ನವದೆಹಲಿ:ಬೈಕ್, ಸ್ಕೂಟರ್ ಗಳಲ್ಲಿ ಹೋಗುವಾಗ ಹೆಲ್ಮೆಟ್ ಹಾಕಿಕೊಂಡು ಹೋಗಬೇಕು ಇಲ್ಲದಿದ್ದರೆ ಪೊಲೀಸರು ಹಿಡಿದು ದಂಡ ವಿಧಿಸುತ್ತಾರೆ. ಟ್ರಾಫಿಕ್ ನಿಯಮ ಪಾಲಿಸುವುದು ನಮ್ಮ ಜವಬ್ದಾರಿ. ಆದರೆ ಇಲ್ಲೊಬ್ಬ ವ್ಯಕ್ತಿ ಹೆಲ್ಮೆಟ್ ಹಾಕಿಕೊಂಡಿದ್ದಕ್ಕಾಗಿ ಪೊಲೀಸರು ಪ್ರಶ್ನಿಸಿರುವ ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ಪೊಲೀಸರು ಬೈಕ್ ನಲ್ಲಿ ಹೋಗುವಾಗ ಹೆಲ್ಮೆಟ್ ಹಾಕದೇ ಇರುವವರನ್ನು ಹಿಡಿಯುತ್ತಾರೆ. ಎಷ್ಟೋ ಜನ ಯುವಕರು ಹೆಲ್ಮೆಟ್ ಹಾಕದೇ ಹೋಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆದರೆ ಅಚ್ಚರಿಯೆಂದರೆ ಈ ವ್ಯಕ್ತಿಯನ್ನು ಪೊಲೀಸರು ಹೆಲ್ಮೆಟ್ ಹಾಕಿರುವ ಕಾರಣಕ್ಕೆ ಹಿಡಿದಿದ್ದಾರೆ.
ನಾಲ್ಕು ಚಕ್ರದ ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಮಾಡುವ ವ್ಯಾಪಾರಿ ತಲೆಗೆ ಹೆಲ್ಮೆಟ್ ಧರಿಸಿಕೊಂಡು, ಗಾಡಿಯನ್ನು ದೂಡುತ್ತಾ ಹೋಗಿದ್ದಾನೆ!. ಈ ವೇಳೆ ಪೊಲೀಸರು ಆತನನ್ನು ತಡೆದು, ನಿನ್ಯಾಕೆ ಹೆಲ್ಮೆಟ್ ಹಾಕಿದ್ದೀಯ ಎಂದು ಪ್ರಶ್ನಿಸಿದ್ದಾರೆ. ಉತ್ತರಿಸಿದ ತರಕಾರಿ ವ್ಯಾಪಾರಿ, ಹೆಲ್ಮೆಟ್ ಹಾಕದೇ ಹೋದರೆ ಪೊಲೀಸರು ಹಿಡಿಯುತ್ತಾರೆ. ಅದಕ್ಕೆ ಹೆಲ್ಮೆಟ್ ಹಾಕಿಕೊಂಡು ಗಾಡಿಯನ್ನು ದೂಡುತ್ತಾ ಹೋಗುತ್ತಿದ್ದೇನೆ ಎಂದಿದ್ದಾನೆ.
ಭಗವತ್ ಪ್ರಸಾದ್ ಪಾಂಡೆ ಎನ್ನುವ ಪೊಲೀಸ್ ಅಧಿಕಾರಿ ತರಕಾರಿ ವ್ಯಾಪಾರಿಯೊಂದಿಗಿನ ಮಾತನ್ನು, ಆತನ ಮುಗ್ಧತೆಯನ್ನು ವಿಡಿಯೋ ಮಾಡಿದ್ದು, 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡು ವೈರಲ್ ಆಗಿದೆ. ನಮಗೆ ಜಾಗೃತಿ ಬೇಕು, ಭಯವಲ್ಲ ಎಂದು ಬರೆದುಕೊಂಡು ವಿಡಿಯೋ ಶೇರ್ ಮಾಡಿದ್ದಾರೆ.
ತಳ್ಳುಗಾಡಿಯಲ್ಲಿ ಹೋಗುವಾಗ ಹೆಲ್ಮೆಟ್ ಹಾಕಬೇಕಿಲ್ಲ. ರಸ್ತೆ ಬದಿಯಿಂದ ಹೋದರೆ ಸಾಕು ಎಂದು ತರಕಾರಿ ವ್ಯಾಪಾರಿಗೆ ಹೇಳಿದ್ದಾರೆ.