ಶಿವಮೊಗ್ಗ: ಜನವರಿ 17ರಂದು ಜಿಲ್ಲೆಯ ಎಲ್ಲಾತಾಲೂಕುಗಳಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ 867 ಲಸಿಕಾ ಕೇಂದ್ರಗಳಲ್ಲಿ 1,33,491ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವೈದ್ಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಈ ಆಂದೋಲನದಲ್ಲಿ 1734 ತಂಡಗಳಲ್ಲಿ ಲಸಿಕಾ ಕಾರ್ಯಕರ್ತರು ಲಸಿಕೆ ನೀಡಲಿದ್ದಾರೆ. ಅಲ್ಲದೆ 19 ಸಂಚಾರಿ ಬೂತ್‌ಗಳು ಹಾಗೂ 30 ಟ್ರಾನ್ಸಿಸ್ಟ್ ಬೂತ್ ವ್ಯವಸ್ಥೆ ಕಲ್ಪಿಸಲಾಗಿದೆ. 210 ಮೇಲ್ವಿಚಾರಕರು ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಜಿಲ್ಲೆಯಾದ್ಯಂತ ಸಂಚರಿಸಿ ಕಾರ್ಯಕ್ರಮದ ಮೇಲುಸ್ತುವಾರಿ ನಡೆಸಲಿದ್ದಾರೆ.
ಗುರಿಗೆ ಅನುಸಾರವಾಗಿ ಸಾಕಷ್ಟು ಪ್ರಮಾಣದ ಲಸಿಕೆ ಲಭ್ಯವಾಗಲಿದ್ದು, ಲಸಿಕೆ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಹಾಗೂ ಶೀತಲೀಕರಣ ವ್ಯವಸ್ಥೆ ಮತ್ತು ಸರಬರಾಜಿನ ಬಗ್ಗೆ ನಿಗಾ ವಹಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದ ಅನುಷ್ಠಾನ ವೇಳೆ ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ಸರ್ಕಾರ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿದರು.
ಲಸಿಕಾ ಕೇಂದ್ರಕ್ಕೆ ಮಕ್ಕಳನ್ನು ಕರೆತರುವ ಪೋಷಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಹಾಕಿಕೊಳ್ಳುವಂತೆ ಹಾಗೂ ಸ್ಯಾನಿಟೈಸರ್ ಬಳಸಬೇಕು. ಆಶಾ ಕಾರ್ಯಕರ್ತರು ಮಕ್ಕಳನ್ನು ಹಂತಹಂತವಾಗಿ ಲಸಿಕಾ ಕೇಂದ್ರಕ್ಕೆ ಕರೆತರಬೇಕು ಎಂದು ಸೂಚಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಕಾಂತರಾಜು ಮಾತನಾಡಿ, ಪೊಲೀಸ್ ಇಲಾಖೆ ವತಿಯಿಂದ ಕಳೆದ ಮೂರು ವರ್ಷಗಳಲ್ಲಿ ಪ್ರಸ್ತುತ ನವೆಂಬರ್ 20 ರ ಮಾಸಾಂತ್ಯದವರೆಗೆ ಕೋಟ್ಪಾ ಸೆಕ್ಷನ್ 04ರಡಿಯಲ್ಲಿ 1259ಪ್ರಕರಣಗಳನ್ನು ದಾಖಲಿಸಿ, 1,02,830ಲಕ್ಷ ರೂ. ಗಳ ದಂಡ ವಿಧಿಸಲಾಗಿದೆ ಎಂದರು.
2019 ನೇ ಸಾಲಿನಲ್ಲಿ 5198 ಪ್ರಕರಣಗಳನ್ನು ದಾಖಲಿಸಿ 4,06570/- ರೂ.ಗಳ ದಂಡ ವಿಧಿಸಲಾಗಿದೆ. ಅಲ್ಲದೆ ಕೋಟ್ಪಾ ಸೆಕ್ಷನ್ 05 ಮತ್ತು 06ರಡಿಯಲ್ಲಿ 35 ಪ್ರಕರಣಗಳನ್ನು ದಾಖಲಿಸಲಾಗಿದೆ. 2020ನೇ ಸಾಲಿನ ನವೆಂಬರ್ ಅಂತ್ಯದವರೆಗೆ ವಿವಿಧ ಸೆಕ್ಷನ್‌ಗಳಡಿಯಲ್ಲಿ 8952 ಪ್ರಕರಣ ದಾಖಲಿಸಿ 8,30ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ಜ್ವರ, ಶೀತ ಇರುವ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಲಸಿಕೆ ಹಾಕುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ನಗರದ ಹಲವೆಡೆಗಳಲ್ಲಿ ಬ್ಲ್ಯಾಕ್ ಮತ್ತು ಮೋರ್ ಹೆಸರಿನನಕಲಿ ಸಿಗರೇಟುಗಳು ಮಾರಲ್ಪಡುತ್ತಿದ್ದು, ಅವುಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಮಂಗನ ಕಾಯಿಲೆ ಬಾಧಿತ ತಾಲೂಕುಗಳಲ್ಲಿನ ಆಯ್ದ ಗ್ರಾಮಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಎರಡು ದಿನಕ್ಕೊಮ್ಮೆ ಮನೆಮನೆ ಭೇಟಿ ನೀಡಿ, ಅಲ್ಲಿನ ಜನರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಗಮನಹರಿಸುವಂತೆ ಜಿಲ್ಲಾ ಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು