Advertisement

ಅನಧಿಕೃತ ಆಧಾರ್‌ ನೋಂದಣಿ ಮನೆಗೆ ಪೊಲೀಸ್‌ ದಾಳಿ

10:31 AM Jul 12, 2018 | Harsha Rao |

ಬಂಟ್ವಾಳ: ಅನಧಿಕೃತವಾಗಿ ಆಧಾರ್‌ ನೋಂದಣಿ ಮಾಡುತ್ತಿದ್ದ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್‌ ಮತ್ತು ಪೊಲೀಸರು ದಾಳಿ ನಡೆಸಿ ಆರೋಪಿಗಳಿಬ್ಬರ ಸಹಿತ ನೋಂದಣಿ ಯಂತ್ರ ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿತ್ತು.

Advertisement

ಬಂಟ್ವಾಳ ಕೆಳಗಿನ ಪೇಟೆ, ಗ್ರಾಮಾಂತರ ಠಾಣೆಯ ಎದುರು ಸುಮಾರು ನೂರು ಅಡಿಗಳಷ್ಟು ಒಳಗೆ ಜೆಡಿಎಸ್‌ ಮುಖಂಡ ಹಾರೂನ್‌ ರಶೀದ್‌ ಮನೆಯಲ್ಲಿ ಕಳೆದ 2 ದಿನಗಳಿಂದ ನೋಂದಣಿ ನಡೆಯುತ್ತಿತ್ತು ಎಂದು ಆಪಾದಿತರು ತನಿಖೆಯ ಸಂದರ್ಭದಲ್ಲಿ ತಿಳಿಸಿದ್ದಾರೆ. ಕಡಬ ಮೂಲದ ಫ್ರಾನ್ಸಿಸ್‌ ಪ್ರಶಾಂತ್‌ ಡಿ’ಸೋಜಾ ತನ್ನ ಯುಐಡಿ ನಂಬ್ರವನ್ನು ಬಳಸಿ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದರು.

ಬಂಟ್ವಾಳದಲ್ಲಿ ನೋಂದಣಿ ಮಾಡಿಕೊಂಡ ಎಲ್ಲ ದಾಖಲೆಗಳನ್ನು ಫ್ರಾನ್ಸಿಸ್‌ ಸಂಜೆ ಆರು ಗಂಟೆಯ ಒಳಗೆ ಕಡಬ ನೋಂದಣಿ ವ್ಯಾಪ್ತಿಗೆ ಹೋಗಿ ಅಪ್‌ಲೋಡ್‌ ಮಾಡಬೇಕು. ಇಲ್ಲವಾದಲ್ಲಿ ನೋಂದಣಿಗಳು ತಿರಸ್ಕೃತವಾಗುತ್ತವೆ. ಆದರೆ ಫ್ರಾನ್ಸಿಸ್‌ ಅವರಿಗೆ ಬಂಟ್ವಾಳದಲ್ಲಿ ನೋಂದಣಿ ಮಾಡಲು ಅನುಮತಿ ಇಲ್ಲದ ಕಾರಣ ಅದು ಆಧಾರ್‌ ಅಕ್ರಮ ನೋಂದಣಿ ಆರೋಪದ ಪ್ರಕರಣವೆಂದು ಅಭಿಪ್ರಾಯ ವ್ಯಕ್ತವಾಗಿದೆ. ಇಂಥ ಪ್ರಕರಣ ಸೈಬರ್‌ ಕ್ರೈಮ್‌ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.

ಹಿರಿಯ ಅಧಿಕಾರಿಗಳು, ಕಾನೂನು ತಜ್ಞರಲ್ಲಿ ಚರ್ಚಿಸಿ ಈ ಪ್ರಕರಣಕ್ಕೆ ಸೂಕ್ತ ಸೆಕ್ಷನ್‌ ತಿಳಿದು ಎಫ್‌ಐಆರ್‌ ಮಾಡಲಾಗುವುದು ಎಂದು ಬಂಟ್ವಾಳ ನಗರ ಠಾಣಾಧಿಕಾರಿ ಚಂದ್ರಶೇಖರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next