ಬೆಂಗಳೂರು: ಬಿಜೆಪಿ ಹೆಣ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎನ್ನುವ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೆಣ ಬೀಳಿಸುವವರಿಗೆ ಬೆಂಬಲ ಕೊಟ್ಟು ರಾಜಕಾರಣ ಮಾಡುತ್ತಿದ್ದಾರೆಯೇ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಕೇರಳ, ತಮಿಳುನಾಡಿನಲ್ಲಿದ್ದ ಹತ್ಯಾ ರಾಜಕಾರಣವನ್ನು ಕರ್ನಾಟಕಕ್ಕೆ ತಂದು ಬೆಳೆಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ.
ಕೋಮುವಾದಿಗಳು ಬೆಳೆಯಲು ಅವಕಾಶ ನೀಡುವುದಿಲ್ಲ, ಮಟ್ಟ ಹಾಕುತ್ತೇವೆ ಎಂದು ವೀರಾವೇಶದಿಂದ ಹೇಳುತ್ತಿರುವ ಮುಖ್ಯಮಂತ್ರಿಗಳಿಗೆ ಈ ಮರಿ ತಾಲೀಬಾನಿಗಳು ನೆಂಟರೇ? ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಅವರ ವಿರುದ್ಧದ ಪ್ರಕರಣಗಳನ್ನು ಏಕೆ ವಾಪಸ್ ಪಡೆಯಲಾಗಿದೆ ಎಂಬುದಕ್ಕೆ ಸ್ಪಷ್ಟನೆ ನೀಡಬೇಕು. ಹೆಣ ಬೀಳಿಸಿ ರಾಜಕಾರಣ ಮಾಡಬಹುದು ಎಂಬ ಕಾರಣಕ್ಕೆ ಅವರಿಗೆ ಬೆಂಬಲಿಸುತ್ತಿರುವುದು ನಿಮ್ಮ ಭ್ರಮೆಯಾಗಲಿದೆ ಎಂದು ಹೇಳಿದರು.
ಎಸ್‌ಡಿಪಿಐ, ಕೆಎಫ್ಡಿ ಮುಂತಾದ ಸಂಘಟನೆಗಳು ಮೂರ್ನಾಲ್ಕು ರಾಜ್ಯಗಳಲ್ಲಿದ್ದು, ಕೇಂದ್ರ ಸರ್ಕಾರ ಏಕೆ ನಿಷೇಧಿಸಿಲ್ಲ ಎಂಬ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವ ರಾಜ್ಯದಲ್ಲಿ ಈ ಸಂಘಟನೆಗಳು ಸಮಾಜಘಾತಕ ಕೆಲಸ ಮಾಡುತ್ತಿವೆಯೋ ಅಂತಹಾ ರಾಜ್ಯದಿಂದ ನಿಷೇಧಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಆದರೆ, ಇದುವರೆಗೆ ರಾಜ್ಯ ಸರ್ಕಾರ ಅಂತಹ ಶಿಫಾರಸು ಮಾಡಿದೆಯೇ? ಹಾಗಿದ್ದರೆ ರಾಜ್ಯದಲ್ಲಿ ನಿಮ್ಮ ಹೊಣೆಗಾರಿಕೆ ಏನು ಎಂದು ಪ್ರಶ್ನಿಸಿದರು.
ಕಾಟಿಪಳ್ಳದಲ್ಲಿ ಹತ್ಯೆಯಾದ ದೀಪಕ್ ರಾವ್ ಬಿಜೆಪಿ ಕಾರ್ಯಕರ್ತನಲ್ಲ, ಆದರೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಸಚಿವ ಯು.ಟಿ.ಖಾದರ್ ಹೇಳಿಕೆಗೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ದನಗಳ್ಳ ಕಬೀರ್ ಎಂಬಾತನನ್ನು ಪೊಲೀಸರ್ ಎನ್‌ಕೌಂಟರ್ ಮಾಡಿದಾಗ ಸಚಿವ ಖಾದರ್ ಆ ದನಗಳ್ಳನ ಪರವಾಗಿ ನಿಂತು ಹೇಳಿಕೆ ಕೊಟ್ಟಿದ್ದರಲ್ಲದೆ, ಮನೆಗೆ ಹೋಗಿಬಂದಿದ್ದರು. ಹಾಗಿದ್ದರೆ ಆತ ಸಚಿವರ ಸಂಬಂಧಿಯೇ ಎಂದು ಪ್ರಶ್ನಿಸಿದರು.