Advertisement

ವಾಸಕ್ಕೆ ಯೋಗ್ಯವಿಲ್ಲದ ಪೊಲೀಸ್‌ ಕ್ವಾಟ್ರರ್ಸ್‌ಗಳು

04:39 PM Sep 05, 2022 | Team Udayavani |

ಮುರಿದು ಬೀಳುವ ಸ್ಥಿತಿಯಲ್ಲಿರುವ 50 ವರ್ಷಗಳಿಗೂ ಹಳೆಯ ಮನೆಗಳು, ಬೀಳುವ ಹಂತದಲ್ಲಿರುವ ಗೋಡೆಗಳು, ಛಾವಣಿ ಯಿಂದ ಸೋರುವ ಮಣ್ಣು, ಇದರ ಪಕ್ಕದಲ್ಲೇ ಕಸದ ರಾಶಿ, ಚರಂಡಿಗಳಿಂದ ಬರುವ ದುರ್ವಾಸನೆ, ಮಳೆ ಬಂದರೆ ಛಾವಣಿಯಿಂದ ಮನೆಯೊಳಗೆ ನುಗ್ಗುವ ನೀರು, ಶುದ್ಧ ಕುಡಿಯುವ ನೀರಿನ ಸಮಸ್ಯೆ….

Advertisement

ಇದು ಶಿಥಿಲಾವಸ್ಥೆಯಲ್ಲಿರುವ ರಾಜಧಾ ನಿಯ ನಾಗರಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಹಗಲಿರುಳು ಕಾರ್ಯನಿರ್ವಹಿಸುವ ಪೊಲೀಸ್‌ ಸಿಬ್ಬಂದಿ ವಾಸಿಸುವ ವಸತಿ ಗೃಹಗಳ ದುಸ್ಥಿತಿ. ಜನ ಸಾಮಾನ್ಯರಿಗೆ ರಕ್ಷಣೆ ಒದಗಿಸುವ ಪೊಲೀಸ್‌ ಸಿಬ್ಬಂದಿಗೆ ಕ್ವಾಟ್ರರ್ಸ್‌ಗಳಲ್ಲಿ ಮೂಲ ಭೂತ ಸೌಕರ್ಯಗಳಿಲ್ಲದೇ ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

ನಗರದೆಲ್ಲೆಡೆ 50-60 ವರ್ಷ ಹಳೆಯ ಹಲವು ಕ್ವಾಟ್ರರ್ಸ್‌ಗಳಿದ್ದು, ಇಲ್ಲಿನ ಅವ್ಯವಸ್ಥೆಯ ಆಗರದ ನಡುವೆಯೇ ಪೊಲೀಸ್‌ ಕುಟುಂಬಗಳು ದಿನ ದೂಡಬೇಕಾಗಿದೆ. 2025ರೊಳಗೆ 10 ಸಾವಿರ ಪೊಲೀಸ್‌ ವಸತಿ ಗೃಹ ನಿರ್ಮಿಸುವ ಗುರಿ ಹೊಂದಿರುವುದಾಗಿ ಸರ್ಕಾರ ಹೇಳಿದೆ. ಆದರೆ, ಸದ್ಯ ಹಳೆಯ ಕ್ವಾಟ್ರರ್ಸ್‌ಗಳಲ್ಲಿ ವಾಸಿಸುವ ಕುಟುಂಬಗಳಿಗೆ ಬಿರುಕು ಬಿಟ್ಟಿರುವ ಗೋಡೆಗಳ ನಡುವೆ ಜೀವ ಕೈಯಲ್ಲಿ ಹಿಡಿದುಕೊಂಡು ದಿನ ದೂಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿರುವ ಪ್ರಮುಖ ಪೊಲೀಸ್‌ ವಸತಿ ಗೃಹಗಳಾದ ಮಾಗಡಿ ರಸ್ತೆಯ ಪೊಲೀಸ್‌ ವಸತಿ ಗೃಹಗಳಲ್ಲಿ 39 ಬ್ಲಾಕ್‌ಗಳಿದ್ದು, 432 ಮನೆಗಳಿವೆ. ಇನ್ನು ಮೈಸೂರು ರಸ್ತೆಯ ಕ್ವಾಟ್ರರ್ಸ್‌ಗಳಲ್ಲಿ 306 ಮನೆಗಳಿವೆ. ಆಡುಗೋಡಿಯಲ್ಲಿರುವ ಸಿಎಆರ್‌ ಕ್ವಾಟ್ರರ್ಸ್‌ಗಳಲ್ಲಿ 16 ಬ್ಲಾಕ್‌ಗಳಲ್ಲಿ 480 ಮನೆಗಳಿವೆ. ಈ ಮೂರು ಕ್ವಾಟ್ರರ್ಸ್‌ಗಳ ಪೈಕಿ ಒಂದೊಂದು ಮನೆಗಳ ಪರಿಸ್ಥಿತಿಯೂ ಭಿನ್ನವಾಗಿದ್ದು, ಅವ್ಯವಸ್ಥೆಯ ಆಗರದಲ್ಲಿ ದಿನ ದೂಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿ ವಾಸಿಸುವ ಸಿಬ್ಬಂದಿ ತಮ್ಮ ಗೋಳು ತೋಡಿಕೊಂಡಿದ್ದಾರೆ.

