ಬೆಂಗಳೂರು: ಆನ್‌ಲೈನ್ ಗೇಮ್ ಹಾಗೂ ಕ್ಯಾಸಿನೊ ಗೇಮ್ ಗೀಳಿಗೆ ಬಿದ್ದಿದ್ದ ಕಾನ್‌ಸ್ಟೇಬಲ್‌ವೊಬ್ಬ ಲಕ್ಷಾಂತರ ರೂ. ಸಾಲ ತೀರಿಸಲು ಮನೆ ಕಳವು ಮಾಡಿ ಜ್ಞಾನ ಭಾರತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಯಲ್ಲಪ್ಪ (30) ಬಂಧಿತ ಕಾನ್‌ಸ್ಟೇಬಲ್. ಈತನಿಂದ 26 ಗ್ರಾಂ ಚಿನ್ನಾಭರಣ, 4 ಕೆ.ಜಿ. ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ಅ.3ರಂದು ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಘಟನಾ ಸ್ಥಳ ಹಾಗೂ ಸಮೀಪದ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿ ಯಲ್ಲಪ್ಪನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಬಳ್ಳಾರಿ ಜಿಲ್ಲೆ ಸಿರಗುಪ್ಪ ಮೂಲದ ಯಲ್ಲಪ್ಪ 2016ನೇ ಸಾಲಿನ ಕಾನ್‌ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದ. 2017ರಲ್ಲಿ ಬನಶಂಕರಿ ಠಾಣೆಯಲ್ಲಿ ಮೊದಲು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾನೆ. 2023ರ ಫೆಬ್ರವರಿಯಲ್ಲಿ ಠಾಣೆ ವ್ಯಾಪ್ತಿಯ ಮನೆ ಕಳ್ಳ ಅಭಿಷೇಕ್ ಅಲಿಯಾಸ್ ಅಭಿ ಜತೆ ಸೇರಿಕೊಂಡು ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ. ಆದರೆ, ಕಚೇರಿಯ ಲ್ಲಿಟ್ಟಿದ್ದ ಅಲಾರಂ ಜೋರಾಗಿ ಶಬ್ದ ಮಾಡಿದ್ದರಿಂದ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅಭಿಯನ್ನು ಬಂಧಿಸಲಾಗಿತ್ತು. ಈ ವೇಳೆ ಕಾನ್ ಸ್ಟೇಬಲ್ ಕೃತ್ಯ ಬಯಲಾಗಿತ್ತು. ಆದರೆ, ಅಷ್ಟರಲ್ಲಿ ಯಲ್ಲಪ್ಪ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ. ಹೀಗಾಗಿ ಆರೋಪಿಯನ್ನು ಅಮಾನತು ಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸ ಲಾಗಿತ್ತು.ಆ ಬಳಿಕ ಮೇನಲ್ಲಿ ತನ್ನ ಅಮಾನತು ಆದೇಶ ಹಿಂಪಡೆದು ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ನಿಯೋಜಿಸ ಲಾಗಿತ್ತು. ಈ ನಡುವೆಯೂ ಅ.3 ರಂದು ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಲಾಗಿತ್ತು.
ಈ ಪ್ರಕರಣ ತನಿಖೆ ನಡೆಸಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆತ ಬೈಕ್‌ನಲ್ಲಿ ಮನೆಗೆ ಹೋಗಿದ್ದ. ಈ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಿಚಾರಣೆಯಲ್ಲಿ ಆಗಸ್ಟ್ ನಲ್ಲಿ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ಅಂಚೆ ಕಚೇರಿಯಲ್ಲಿ 28 ಸಾವಿರ ರೂ. ಕಳವು ಪ್ರಕರಣ ಹಾಗೂ ಸೆಪ್ಟೆಂಬರ್‌ನಲ್ಲಿ ಚಂದ್ರಾಲೇಔಟ್‌ನಲ್ಲಿ ಬೀಗ ಹೊಡೆದು ಮನೆ ಕಳವು ಮಾಡಿರುವ ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ಕಾರ್ಯಾಚರಣೆಯಲ್ಲಿ ಪಶ್ಚಿಮ ವಿಭಾಗ ಡಿಸಿಪಿ ಎಸ್.ಗಿರೀಶ್, ಕೆಂಗೇರಿ ಉಪವಿಭಾಗದ ಎಸಿಪಿ ಪರಮೇಶ್ವರ, ಠಾಣಾಧಿಕಾರಿ ಎಂ.ಸಿ.ರವಿ, ಪಿಎಸ್‌ಐ ಭಗವಂತರಾವ್ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಬೈಕ್ ನಂಬರ್ ಬದಲಾವಣೆ: ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ಎಸಗಲು ಆರೋಪಿ ಯಲ್ಲಪ್ಪ, ತನ್ನ ಬೈಕ್‌ನಂಬರ್‌ನ ಕೊನೆ ಸಂಖ್ಯೆಯನ್ನು ಬದಲಾವಣೆ ಮಾಡಿದ್ದಾನೆ. ಆದರೆ, ಸಿಸಿ ಕ್ಯಾಮೆರಾದಲ್ಲಿ ಆರೋಪಿಯ ಬೈಕ್‌ನ ಚಿತ್ರಣ ಸ್ಪಷ್ಟವಾಗಿದ್ದರಿಂದ ಸ್ಥಳೀಯರ ಮಾಹಿತಿ ಮೇರೆಗೆ ಆರೋಪಿಯೇ ಕಳವು ಮಾಡಿದ್ದಾನೆಂದು ಖಚಿತ ಪಡಿಸಿಕೊಂಡು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
20 ಲಕ್ಷ ರೂ. ಸಾಲ: ಆರೋಪಿ ಯಲ್ಲಪ್ಪ ಆನ್‌ಲೈನ್ ಗೇಮ್ ಮತ್ತು ಕ್ಯಾಸಿನೋ ಚಟಕ್ಕೆ ಬಿದ್ದು 20 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾನೆ. ಜತೆಗೆ ಬ್ಯಾಂಕ್ ಸಾಲ ಮತ್ತು ಕೈ ಸಾಲ ಕೂಡ ಮಾಡಿಕೊಂಡಿದ್ದಾನೆ. ಹೀಗಾಗಿ ಕಳವು ಮಾಡಿ ಸಾಲ ತೀರಿಸಲು ನಿರ್ಧರಿಸಿದ್ದ. ಆದರೆ, ಕಳವು ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಮತ್ತೆ ಗೇಮ್ ಗಳಿಗೆ ಹೂಡಿಕೆ ಮಾಡಿದ್ದಾನೆ ಎಂದು ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರಿಗೆ ಬೆದರಿಕೆ!: ಈ ನಡುವೆ ವಿಚಾರಣೆ ವೇಳೆ ಆರೋಪಿ, ಪೊಲೀಸರಿಗೆ ಬೆದರಿಕೆ ಹಾಕಿದ್ದು, ಹಣ ನೀಡುವುದಾಗಿಯೂ ಆಮಿಷವೊಡ್ಡಿದ್ದಾನೆ ಎಂಬುದು ಗೊತ್ತಾಗಿದೆ. ಕದ್ದ ಎಲ್ಲಾ ಚಿನ್ನಾಭರಣಗಳನ್ನು ಪೊಲೀಸರಿಗೆ ಕೊಟ್ಟಿದ್ದೇನೆ. ಆದರೆ, ಪೊಲೀಸರು ಸರಿಯಾಗಿ ರಿಕವರಿ ತೋರಿಸುತ್ತಿಲ್ಲ ಎಂದು ಆಪಾದಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.