ಥಾಣೆ: ವಧೆಗಾಗಿ ತಂದ ಮೇಕೆಯ ಮೇಲೆ ದೇವರ ಹೆಸರನ್ನು ಬರೆಯಲಾಗಿದೆ ಎಂಬ ಆರೋಪದ ಮೇಲೆ ಪೊಲೀಸರು ಮಾಂಸದ ಅಂಗಡಿಯನ್ನು ಸೀಲ್ ಮಾಡಿದ ಘಟನೆ ಭಾನುವಾರ ನಡೆದಿದೆ. ಮೇಕೆಯ ಫೋಟೋವೂ ವೈರಲ್ ಆಗಿದ್ದು ಈ ಕುರಿತು ಆಕ್ರೋಶವೂ ವ್ಯಕ್ತವಾಗಿದೆ.
ದೂರಿನ ಮೇರೆಗೆ ಪೊಲೀಸರು ಶನಿವಾರ ಸಿಬಿಡಿ ಬೇಲಾಪುರದ ಅಂಗಡಿಯನ್ನು ಸೀಲ್ ಮಾಡಿದ್ದಾರೆ ಮತ್ತು ಅದರ ಮಾಲಕ ಮತ್ತು ಕೆಲಸಗಾರ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೂರನ್ನು ಉಲ್ಲೇಖಿಸಿದ ಅಧಿಕಾರಿ, 22 ಮೇಕೆಗಳನ್ನು ವಧೆ ಮಾಡಲು ಅಂಗಡಿಗೆ ತರಲಾಗಿತ್ತು ಆದರೆ ಅದರಲ್ಲಿ ಒಂದು ಪ್ರಾಣಿಯ ಮೇಲೆ ಧಾರ್ಮಿಕ ಹೆಸರನ್ನು ಚಿತ್ರಿಸಲಾಗಿತ್ತು’ ಎಂದು ಹೇಳಿದ್ದಾರೆ.
ಮೂವರನ್ನು ಮೊಹಮ್ಮದ್ ಶಫಿ ಶೇಖ್, ಸಾಜಿದ್ ಶಫಿ ಶೇಖ್ ಮತ್ತು ಕುಯ್ಯಮ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 295 (ಎ) ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ 34 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂವರೂ ಮೇಕೆಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಅಂಗಡಿಯ ಪರವಾನಗಿ ರದ್ದುಪಡಿಸಲು ಪೊಲೀಸರು ನಾಗರಿಕ ನಿಗಮ ಮತ್ತು ಇತರ ಅಧಿಕಾರಿಗಳೊಂದಿಗೆ ವಿಷಯವನ್ನು ಚರ್ಚಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.