ಬೀಳುವ ಹಂತದಲ್ಲಿದೆ ಗೋಡೆಗಳು: ಮೈಸೂರು ರಸ್ತೆಯ ಸಿಎಆರ್‌ ಕ್ವಾಟ್ರರ್ಸ್‌ ನಲ್ಲಿರುವ ಬಹುತೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತಗಳಲ್ಲಿವೆ. ಆದರೂ, ಆರ್ಥಿಕ ಸಂಕಷ್ಟದಿಂದಾಗಿ ಪೊಲೀಸ್‌ ಕುಟುಂಬಗಳು ಭೀತಿಯಿಂದ ಬದುಕುತ್ತಿವೆ. ಇನ್ನು ಕೆಲ ಮನೆಗಳಲ್ಲಿ ಮಳೆ ಬಂದರೆ ಛಾವಣಿ ಸೋರಿಕೆಯಾಗಿ ಮನೆ ತುಂಬಾನೀರು ನಿಂತುಕೊಳ್ಳುತ್ತಿದೆ. ಅಲ್ಲಲ್ಲಿ ಕಸಗಳ ರಾಶಿ ಬಿದ್ದಿದ್ದು, ಇದನ್ನು ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇಲ್ಲಿನ ಗೋಡೆಗಳು ಗೆದ್ದಲ ಹಿಡಿದು ಶಿಥಿಲಗೊಂಡಿವೆ. ಚರಂಡಿಯಲ್ಲಿ ನೀರು ನಿಂತ ಪರಿಣಾಮ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಈ ಕ್ವಾಟ್ರರ್ಸ್‌ಗಳಲ್ಲಿ 5 ಬ್ಲಾಕ್‌ಗಳಿದ್ದು, 306 ಮನೆಗಳಿವೆ. ಈ ಪೈಕಿ 220 ಮನೆಗಳಲ್ಲಿ ಪೊಲೀಸ್‌ ಕುಟುಂಬ ವಾಸಿಸುತ್ತಿವೆ. ಉಳಿದಂತೆ ಸುಮಾರು 80 ಮನೆಗಳು ಖಾಲಿ ಉಳಿದಿದ್ದು, ನಿರ್ವಹಣೆ ಕೊರತೆಯಿಂದ ಇವುಗಳು ಪಾಳು ಬಿದ್ದಿವೆ. ಕಳೆದ 20 ವರ್ಷಗಳಿಂದ ಒಂದೇ ನೀರಿನ ಟ್ಯಾಂಕ್‌ ಬಳಸಲಾಗುತ್ತಿದ್ದು, ಇದನ್ನು ಬದಲಾಯಿಸದ ಹಿನ್ನೆಲೆಯಲ್ಲಿ ಅದೇ ನೀರನ್ನು ಸೇವಿಸುವ ಇಲ್ಲಿನ ಪೊಲೀಸ್‌ ಕುಟುಂಬಸ್ಥರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿವೆ. ಈ ಕ್ವಾಟ್ರರ್ಸ್‌ ಆವರಣದ ಪಕ್ಕದಲ್ಲಿರುವ ಶಾಲೆಯೊಂದನ್ನು ಕಳೆದ 8 ವರ್ಷಗಳ ಹಿಂದೆಯೇ ಮುಚ್ಚಲಾಗಿದ್ದು, ಸೂಕ್ತ ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ.

