2019ರ ಮೊದಲ ಬೆಳಗದು. ಬೇಗ ಎದ್ದರೆ ಅಮ್ಮ ಕೆಲಸ ಹೇಳುತ್ತಾಳೆ ಎಂದು ಹದವಾದ ಚಳಿಯಲ್ಲಿ ಕಂಬಳಿ ಹೊದ್ದು ಮಲಗಿದ್ದೆ. ಹೊಸವರ್ಷದ ಬಗ್ಗೆ ನೀರಸ ಭಾವದಿಂದ ಇದ್ದೆನೋ ಅಥವಾ ಬೇರೆ ಯಾವ ಕಾರಣವೋ, ಇಡೀ ವರ್ಷ ಹೆಚ್ಚಿನದ್ದೇನೂ ಘಟಿಸಲಿಲ್ಲ. ಆ ಬಗ್ಗೆ ಯೋಚನೆ ಮಾಡುತ್ತಿರುವಾಗಲೇ ಎಷ್ಟೊಂದು ವೇಗವಾಗಿ ಈ 2020 ಸಹ ಮುಂಗಾಲಿಟ್ಟಿದೆ. ನಾನಂತೂ ಆಗ ಎಲ್ಲಿದ್ದೆನೋ ಈಗಲೂ ಅಲ್ಲೇ ಇದ್ದೇನೆ.
ಹೊಸವರ್ಷದ ಈ ಸಂದರ್ಭದಲ್ಲಿ ನನ್ನ ಸ್ನೇಹಿತರಾದವರು 2019ರಲ್ಲಿ ತಮ್ಮ ಕನಸಗಳನ್ನು ಈಡೇರಿಸಿಕೊಂಡಿದ್ದಾರಾ ಎಂದು ಕುತೂಹಲವಾಯಿತು. ಇನ್ನೇನು ಡಿಗ್ರಿ ಮುಗಿಸಿಯೇ ಬಿಟ್ಟೆ ಎಂದು ಹುರುಪಿನಿಂದ ಇರುವ ಫೈನಲ್ ಸೆಮಿಸ್ಟರ್‌ನ ಹುಡುಗಿಯವಳು. “ಡಿಟಿಪಿ ಕಲಿಬೇಕಿತ್ತು, ಚಕಾಚಕ್ ಅಂತ ಫೋಟೊ ಎಡಿಟ್ ಮಾಡುವ ಹಾಗೆ ಆಗ್ಬೇಕಿತ್ತು’- ಹೀಗೆ ಒಂದು ಸೆಕೆಂಡೂ ಬಿಡುವು ಕೊಡದೇ ಒಂದೇ ಉಸುರಿಗೆ ಹೇಳುತ್ತ ಹೋದಳು. 2020ರಲ್ಲೂ ಆಕೆಯ ಕನಸುಗಳ ಪಟ್ಟಿ ದೊಡ್ಡದಿತ್ತು. ಆಕೆಯ ಮಾತು ಕೇಳಿ “ಫಟ್’ ಅಂತ ತಲೆಮೇಲೆ ಹೊಡೆದ ಹಾಗಾಯಿತು. ನನಗೇ ಇನ್ನೂ ಇವೆಲ್ಲ ಬರಲ್ವಲ್ಲ, 2020ರಲ್ಲಾದ್ರೂ ಕಲೀಬೇಕು ಅಂದ್ಕೊಂಡೆ.
ಗೆಳೆಯನೊಬ್ಬ ಅಲ್ಲೇ ಮೊಬೈಲ್ ಕುಟ್ಟುತ್ತಿದ್ದ. “ಹಳೆ ವರ್ಷ ಕಳೀತು, ಹೊಸ ವರ್ಷ ಬಂತು. ಅಂದ್ಕೊಂಡಿದ್ದೆಲ್ಲ ಆಯ್ತಾ?’ ಎಂದೆ. “ನಾನೇನೂ ಅಂದ್ಕೊಂಡೇ ಇರ್ಲಿಲ್ಲ, ಅಷ್ಟಕ್ಕೂ ಯಾಕೆ ವರ್ಷದ ಗೋಲ್ ಅನ್ನು ಸೆಟ್ ಮಾಡ್ಕೊಬೇಕು. ಅದಲ್ಲ ನಂಗೆ ಪಾಡಿಸಲ್ಲ’ ಎಂದ. ಇವನೊಬ್ಬ ಉದಾಸೀನರಾಯ ಎಂದುಕೊಂಡೆ.
