ಬೆಂಗಳೂರು: ರಥಸಪ್ತಮಿ ದಿನದಂದು ನಗರದ ಪೊಲೀಸ್ ಆಯುಕ್ತರ ಆದೇಶ ಮೇರೆಗೆ ಪೊಲೀಸರು ನನ್ನ ಬಾರ್ ಮತ್ತು ರೆಸ್ಟೋರೆಂಟ್ ಮುಚ್ಚಿಸಿದರು. ಇದರಿಂದ ನನಗೆ ನಷ್ಟವಾಗಿದ್ದು, ಪೊಲೀಸ್ ಇಲಾಖೆಯಿಂದ ನನಗೆ ಎರಡು ಲಕ್ಷ ರೂ. ಪರಿಹಾರ ಕೊಡಿಸಬೇಕು ಎಂದು ಕೋರಿ ಬಾರ್ ಮಾಲೀಕರೊಬ್ಬರು ಹೈಕೋರ್ಟ್ ಮೊರೆಹೋಗಿದ್ದಾರೆ.
ಕೋರಮಂಲಗದ ಕೆ.ಸಿ.ಮಲ್ಲಪ್ಪ ಲೇಔಟ್‌ನ ಐದನೇ ಮುಖ್ಯರಸ್ತೆಯ ಮೂಕಾಂಬಿಕಾ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕ ಎಂ.ಕೃಷ್ಣಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದವರು. ಬುಧವಾರ ಕೃಷ್ಣಮೂರ್ತಿ ಅವರ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಪೀಠ, ನಗರ ಪೊಲೀಸ್ ಆಯುಕ್ತರು, ದಕ್ಷಿಣ ಆಗ್ನೇಯ ವಿಭಾಗದ ಡಿಸಿಪಿ ಮತ್ತು ಆಡುಗೋಡಿ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ನೋಟಿಸ್ ಜಾರಿ ಮಾಡಿದೆ.
ಆಡುಗೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ರಥಸಪ್ತಮಿ ಪ್ರಯುಕ್ತ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ಇದರಿಂದ ಕೋರಮಂಗಲ ಹಾಗೂ ಆಡುಗೋಡಿ ಠಾಣಾ ಸರಹದ್ದಿನಲ್ಲಿ ಫೆ.3 ಮತ್ತು 4ರಂದು ರಥೋತ್ಸವ ನಡೆಯುವ ರಸ್ತೆಯ ಇಕ್ಕೆಲಗಳಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್‌ಗ ಳನ್ನು ಮುಚ್ಚಬೇಕು ಎಂದು ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಆ ಆದೇಶ ಮೇರೆಗೆ ಆಡುಗೋಡಿ ಠಾಣೆ ಪೊಲೀಸರು ಎಂ.ಕೃಷ್ಣಮೂರ್ತಿ ಅವರ ಮಾಲೀಕತ್ವದ ಮೂಕಾಂಬಿಕ ಬಾರ್ ಮತ್ತು ರೆಸ್ಟೋರೆಂಟ್‌ನ ಬಾಗಿಲು ಮುಚ್ಚಿಸಿದ್ದರು. ಬಾರ್ ಮುಚ್ಚಿಸಿದ್ದರಿಂದ ತಮಗೆ ನಷ್ಟವಾಗಿದೆ ಎಂದು ಕೃಷ್ಣಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಾರ್ ಮಾಲೀಕರ ವಾದವೇನು?
ಅರ್ಜಿದಾರರ ಪರ ವಕೀಲ ಎನ್.ಪಿ. ಅಮೃತೇಶ್ ವಾದ ಮಂಡಿಸಿ, “ರಥಸಪ್ತಮಿ ಪ್ರಯುಕ್ತ ಕೃಷ್ಣಮೂರ್ತಿ ಅವರ ಬಾರ್ ಅನ್ನು ಪೊಲೀಸರು ಮುಚ್ಚಿಸಿದ್ದರು. ಆದರೆ, ರಥ ಸಾಗುವ ದಾರಿಯಲ್ಲಿ ಅರ್ಜಿದಾರರ ಬಾರ್ ಇರಲಿಲ್ಲ. ಆದರೂ ಅರ್ಜಿದಾರರ ಬಾರ್ ಬಾರ್ ಮುಚ್ಚಿಸಲಾಯಿತು. ಪರಿಣಾಮ ದೈನಂದಿನ ವಹಿವಾಟು ನಡೆಯದೆ ಅವರಿಗೆ ಹಣಕಾಸಿನ ನಷ್ಟವಾಗಿದೆ. ಇದರಿಂದ ಕೃಷ್ಣಮೂರ್ತಿಗೆ ಎರಡು ಲಕ್ಷ ರೂ. ನಷ್ಟಪರಿಹಾರ ತುಂಬಿಕೊಡುವಂತೆ ಪೊಲೀಸ್ ಇಲಾಖೆಗೆ ಆದೇಶಿಸಬೇಕು,” ಎಂದು ಕೋರಿದರು.
ಅಲ್ಲದೆ, ಬಾರ್ ಮುಚ್ಚಿಸುವಂತೆ ಆದೇಶಿಸುವ ಅಧಿಕಾರ ನಗರ ಪೊಲೀಸ್ ಆಯುಕ್ತರಿಗಿಲ್ಲ. ಹಾಗೆಯೇ, ಏಕಾಏಕಿ ಬಾರ್ ಮುಚ್ಚುವಂತೆ ಆದೇಶಿಸುವ ಕ್ರಮವೂ ಸರಿಯಲ್ಲ. ಒಂದೊಮ್ಮೆ ಸಕಾರಣದಿಂದ ಬಾರ್ ಮುಚ್ಚಲು ಆದೇಶಿಸಬೇಕಾದಾಗ ಮುಂಚಿತವಾಗಿಯೇ ಬಾರ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಅವರ ವಾದ ಆಲಿಸಬೇಕು ಎಂದು ಹೇಳಿದ ವಕೀಲರು, ಈ ಸಂಬಂಧ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.