ನೀರಿನ ಸಮಸ್ಯೆಗೆ ಪರಿಹಾರವಿಲ್ಲ: ಮಾಗಡಿ ರಸ್ತೆಯಲ್ಲಿರುವ ಪೊಲೀಸ್‌ ವಸತಿ ಗೃಹದಲ್ಲಿ ನೀರಿನ ಸಮಸ್ಯೆ ವಿಪ ರೀತ ಇದೆ. ದಿನಕ್ಕೆ 2 ಗಂಟೆಗಳು ಮಾತ್ರ ಕಾವೇರಿ ನೀರು ಬರುತ್ತದೆ. ಆ ಸಮಯದಲ್ಲಿ ನೂರಾರು ಕುಟುಂಬ ಇದಕ್ಕಾಗಿ ಸರತಿ ಸಾಲಿನಲ್ಲಿ ತಾಸುಗಟ್ಟಲೆ ನಿಲ್ಲಬೇಕಾದ ಸ್ಥಿತಿ ಇದೆ. 1 ಬಿಎಚ್‌ಕೆ ಮನೆ ಸಣ್ಣ ಗೂಡಿನಂತಿದ್ದರೂ, 7 ಸಾವಿರ ರೂ. ಬಾಡಿಗೆ ಪಡೆಯುತ್ತಾರೆ. ಮನೆಯ ಮೇಲ್ಛಾವಣಿ ಕುಸಿದು ಬೀಳುವ ಹಂತದಲ್ಲಿದೆ. ಸುಮಾರು 50 ವರ್ಷಗಳ ಹಳೆಯ ಕಟ್ಟಡಗಳಾಗಿದ್ದರೂ, ಇಲ್ಲಿರುವ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.

ಇಲ್ಲಿರುವ ಪ್ರತಿ ರೂಂಗಳಲ್ಲಿ ಗೋಡೆಗೆ ಬಡಿದರೆ ಮಣ್ಣು ಉದುರುತ್ತವೆ. ಅಲ್ಲದೆ, 12 ಅಡಿ ಉದ್ದ, 9 ಅಡಿ ಅಗಲವಿರುವ ಕಿರಿದಾದ ಕೋಣೆಯಲ್ಲಿ ಪೊಲೀಸ್‌ ಸಿಬ್ಬಂದಿ ಕುಟುಂಬಸ್ಥರೊಂದಿಗೆ ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ 3 ವರ್ಷಗಳಿಂದ ಛಾವಣಿ ಕುಸಿದು ಗೋಡೆಗಳು ಶಿಥಿಲಾವಸ್ಥೆ ತಲುಪಿದೆ. ಮನೆಯ ಒಳಭಾಗವು ಗೆದ್ದಲು ಹಿಡಿದು ಅಪಾಯದಲ್ಲಿವೆ. ಇಲ್ಲಿ ವಾಸಿಸುವ ಪೊಲೀಸರು ತಮ್ಮ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದರೆ ಎಲ್ಲಿ ಕೆಲಸ ಕಳೆದುಕೊಳ್ಳಬೇಕೋ ಎಂಬ ಭೀತಿಯಲ್ಲೇ ಕಾಲ ಕಳೆಯುವಂತಾಗಿದೆ.