ಕಳೆದುಹೋದ ದಿನಗಳನ್ನು ನೆನೆಸಿಕೊಂಡು ನಿಧಾನವಾಗಿ ನಡೆಯುತ್ತಿದ್ದ ಅರವತ್ತೈದರ ಅಜ್ಜ ಮಾತಿಗೆ ಸಿಕ್ಕಿದರು. “ನಮಸ್ತೆ’ ಹೇಳಿ ಅವರ ಪಕ್ಕ ಕುಳಿತೆ. ಅವರ ಮನಸ್ಸು ಪ್ರಪುಲ್ಲವಾಗಿದ್ದಂತಿತ್ತು. ಮಾತನಾಡುವ ಮೂಡ್‌ನಲ್ಲಿದ್ದರು. ಅವರನ್ನು ನೋಡುವುದಕ್ಕೇ ಒಂದು ಥರದ ಖುಷಿ. “ಅಜ್ಜಾ, ಈ ವರ್ಷ ಏನು ಮಾಡಬೇಕು ಅಂದ್ಕೊಂಡಿದ್ರಿ? ಏನೇನನ್ನೆಲ್ಲ ಮಾಡಿದ್ರಿ’ ಕೇಳಿದೆ. ನನ್ನನ್ನು ನೋಡಿ ಮುಗುಳ್ನಕ್ಕರು.
“ಅದೋ ಅಲ್ಲಿ ಕಾಣಿಸುತ್ತಿದೆಯಲ್ಲ, ಎತ್ತರದ ಪರ್ವತ. ಅದನ್ನು ಹತ್ತಬೇಕು’ ಎಂದುಕೊಂಡಿದ್ದೇನೆ ಎಂದು ಹೇಳಿದರು. ನನಗೆ ಕುತೂಹಲವಾಯಿತು. “ಈ ಇಳಿವಯಸ್ಸಲ್ಲಿ ಪರ್ವತ ಏರುವ ಆಸೆಯೇ?’ ಕೇಳಿದೆ. “ಪ್ರಾಯ ಕಾಲದಲ್ಲಿ ಕಳೆದುಕೊಂಡದ್ದನ್ನೆಲ್ಲ ನಿವೃತ್ತಿಯಾದ ಮೇಲೆ ಸಾಧಿಸುವ ಆಸೆ ಚಿಗುರಿದೆ. ನಮ್ಮೂರಿನ ಚಾರಣಾಸಕ್ತ ಯುವಕರನ್ನು ಒಗ್ಗೂಡಿಸಿ ಪರ್ವತವನ್ನು ಏರಿಯೇಬಿಟ್ಟೆ’ ಎಂದು ಹುಮ್ಮಸ್ಸಲ್ಲಿ ಹೇಳಿದರು. ಮುಂದಿನ ಚಾರಣಕ್ಕೆ ನನಗೂ ಆಹ್ವಾನ ನೀಡಿದರು.
ಮನಸ್ಸಿದ್ದರೆ ಮಾರ್ಗ ಎನ್ನುವುದು ಸುಳ್ಳಲ್ಲ. ಕೆಲಸ ಮಾಡುವ ಉತ್ಸಾಹ ನಮ್ಮೊಳಗೆ ಚಿಗುರಿದರೆ ಯಾವುದೂ ಅಸಾಧ್ಯವಲ್ಲ ಎನಿಸಿತು. ಒಬ್ಬರಿಂದ ಒಬ್ಬರಿಗೆ ಹೊಸ ವರ್ಷದ ಗುರಿಗಳಲ್ಲೂ ಎಷ್ಟೊಂದು ವೈವಿಧ್ಯ! ಯೌವನದ ಉಯ್ನಾಲೆ ಜೀಕುತ್ತಿರುವ ನನ್ನದೇ ಖಾಸಾ ಗೆಳೆಯನೊಬ್ಬನಿಗೆ ಇಸವಿ ಸನ್ ಎರಡು ಸಾವಿರದ ಹತ್ತೂಂಬತ್ತು ಮುಗಿಯುವುದರೊಳಗಾದರೂ ಒಂದು ಹುಡುಗಿಯನ್ನು ಪ್ರೀತಿಸುವ ಗುರಿಯಿತ್ತು. ಬರೀ ಇವನು ಪ್ರೀತಿಸುವುದೊಂದೇ ಅಲ್ಲ, ಅವಳೂ ಇವನನ್ನು ಪ್ರೀತಿಸಬೇಕು ಅಲ್ವೆ. ಅವನ ಗುರಿಯ ಲವಲೇಶವೂ ಸಾಧನೆಯಾಗಿಲ್ಲ. ಹೊಸ ವರ್ಷದ ಅವನ ಫಲಾಫಲಗಳು ಏನಿವೆಯೋ ನೋಡಬೇಕಷ್ಟೆ. ಜೊತೆಗೆ ನನ್ನದೂ !
ಗುರುಗಣೇಶ್ ಭಟ್ ,
ಸ್ನಾತಕೋತ್ತರ ವಿದ್ಯಾರ್ಥಿ, ಎಸ್‌ಡಿಎಂ ಕಾಲೇಜು, ಉಜಿರೆ