Advertisement

ರೌಡಿಗಳ ಮನೆ ಕದ ತಟ್ಟಿದ ಪೊಲೀಸರು

09:49 AM Jun 24, 2022 | Team Udayavani |

ಹುಬ್ಬಳ್ಳಿ: ಮಹಾನಗರ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚುಟುವಟಿಕೆಗಳ ಹಿನ್ನೆಲೆಯಲ್ಲಿ ಕಮಿಷನರೇಟ್‌ನ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಅವರ ಕಾರ್ಯ ಚಟುವಟಿಕೆಗಳ ಪರಿಶೀಲಿಸಲಾಯಿತು. ಇನ್ನೂ ಕೆಲ ರೌಡಿಗಳನ್ನು ಠಾಣೆಗೆ ಕರೆಯಿಸಿ ರೌಡಿ ಪರೇಡ್‌ ನಡೆಸುವ ಮೂಲಕ ಎಚ್ಚರಿಕೆ ನೀಡಲಾಯಿತು.

Advertisement

ಗುರುವಾರ ಬೆಳಗಿನ ಜಾವ ಮಹಾನಗರ ವ್ಯಾಪ್ತಿಯ ಕೆಲ ರೌಡಿಗಳ ಮನೆಗಳ ಬಾಗಿಲನ್ನು ಆಯಾ ಠಾಣೆ ವ್ಯಾಪ್ತಿಯ ಪೊಲೀಸರು ತಟ್ಟಿದ್ದಾರೆ. ಮನೆಗಳಲ್ಲಿ ಶಸ್ತಾಸ್ತ್ರ ಸಂಗ್ರಹಿಸಿರುವ ಬಗ್ಗೆ ಪರಿಶೀಲಿಸಿದ್ದಾರೆ. ಈ ವೇಳೆ ಇಬ್ಬರ ಮನೆಗಳಲ್ಲಿ ಲಾಂಗ್‌, ಮಚ್ಚುಗಳು ದೊರೆತ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿ ಠಾಣೆ ಹಾಗೂ ಬೆಂಡಿಗೇರಿ ಠಾಣೆಯಲ್ಲಿ ತಲಾ ಒಂದು ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು 186 ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಕೆಲ ರೌಡಿಗಳನ್ನು ಠಾಣೆಗೆ ಕರೆಯಿಸಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು. ಜನರಿಗೆ ತೊಂದರೆ ನೀಡುವ ಕೆಲಸ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಗ್ನಿಪಥ ಯೋಜನೆ ವಿರೋಧಿಸಿ ಕೆಲ ರಾಜ್ಯಗಳಲ್ಲಿ ಹಿಂಸಾಚಾರ ನಡೆದಿದೆ. ಇನ್ನೂ ಧಾರವಾಡದಲ್ಲಿ ಪ್ರತಿಭಟನೆ ವೇಳೆ ಲಘು ಲಾಠಿ ಪ್ರಹಾರ ನಡೆದಿತ್ತು. ಅಲ್ಲದೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಮಿಷನರೇಟ್‌ ಕಚೇರಿಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ್ದರು. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು. ಅಲ್ಲದೆ ಇತ್ತೀಚೆಗೆ ಎರಡೂ¾ರು ಚಾಕು ಇರಿತ ಪ್ರಕರಣಗಳು ಸಂಭವಿಸಿದ್ದವು. ಮಹಾನಗರದ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರ ಸೂಚನೆ ಮೇರೆಗೆ ರೌಡಿ ಪರೇಡ್‌ ನಡೆಸಲಾಗಿದೆ ಎನ್ನಲಾಗಿದೆ.

ಡಿಸಿಪಿ ಎಚ್ಚರಿಕೆ: ಠಾಣಾ ವ್ಯಾಪ್ತಿಯಲ್ಲಿ ಇನ್‌ ಸ್ಪೆಕ್ಟರ್‌ಗಳು, ಎಸಿಪಿಗಳು ದಾಳಿ ನೇತೃತ್ವ ವಹಿಸಿದ್ದರು. ಸೂಕ್ಷ್ಮ ಪ್ರದೇಶವಾಗಿರುವ ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸಾಹಿಲ್‌ ಬಾಗ್ಲಾ ಅವರು ರೌಡಿ ಪರೇಡ್‌ ನಡೆಸಿದರು. ಕೆಲ ರೌಡಿಗಳನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರೌಡಿಯೊಬ್ಬನ ಮನೆಯಲ್ಲಿ ಲಾಂಗ್‌ ಪತ್ತೆಯಾಗಿರುವುದಕ್ಕೆ ರೌಡಿ ಮೇಲೆ ಗದರಿದರಲ್ಲದೆ ದೂರು ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇಬ್ಬರ ಮೇಲೆ ಎಫ್‌ಐಆರ್‌

Advertisement

ಮಹಾನಗರ ಪೊಲೀಸ್‌ ಆಯುಕ್ತ ಲಾಭೂ ರಾಮ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆ ರೌಡಿಗಳ ಮನೆಗಳಿಗೆ ತೆರಳಿ ಅವರ ಕಾರ್ಯಚಟುವಟಿಕೆಗಳ ಕುರಿತು ಪರಿಶೀಲಿಸಲಾಗಿದೆ. ಕೆಲವರನ್ನು ಠಾಣೆಗೆ ಕರೆದು ಎಚ್ಚರಿಕ ನೀಡಲಾಗಿದೆ. 30 ರೌಡಿ ಶೀಟರ್‌ಗಳ ಮೇಲೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಕರಣ ದಾಖಲಿಸಲಾಗಿದೆ. ಮಾರಕಾಸ್ತ್ರ ಮನೆಯಲ್ಲಿಟ್ಟುಕೊಂಡಿದ್ದರಿಂದ ಇಬ್ಬರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಪ್ರತಿ ರೌಡಿಯ ಚಟುವಟಿಕೆಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಕಾನೂನುಬಾಹಿರ ಚುವಟಿಕೆಗಳಲ್ಲಿ ಪಾಲ್ಗೊಳ್ಳುವರರ ಮೇಲೆ ನಿಗಾ ವಹಿಸಲಾಗಿದೆ. ಅಂತಹ ಘಟನೆಗಳು ಕಂಡುಬಂದರೆ ಅವರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿಯೊಬ್ಬ ರೌಡಿಶೀಟರ್‌ ಮೇಲೆ ಪೊಲೀಸರ ನಿಗಾ ಇರುತ್ತದೆ. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಕೂಡ ಇಂತಹ ರೌಡಿಶೀಟರ್‌ಗಳಿಗೆ ಹೆದರುವ ಅಗತ್ಯವಿಲ್ಲ. ಏನೇ ತೊಂದರೆ ನೀಡಿದರೂ ಠಾಣೆಗೆ ಮಾಹಿತಿ ನೀಡಿ. ಒಂದು ವೇಳೆ ಸ್ಪಂದಿಸದಿದ್ದರೆ ಹಿರಿಯ ಅಧಿಕಾರಿಗಳ ಕಚೇರಿಗೆ ತೆರಳಿ ತಿಳಿಸಬಹುದು. ನೇರವಾಗಿ ನನ್ನ ಮೊಬೈಲ್‌ಗೆ ಕರೆ ಮಾಡಬಹುದು. –ಸಾಹಿಲ್‌ ಬಾಗ್ಲಾ, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next