ಕ್ವಾಟ್ರರ್ಸ್‌ಗೆ ತಗಲುವ ನೀರಿನ ವೆಚ್ಚ, ಕೊಳವೆಬಾವಿ ಸ್ಯಾನಿಟರಿ ವೆಚ್ಚ, ಒಳಚರಂಡಿ ವೆಚ್ಚದ ಒಟ್ಟು ಮೊತ್ತದಿಂದ ಪ್ರತಿ ಕ್ವಾಟ್ರರ್ಸ್‌ಗಳಿಗೂ ಎಷ್ಟು ವೆಚ್ಚ ತಗುಲುತ್ತದೆ ಎಂಬುದನ್ನು ಲೆಕ್ಕಹಾಕಿ ಬಿಲ್‌ ಪಡೆಯುತ್ತಾರೆ. ಇನ್ನು ಪ್ರತಿ ತಿಂಗಳ ಅಂತ್ಯಕ್ಕೆ 1,400 ರೂ.ವರೆಗೂ ನೀರಿನ ಬಿಲ್‌ ಬರುತ್ತದೆ. ಜಲ ಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರೂ ಪ್ರಯೋಜನವಾಗಿಲ್ಲ. ಕಾವೇರಿ, ಶರಾವತಿ, ಕೃಷ್ಣ ಬ್ಲಾಕ್‌ಗಳಲ್ಲಿ ಸಮಸ್ಯೆಗಳು ಅಧಿಕವಾಗಿದ್ದು, ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ: ಆ ದೊಡ್ಡ ಬಾಲಿವುಡ್ ನಿರ್ದೇಶಕನಿಗೆ KGF -2 ಅರ್ಧಗಂಟೆಗಿಂತ ಹೆಚ್ಚು ಸಮಯ ನೋಡೋಕೆ ಆಗಿಲ್ಲ: RGV

ಇನ್ನು ಇಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, 2 ದಿನಕ್ಕೊಮ್ಮೆ ಬೆಳಗ್ಗೆ 5.30 ರಿಂದ 6.30ರ ವರೆಗೆ ಕಾವೇರಿ, ಬೋರ್‌ವೆಲ್‌ ನೀರು ಮಿಶ್ರಣವಾಗಿ ಬರುತ್ತದೆ. ಈ ಸಂದರ್ಭಗಳಲ್ಲಿ ಸಂಗ್ರಹಿಸಿಡುವ ನೀರನ್ನೇ ದಿನಪೂರ್ತಿ ಬಳಸಬೇಕಾಗುತ್ತದೆ. ಆಡುಗೋಡಿ ಪೊಲೀಸ್‌ ವಸತಿ ಗೃಹದ ಒಳಭಾಗದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲಾಗಿದ್ದು, ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಕ್ವಾಟ್ರರ್ಸ್‌ ಸಿಬ್ಬಂದಿ ಅತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸೂಕ್ತ ರೀತಿಯ ಪೀಠೊಪಕರಣಗಳಿಲ್ಲದೇ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲದಂತಾಗಿದೆ. ಇನ್ನು ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿದೆ.

ವರ್ಷದೊಳಗೇ ಗೋಡೆ ಬಿರುಕು : ನೂತನವಾಗಿ ನಿರ್ಮಿಸಲಾದ ಪೊಲೀಸ್‌ ವಸತಿ ಗೃಹಗಳಲ್ಲೂ ಈಗಾಗಲೇ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಕಳಪೆ ಗುಣಮಟ್ಟದಿಂದ ಮನೆ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬಿನ್ನಿಮಿಲ್‌ ಸಮೀಪದಲ್ಲಿ ಕೇವಲ 2 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ವಸತಿ ಗೃಹ 2021ರ ಅಕ್ಟೋಬರ್‌ನಲ್ಲಿ ಬಿರುಕು ಬಿಟ್ಟು ವಾಲಿರುವ ಪ್ರಕರಣಗಳು ಇದಕ್ಕೆ ಉದಾಹರಣೆ.

