ಜಮ್ಮು-ಕಾಶ್ಮೀರ: ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಕಾಶ್ಮೀರ ಮೂಲದ ಲಾರಿಯೊಂದನ್ನು ವಶಕ್ಕೆ ಪಡೆದಿದ್ದು, ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದತ್ತ ತೆರಳುತ್ತಿದ್ದ ಲಾರಿಯನ್ನು ಪಂಜಾಬ್-ಜಮ್ಮು ಗಡಿಯ ಕಥುವಾ, ಲಖಾನ್ ಪುರ್ ನಡುವೆ ಪೊಲೀಸರು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ, ದಿನಸಿ ಸಾಮಾನುಗಳ ಕೆಳಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ಅಡಗಿಸಿ ಇಟ್ಟಿರುವುದಾಗಿ ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.
ಇದರಿಂದಾಗಿ ಸಂಭಾವ್ಯ ದಾಳಿಯನ್ನು ತಡೆದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಾರಿ ಜಮ್ಮು-ಕಾಶ್ಮೀರ ನಂಬರ್ ಪ್ಲೇಟ್ ಹೊಂದಿದೆ. ಪುಲ್ವಾಮಾ ನಿವಾಸಿ ಜಾವಿದ್ ದಾರ್ ಟ್ರಕ್ ಚಾಲಕ ಎಂದು ಗುರುತಿಸಲಾಗಿದೆ ಎಂದು ವರದಿ ಹೇಳಿದೆ.
ವಾಹನದಲ್ಲಿ ಐದು ಎಕೆ 47, ಮದ್ದು, ಗುಂಡು ಹಾಗೂ 4.5 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಣಿವೆ ರಾಜ್ಯದಲ್ಲಿನ ಶಾಂತಿ ಪರಿಸ್ಥಿತಿಯನ್ನು ಕದಡಲು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಸ್ಮಗ್ಲಿಂಗ್ ನಡೆಯುತ್ತಿರುವುದಾಗಿ ಕಳೆದ ವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದರು.