ಪಣಂಬೂರು: ಪಣಂಬೂರು ಬೀಚ್‌ನಲ್ಲಿ ರಾಶಿ ಬೀಳುತ್ತಿದ್ದ ತ್ಯಾಜ್ಯ ರಾಶಿಗೆ ಕೊನೆಗೂ ಮುಕ್ತಿ ಕಾಣಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಕಾರ್ಯವನ್ನು ಮಂಗಳೂರು ಮಹಾನಗರ ಪಾಲಿಕೆಯು ಮಾಡುತ್ತಿದೆ.
ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ಹಸಿ, ಒಣ ಕಸ ಭಾರೀ ಪ್ರಮಾಣದಲ್ಲಿ ಸಂಗ್ರಹವಾಗುತ್ತಿತ್ತು. ಪ್ರವಾಸೋದ್ಯಮ ಇಲಾಖೆ ನಿರ್ವಹಣೆ ಮಾಡಿದರೆ ಮಹಾನಗರ ಪಾಲಿಕೆಯ ಸ್ವಚ್ಛತಾ ವಿಭಾಗ ಕಸ ಕೊಂಡೊಯ್ಯುವ ಕೆಲಸ ಮಾಡುತ್ತಿತ್ತು. ಆದರೆ ಇಲಾಖೆಯ ನಡುವೆ ಸಮನ್ವಯದ ಕೊರತೆಯಿಂದ ನಿಗದಿತ ವೇಳೆಯಲ್ಲಿ ವಿಲೇವಾರಿ ಆಗುತ್ತಿರಲಿಲ್ಲ. ದನ, ಕರುಗಳ ಹಿಂಡು ಬಂದು ಇಲ್ಲಿನ ಪ್ಲಾಸ್ಟಿಕ್ ಸುತ್ತಿ ಬಿಸಾಡಿದ ಆಹಾರ ಪೊಟ್ಟಣಗಳ ತ್ಯಾಜ್ಯಗಳನ್ನು ತಿಂದು ಅನಾರೋಗ್ಯಕ್ಕೆ ತುತ್ತಾಗುತಿತ್ತು.
ಶ್ವಾನಗಳು ತ್ಯಾಜ್ಯ ಕಟ್ಟುಗಳನ್ನು ಎಳೆದಾಡಿಕೊಂಡು ಚೆಲ್ಲಾಪಿಲ್ಲಿ ಮಾಡುತ್ತಿದ್ದವು. ಇದು ಪ್ರವಾಸಿಗರು ಒಳಬರುವ ಸ್ಥಳದಲ್ಲೇ ತ್ಯಾಜ್ಯ ಹರಡಿ ಅಂತಾರಾಷ್ಟ್ರೀಯ ಬೀಚ್‌ನ ಸೌಂದರ್ಯಕ್ಕೆ ಧಕ್ಕೆಯಾಗಿತ್ತು. ಇದೀಗ ಪಾರ್ಕಿಂಗ್ ಸ್ಥಳ ಹಾಗೂ ಹೈ ಮಾಸ್ಟ್ ದೀಪದ ಬಳಿ ಹಾಕಲಾದ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. ಬೃಹತ್ ಟೈಯರ್‌ಗಳನ್ನು ತಂದು ಅದನ್ನು ವಿವಿಧ ಬಣ್ಣಗಳ ಬಳಿದು ವಿನ್ಯಾಸಗೊಳಿಸಿ ಸಸಿ ನೆಡಲಾಗಿದೆ.