ದಟ್ಟವಾದ ಪೊದೆಗಳು : ಆಡುಗೋಡಿಯ ಸಿಎಆರ್‌ ಕ್ವಾಟ್ರರ್ಸ್‌ಗಳಲ್ಲಿ 25ಕ್ಕೂ ಅಧಿಕ ಪಾಳು ಬಿದ್ದ ಮನೆಗಳಿವೆ. ಇದರ ನಡುವೆ ದಟ್ಟವಾಗಿ ಪೊದೆಗಳು ಬೆಳೆದಿದ್ದು, ಈ ಪೊದೆಗಳೇ ಕಸ ಎಸೆಯುವ ಸ್ಪಾಟ್‌ಗಳಾಗಿ ಮಾರ್ಪಟ್ಟಿವೆ. ಇದರ ಬಾಗಿಲುಗಳು ಸಂಪೂರ್ಣವಾಗಿ ಮುರಿದು ಹೋಗಿದ್ದು, ನಿರ್ವಹಣೆ ಇಲ್ಲದೇ ಮನೆಗಳ ಗೋಡೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ.

ಇನ್ನು ಇಲ್ಲಿರುವ ಹಳೆಯ ಕ್ವಾಟ್ರರ್ಸ್‌ ಮನೆಗಳಲ್ಲಿ ಮೇಲ್ಛಾವಣಿಗಳಿಂದ ಮಣ್ಣು, ಸಿಮೆಂಟ್‌ ಸೋರಿಕೆಯಾಗಿ ಮನೆತುಂಬಾ ದೂಳು ತುಂಬಿಕೊಳ್ಳುತ್ತಿರುತ್ತವೆ. ಎಲ್ಲ ಮನೆಗಳಿಗೂ ಕೆಂಪುನೆಲ ಅಳವಡಿಸಲಾಗಿದ್ದು, ನಿರ್ವಹಣೆ ಇಲ್ಲದೇ ಅಲ್ಲಲ್ಲಿ ನೆಲಗಳು ಒಡೆದು ಹೋಗಿರುವುದು ಕಂಡು ಬಂದಿದೆ. ಮಳೆಗಾಲದಲ್ಲಿ ವಸತಿ ಗೃಹಗಳು ಸೋರುವುದು ಸಾಮಾನ್ಯವಾಗಿದೆ. ಪ್ಲಾಸ್ಟಿಕ್‌ ಹೊದಿಕೆ ಹಾಕಿಕೊಂಡು ದಿನ ದೂಡಬೇಕಾಗಿದೆ. ದುರಸ್ತಿ ಕಾರ್ಯ ಮಾಡಿದ ಮನೆಗಳಲ್ಲೂ ನೀರು ಸೋರಿಕೆಯಾಗುತ್ತಿದ್ದು, ಕಟ್ಟಡಗಳ ಕಳಪೆ ಕಾಮಗಾರಿಗೆ ಇದು ಸಾಕ್ಷ್ಯವಾಗಿದೆ.

ಹೀಗಾಗಿ ಬಹುತೇಕ ಪೊಲೀಸ್‌ ಕುಟುಂಬಗಳು ಕ್ವಾಟ್ರರ್ಸ್‌ಗಳಿಗೆ ಬಂದ 2-3 ದಿನಗಳಲ್ಲೇ ಮನೆ ಖಾಲಿ ಮಾಡಿಕೊಂಡು ಬಾಡಿಗೆ ಮನೆಗಳಲ್ಲಿ ಆಶ್ರಯ ಪಡೆಯುತ್ತಿವೆ ಎಂದು ಅಲ್ಲಿನ ನಿವಾಸಿಗಳೇ ಆರೋಪಿಸಿದ್ದಾರೆ.

ಪ್ರತಿ ವರ್ಷವೂ ಹೊಸ-ಹೊಸ ಪೊಲೀಸ್‌ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ಕ್ವಾಟ್ರರ್ಸ್‌ಗಳಲ್ಲಿ ವಾಸಿಸಲು ಪೊಲೀಸ್‌ ಸಿಬ್ಬಂದಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಪೊಲೀಸ್‌ ಸಿಬ್ಬಂದಿ ಹಿತ ದೃಷ್ಟಿಯಿಂದ ಪೊಲೀಸ್‌ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. -ಸುಬ್ರಮಣ್ಯೇಶ್ವರ ರಾವ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ

 

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next