Advertisement

ವಾರಸುದಾರರಿಗೆ ಪೊಲೀಸರಿಂದ ವಸ್ತು ಹಸ್ತಾಂತರ

02:29 PM Nov 28, 2021 | Team Udayavani |

ಚಾಮರಾಜನಗರ: ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ಅಧಿಕಾರಿ, ಸಿಬ್ಬಂದಿಯ ಪ್ರಯತ್ನದಿಂದ ವಶಪಡಿಸಿಕೊಳ್ಳಲಾಗಿದ್ದ 64 ಸ್ವತ್ತು ಕಳವು ಪ್ರಕರಣಗಳಲ್ಲಿನ ಚಿನ್ನಾಭರಣ, ನಗದು, ಮೋಟಾರ್‌ ವಾಹನ, ಮೋಟಾರ್‌ ಸೈಕಲ್‌, ಮೊಬೈಲ್‌ಸೆಟ್‌, ಇನ್ನಿತರೆ ವಸ್ತುಗಳನ್ನು ಸಂಬಂಧಪಟ್ಟ ವಾರಸು ದಾರರಿಗೆ ಹಿಂತಿರುಗಿಸುವ ಪ್ರಾಪರ್ಟಿ ರಿಟರ್ನ್ಸ್ ಪರೇಡ್‌ ನಗರದಲ್ಲಿ ಶನಿವಾರ ನಡೆಯಿತು.

Advertisement

ನಗರದ ಜಿಲ್ಲಾ ಪೊಲೀಸ್‌ ಕವಾಯಿತು ಮೈದಾನದಲ್ಲಿ, ಪೊಲೀಸ್‌ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಳವು ವಸ್ತುಗಳ ಪ್ರದರ್ಶನ ಮತ್ತು ಮರು ವಶಪಡಿಸಿಕೊಂಡ ಕಳವಿನ ವಸ್ತುಗಳನ್ನು ವಾರಸುದಾರರಿಗೆ ಮರಳಿಸುವ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾಸಾರಾ ಥಾಮಸ್‌ ಅವರು ವಸ್ತುಗಳನ್ನು ಕಳೆದುಕೊಂಡಿದ್ದವರಿಗೆ ಮರಳಿ ನೀಡುತ್ತಿದ್ದಂತೆ ವಾರಸುದಾರರ ಮುಖದಲ್ಲಿ ಮಂದಹಾಸ ಮೂಡುವಂತಾಯಿತು.

ಪ್ರಾಮಾಣಿಕರ ಪ್ರಯತ್ನ: ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾಸಾರಾ ಥಾಮಸ್‌, 2020ರಿಂದ ಹಾಗೂ 2021ರ ಅಕ್ಟೋಬರ್‌ ಅಂತ್ಯದವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 175 ಸ್ವತ್ತು ಕಳವು ಪ್ರಕರಣಗಳಲ್ಲಿ 64 ಪ್ರಕರಣ ಪತ್ತೆ ಹಚ್ಚಲಾಗಿದೆ. ಪ್ರಕರಣಗಳ ಒಟ್ಟು ಮೌಲ್ಯ 1,46 ಕೋಟಿ ರೂ. ಗಳಾಗಿದ್ದು, ಇದು ಪೊಲೀಸ್‌ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಅಪರಾಧ ಪತ್ತೆದಳದ ಪ್ರಾಮಾಣಿಕ ಪ್ರಯತ್ನದಿಂದ ಸಾಧ್ಯವಾಗಿದೆ ಎಂದರು.

ಸಾಕಷ್ಟು ಶ್ರಮ: ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರರಾಜು ಮಾತನಾಡಿ, ಪತ್ತೆ ಹಚ್ಚಲಾದ 64 ಪ್ರಕರಣಗಳಲ್ಲಿ 47 ಪ್ರಕರಣಗಳ 69,88 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಲಾಗುತ್ತಿದೆ. ಪೊಲೀಸ್‌ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಅಪರಾಧ ಪತ್ತೆದಳ ಕಳವು ಪ್ರಕರಣಗಳ ಪತ್ತೆಹಚ್ಚುವಿಕೆಯಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದೆ. ಆದರೂ, ಕಳವು ವಸ್ತುಗಳ ಸ್ವಾಧೀನ ಶೇ.100ರಷ್ಟು ಸಾಧ್ಯವಾಗುವುದಿಲ್ಲ. ವಸ್ತುಗಳನ್ನು ಕಳೆದುಕೊಂಡ ವಾರಸುದಾರರಿಗೆ ಒಂದು ಸಣ್ಣ ಸಾಂತ್ವನ ನೀಡುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಜವಾಬ್ದಾರಿ ಹೆಚ್ಚಿದೆ: ಸಾರ್ವಜನಿಕರು ಹಾಗೂ ಸಾರ್ವಜನಿಕ ಆಸ್ತಿ ರಕ್ಷಣೆಯಲ್ಲಿ ಪೊಲೀಸ್‌ ಇಲಾಖೆಯದ್ದು ಪ್ರಮುಖ ಪಾತ್ರ. ಜಿಲ್ಲೆಯ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಪರಾಧ, ದರೋಡೆ, ಕಳ್ಳತನ ಪ್ರಕರಣ ತಡೆಯುವ ಸಲುವಾಗಿ ಪೊಲೀಸ್‌ ಬೀಟ್‌ ಹೆಚ್ಚಿಸಲಾಗಿದೆ. ವಿವಿಧ ಕಳವು ಪ್ರಕರಣ ಪತ್ತೆ ಹಚ್ಚಿರುವ ಅಧಿಕಾರಿ, ಸಿಬ್ಬಂದಿಗೆ ಇಲಾಖೆಯಿಂದ ನೀಡಲಾಗುತ್ತಿರುವ ಪ್ರಮಾಣಪತ್ರ ಹಾಗೂ ನಗದು ಬಹುಮಾನ ಸಾರ್ವಜನಿಕರ ರಕ್ಷಣಾ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಎಎಸ್ಪಿ ಸುಂದರರಾಜು ತಿಳಿಸಿದರು.

Advertisement

ಸ್ವತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿದ ಪೊಲೀಸ್‌ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಪ್ರಮಾಣಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ನಾಗರಾಜು, ಇತರೆ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next