ವಾಡಿ: ಕಲುಷಿತ ಪರಿಸರ ಹಾಗೂ ಹಂದಿಗಳ ಕಾಟದಿಂದ ಬಳಲುತ್ತಿದ್ದ ಸ್ಥಳೀಯ ಪೊಲೀಸ್ ವಸತಿ ಗೃಹಗಳಿಗೆ ಕೊನೆಗೂ ಸ್ವಚ್ಛತೆ ಭಾಗ್ಯ ಒದಗಿಬಂದಿದ್ದು, ಹಂದಿ ಸಾಕಾಣಿಕೆದಾರರ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳು ಗರಂ ಆದ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ 7:00 ಗಂಟೆಗೆ ಠಾಣೆಗೆ ದೌಡಾಯಿಸಿ ಬಂದ ಡಿವೈಎಸ್‌ಪಿ ಮಹೇಶ ಮೇಘಣ್ಣವರ್, ಪಿಎಸ್‌ಐ ಸಂತೋಷಕುಮಾರ ರಾಥೋಡ ಹಾಗೂ ಪುರಸಭೆ ಮುಖ್ಯಾಧಿಕಾರಿ ಶಂಕರ ಡಿ.ಕಾಳೆ ಪೊಲೀಸ್ ಪೇದೆಗಳ ಸಭೆ ನಡೆಸಿದರು.
ಪೊಲೀಸ್ ವಸತಿ ಗೃಹಗಳ ಸುತ್ತ ಹದಗೆಟ್ಟ ನೈರ್ಮಲ್ಯ ವ್ಯವಸ್ಥೆ ಹಾಗೂ ಹಂದಿಗಳ ಹಾವಳಿ ಕುರಿತು ಡಿವೈಎಸ್‌ಪಿ ಮಹೇಶ ಮೇಘಣ್ಣವರ್ ಮಾಹಿತಿ ಕಲೆ ಹಾಕಿದರು. ಹಂದಿ ಸಾಕಾಣಿಕೆದಾರರನ್ನು ಠಾಣೆಗೆ ಕರೆಸಿ ಕೂಡಲೇ ಹಂದಿಗಳನ್ನು ಬೇರೆಡೆ ಸಾಗಿಸುವಂತೆ ಆದೇಶ ನೀಡಿದರು.
ಕಾಂಪೌಂಡ್ ನಿರ್ಮಾಣದ ಬಗ್ಗೆಯೂ ಇದೇ ವೇಳೆ ಚರ್ಚೆ ನಡೆಯಿತು. ಮುಖ್ಯಾಧಿಕಾರಿ ಶಂಕರ ಕಾಳೆ ಆದೇಶದಂತೆ ಹಿರಿಯ ಆರೋಗ್ಯ ನಿರೀಕ್ಷಕ ಶರಣಪ್ಪ ಮಡಿವಾಳ, ವಸತಿ ಗೃಹ ಸುತ್ತಲ ಪ್ರದೇಶದಲ್ಲಿ ಹರಡಿಕೊಂಡಿರುವ ಕಸ ವಿಲೇವಾರಿ ಮತ್ತು ಕೊಳೆ ಸ್ವಚ್ಛತೆಗೆ ಮುಂದಾದರು. ಈ ವೇಳೆ ಎರಡು ಟ್ರಾಕ್ಟರ್ ಕಸ ಸಂಗ್ರಹವಾಯಿತು.
ವಸತಿ ಗೃಹಗಳ ಸುತ್ತ ಬೆಳೆದಿದ್ದ ಮುಳ್ಳುಕಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಪೊಲೀಸ್ ವಸತಿಗೃಹಗಳ ಒಳಚರಂಡಿಯಲ್ಲಿ ವಿಪರೀತ ಹೂಳು ತುಂಬಿದ್ದರಿಂದ ಕೊಳೆ ಹಾಗೆಯೇ ಉಳಿದುಕೊಂಡಿತು. ಈ ಕುರಿತು ಕೆಲವೇ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಹಂದಿಗಳ ಕಾಟ: ಪೊಲೀಸರ ನೆಮ್ಮದಿ ಭಂಗ’ ಎನ್ನುವ ಶೀರ್ಷಿಕೆಯಡಿ ಸೋಮವಾರ
“ಉದಯವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಸ್ಪಂದಿಸಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರುವುದು ಗಮನಾರ್ಹ.