Advertisement

Police; ಸಾಮೂಹಿಕ ದಯಾಮರಣ ಕೋರಿದ ಪೊಲೀಸರು!

11:02 PM Feb 24, 2024 | Team Udayavani |

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 3 ವರ್ಷಗಳಿಂದ ಪತಿ-ಪತ್ನಿ ಪ್ರಕರಣಗಳಲ್ಲಿ ಜಿಲ್ಲೆಯೊಳಗೆ ವರ್ಗಾವಣೆ ಮಾಡದ ವಿಚಾರಕ್ಕೆ ನೊಂದಿರುವ ಪೊಲೀಸರು ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಸುಪ್ರೀಂಕೋರ್ಟ್‌ ಆದೇಶ ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮದ ಪ್ರಕಾರ ಪತಿ-ಪತ್ನಿ ಪ್ರಕರಣಗಳಲ್ಲಿ ಇಬ್ಬರಿಗೂ ಒಂದು ಘಟಕ ಅಥವಾ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬಹುದು. ಆದರೆ ರಾಜ್ಯ ಸರಕಾರ, ಗೃಹ ಸಚಿವರು, ರಾಜ್ಯ ಪೊಲೀಸ್‌ ಮಹಾನಿರ್ದೇಶಕರು 3 ವರ್ಷಗಳಿಂದ ವರ್ಗಾವಣೆ ಮಾಡಿಲ್ಲ. ಪತಿ-ಪತ್ನಿ ಪ್ರಕರಣಗಳಲ್ಲಿ ಜಿಲ್ಲೆಯೊಳಗೆ ವರ್ಗಾವಣೆ ಕೋರಿ ಈ ಹಿಂದೆ ಗೃಹ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಕೇವಲ ಮಾಧ್ಯಮಗಳ ಎದುರು ಮಾತ್ರ ಸಚಿವರು ವರ್ಗಾವಣೆ ಮಾಡುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವೈರಲ್‌ ಆಗಿರುವ ಪತ್ರದಲ್ಲಿ ಆರೋಪಿಸಲಾಗಿದೆ.

ನಾವು 10-15 ವರ್ಷಗಳಿಂದ ತಂದೆ-ತಾಯಿ, ಪತ್ನಿ, ಮಕ್ಕಳನ್ನು ಬೇರೆಡೆ ಬಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಹೆತ್ತ ಮಕ್ಕಳ ಪಾಲನೆ ಮಾಡದೆ, ಜನ್ಮ ನೀಡಿದ ಪೋಷಕರ ಆರೈಕೆ ಮಾಡಲಾಗದ ಸ್ಥಿತಿ ಉಂಟಾಗಿದೆ. ವರ್ಗಾವಣೆ ಆಗದ ಕಾರಣ ದಾಂಪತ್ಯದಲ್ಲಿ ಬಿರುಕು ಉಂಟಾಗಿ, ಎಷ್ಟು ಕುಟುಂಬಗಳಲ್ಲಿ ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೆಲವು ಪ್ರಕರಣಗಳಲ್ಲಿ ದಂಪತಿ ಬೇರೆ ಬೇರೆ ಇರುವುದರಿಂದ ಮದುವೆಯಾಗಿ 5 ವರ್ಷ ಕಳೆದರೂ ಮಕ್ಕಳು ಆಗುತ್ತಿಲ್ಲ. ನಮ್ಮದು ಶಿಸ್ತಿನ ಇಲಾಖೆ. ಹೀಗಾಗಿ ಬೇರೆ ಇಲಾಖೆಯವರಂತೆ ಪ್ರತಿಭಟಿಸಲು ಅವಕಾಶವಿರುವುದಿಲ್ಲ. ಬೇರೆ ಇಲಾಖೆಯಲ್ಲಿ ಜಿಲ್ಲೆಯೊಳಗೆ ವರ್ಗಾವಣೆ ನಡೆದಿದೆ. ಆದರೆ ಪೊಲೀಸ್‌ ಇಲಾಖೆಯಲ್ಲಿ 2021ರಿಂದ ವರ್ಗಾವಣೆ ನಡೆದಿಲ್ಲ. ಅದರಿಂದ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಈ ಪತ್ರ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next