ಇದೀಗ ಪರಿಸರ ಅಭಿಯಂತರ ಆಗಿ ಪದೋನ್ನತಿ ಹೊಂದಿರುವ ಸುಶಾಂತ್ ಅವರ ನೇತೃತ್ವದಲ್ಲಿ ತ್ಯಾಜ್ಯ ರಾಶಿ ಬೀಳುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ ಪರಿಸರ ಸಹ್ಯ ಸಂಸ್ಥೆಗಳ ನೆರವಿನಿಂದ ಗಿಡ ನೆಟ್ಟು ತ್ಯಾಜ್ಯ ಹಾಕದಂತೆ ಬೋಡ್ ಅಳವಡಿಸಲಾಗಿದೆ. ವ್ಯಾಪಾರಿಗಳಿಗೆ ಹಸಿ ಕಸ,ಒಣ ಕಸ ವಿಂಗಡಿಸಿ ನೀಡಲು ಸೂಚಿಸಲಾಗಿದೆ. ನೇರವಾಗಿ ಆ್ಯಂಟನಿ ವೇಸ್ಟ್ ಸಂಸ್ಥೆ ನಿತ್ಯ ತ್ಯಾಜ್ಯ ನಿರ್ವಹಣೆ ಮಾಡಲಿದ್ದು, ವ್ಯಾಪಾರಿಗಳು ಸಣ್ಣ ಮೊತ್ತದ ಶುಲ್ಕ ನೀಡಬೇಕಿದೆ.ಪ್ರವಾಸೋದ್ಯಮ ಇಲಾಖೆ ಬೀಚ್ ನಿರ್ವಹಣೆಗೆ ಈಗಾಗಲೇ ಟೆಂಡರ್ ಆಹ್ವಾನಿಸಿದ್ದು ಇದುವರೆಗೆ ಅಂತಿಮ ಗೊಂಡಿಲ್ಲ. ನೇರವಾಗಿ ಪ್ರವಾಸೋದ್ಯಮ ಇಲಾಖೆಯೇ ನೋಡಿಕೊಳ್ಳುತ್ತಿದೆ. ಈ ಸ್ವಚ್ಛತಾ ಅಭಿಯಾನಕ್ಕೆ ಪಾಲಿಕೆಯ ಆರೋಗ್ಯ ಅಧಿಕಾರಿಗಳಾದ ನಟೇಶ್, ಸಂಜಯ್, ಪ್ರವೀಣ್ ಹಾಗೂ ಆ್ಯಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ರೋಶನ್ ನೆರವಾದರೆ ಎಪಿಡಿ ಫೌಂಡೇಶನ್‌ನ ದೀಪಾ ಸೂರ್ಯ ಅವರು ಪರಿಸರದಲ್ಲಿ ಸಸಿ ನೆಟ್ಟು ಪೋಷಿಸಲು ನೆರವಾಗಿದ್ದಾರೆ.
ನಿತ್ಯ ವಿಲೇವಾರಿ
ಕಳೆದ ಹಲವಾರು ತಿಂಗಳುಗಳಿಂದ ಬೀಚ್ ಮುಂಭಾಗ ಕಸದ ರಾಶಿ ಬೀಳುತ್ತಿತ್ತು. ಉದಯವಾಣಿ ಪತ್ರಿಕೆಯು ಸಮಸ್ಯೆ ವರದಿ ಮಾಡಿದಾಗಾ ಎರಡು ಬಾರಿ ಸ್ವಚ್ಛತೆ ಕೈಗೊಂಡಿದ್ದೇವೆ. ಇದಕ್ಕೆ ಶಾಶ್ವತವಾದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇದೀಗ ನಿತ್ಯ ವಿಲೇವಾರಿಗೆ ವ್ಯಾಪಾರಿಗಳ ಸಹ ಕಾರದಿಂದ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರು ಇಲ್ಲಿಗೆ ಬರುವಾಗ ತಾವು ಬಳಸಿದ ವಸ್ತುಗಳನ್ನು ಹಾಕಲು ಇಡಲಾದ ನಿಗದಿತ ತೊಟ್ಟಿಗಳನ್ನು ಬಳಸಬೇಕು. ಬೀಚ್ ದಂಡೆಯಲ್ಲಿ, ಪಾರ್ಕಿಂಗ್ ಸ್ಥಳದಲ್ಲಿ ಕಸ ಎಸೆಯದೇ ಉತ್ತಮ ನಾಗರಿಕರಾಗಿ ವರ್ತಿಸಬೇಕು.
-ಸುಶಾಂತ್, ಪರಿಸರ ಎಂಜಿನಿಯರ್, ಮನಪಾ