಹಾಯುವುದನ್ನು ಹಲವಾರು ವರ್ಷದಿಂದ ರೂಢಿಸಿಕೊಂಡಿದ್ದಾರೆ. 

ಚುನಾವಣಾ ಪ್ರಚಾರದ ಬಿರುಸಿನ ಪ್ರಚಾರದ ನಡುವೆಯೂ ಮಲ್ಲಿಕಾರ್ಜುನ್‌ ಕೆಂಡ ಹಾಯುವುದನ್ನು ಮಾತ್ರ ತಪ್ಪಿಸುವುದಿಲ್ಲ. ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸಹ ಕೆಂಡ ಹಾಯ್ದಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೌಡ್ಯ ನಿಷೇಧ ಕಾಯ್ದೆ ಜಾರಿ ಕುರಿತಂತೆ ನಡೆದ ಸಭೆಯಲ್ಲಿ ನಾನು ಸಹ ಪಾಲ್ಗೊಂಡಿದ್ದೆ. ಸ್ವಯಂ ಪ್ರೇರಣೆಯಿಂದ ಕೆಂಡ ತುಳಿಯುವುದಕ್ಕೆ ಕಾಯ್ದೆಯಲ್ಲಿ ಅವಕಾಶ ಇದೆ. ಆದರೆ, ಯಾರನ್ನೂ ಬಲವಂತಪಡಿಸುವಂತಿಲ್ಲ ಮತ್ತು ಕೆಂಡಕ್ಕೆ ತಳ್ಳುವಂತಿಲ್ಲ. ವೈಯಕ್ತಿಕವಾಗಿ ಭಕ್ತಿ ಸಮರ್ಪಣೆ ಭಕ್ತರ ಇಚ್ಛೆಗೆ ಬಿಟ್ಟದ್ದು. ಗ್ರಾಮೀಣ ಭಾಗದಲ್ಲಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸಿಡಿ ಆಡುವುದು ಮತ್ತು ಆಡಿಸುವುದನ್ನು ಕಾಯ್ದೆಯಲ್ಲಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next