Advertisement
ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರ್ಯಾಯ ಅರ್ಚಕ ಶ್ರೀಧರ ತಂತ್ರಿ ಕಳತ್ತೂರು ಅವರು ಸೋಮವಾರ ರಾತ್ರಿ 11 ಗಂಟೆಗೆ ಮಂಗಳೂರಿನಿಂದ ಶಿರಸಿಗೆ ಹೋಗುವ ಸರಕಾರಿ ಬಸ್ ಹತ್ತಿದ್ದರು. 12 ಗಂಟೆ ಸುಮಾರಿಗೆ ಕಾಪುವಿನಲ್ಲಿ ಇಳಿದಿದ್ದಾರೆ. ಬಸ್ ಇಳಿಯುವ ಸಂದರ್ಭ 18 ಸಾವಿರ ರೂ. ನಗದು, ಬಟ್ಟೆ, ಕಾರ್ಡ್ ಹಾಗೂ ಮೊಬೈಲ್ ಇದ್ದ ಬ್ಯಾಗ್ ಅನ್ನು ಬಸ್‌ನಲ್ಲಿಯೇ ಮರೆತಿದ್ದರು.
ವಿಷಯ ತಿಳಿದ ತತ್‌ಕ್ಷಣ ಅವರು ಶಿರ್ವ ಠಾಣೆಗೆ ದೂರು ನೀಡಿದರು. ದೂರು ಸ್ವೀಕರಿಸಿದ ಶಿರ್ವ ಠಾಣೆ ಪೊಲೀಸರು ಕೂಡಲೇ ವಯರ್‌ಲೆಸ್ ಮೂಲಕ ಕಂಟ್ರೋಲ್ ರೂಮ್‌ಗೆ ಮಾಹಿತಿ ರವಾನಿಸಿದ್ದರು. ಉಡುಪಿ ಎಸ್‌ಪಿ ಕಚೇರಿಯ ಕಂಟ್ರೋಲ್ ರೂಮ್‌ನಲ್ಲಿ ಕರ್ತವ್ಯ ನಿರತರಾಗಿದ್ದ ಎಸ್.ಐ. ನಿತ್ಯಾನಂದ ಶೆಟ್ಟಿ ಹಾಗೂ ಕಂಟ್ರೋಲ್ ರೂಂ ಸಿಬಂದಿ ರಾತ್ರಿಯೇ ಜಿಲ್ಲೆಯ ಎಲ್ಲ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ತತ್‌ಕ್ಷಣವೇ ಬೈಂದೂರು ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬಂದಿ ಕಾರ್ಯಪ್ರವೃತ್ತರಾಗಿ ಬೈಂದೂರು ಬಸ್ ನಿಲ್ದಾಣದಲ್ಲಿ ರಾತ್ರಿ ಊಟಕ್ಕೆ ನಿಂತ ಬಸ್ ಅನ್ನು ಪರಿಶೀಲಿಸಿ ಬ್ಯಾಗ್ ಪತ್ತೆ ಮಾಡಿ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದರು. 1.30ರ ಸುಮಾರಿಗೆ ಬ್ಯಾಗ್ ಕಳೆದುಕೊಂಡ ಶ್ರೀಧರ ತಂತ್ರಿ ಕಳತ್ತೂರು ಅವರಿಗೆ ಬ್ಯಾಗ್ ಸಿಕ್ಕಿದ ವಿಷಯ ತಿಳಿಸಲಾಯಿತು.