Advertisement

ಪೊಲೀಸ್‌ ಫೋನ್‌ ಇನ್‌ : “ಪಾರ್ಕಿಂಗ್‌ ಸ್ಥಳ ಅತಿಕ್ರಮಣ ತೆರವಿಗೆ ನೋಟಿಸ್‌’

09:58 PM Dec 18, 2020 | mahesh |

ಮಹಾನಗರ: ನಗರದಲ್ಲಿ ಬಹು ಮಹಡಿ ವಾಣಿಜ್ಯ ಸಂಕೀರ್ಣಗಳಲ್ಲಿ ವಾಹನ ಪಾರ್ಕಿಂಗ್‌ಗೆ ಕಾದಿರಿಸಿದ ಜಾಗದಲ್ಲಿ ನಡೆಸುತ್ತಿರುವ ವ್ಯಾಪಾರ ವ್ಯವಹಾರ ಚಟುವಟಿಕೆಗಳನ್ನು ತೆರವುಗೊಳಿಸುವ ಬಗ್ಗೆ ಪೊಲೀಸ್‌ ಕಮಿಷನರೆಟ್‌ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಸಲ್ಲಿಸಿದ ವರದಿ ಬಗ್ಗೆ 2 ತಿಂಗಳುಗಳಾದರೂ ಪಾಲಿಕೆ ಯಾವುದೇ ಕ್ರಮಕೈಗೊಳ್ಳದಿರುವ ಕಾರಣ ಪೊಲೀಸ್‌ ವತಿಯಿಂದಲೇ ಸಂಬಂಧಪಟ್ಟ ಕಟ್ಟಡಗಳ ಮಾಲಕರಿಗೆ ನೋಟಿಸ್‌ ನೀಡಲಾಗುವುದು ಎಂದು ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ನಗರದ ವಾಹನ ಪಾರ್ಕಿಂಗ್‌ ಮತ್ತು ಸಂಚಾರ ಸಂಬಂಧಿತ ಸಮಸ್ಯೆ ಕುರಿತಂತೆ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈ ವಿಷಯ ತಿಳಿಸಿದರು.

ನಗರದಲ್ಲಿ ಅಧಿಕೃತ ಪಾರ್ಕಿಂಗ್‌ ವಲಯಗಳನ್ನು ಗುರುತಿಸುವ ಪ್ರಕ್ರಿಯೆಯಡಿ ಟ್ರಾಫಿಕ್‌ ಪೊಲೀ ಸರು ಬಹುಮಹಡಿ ವಾಣಿಜ್ಯ ಸಂಕೀರ್ಣಗಳಲ್ಲಿ ನಿಯಮ ಉಲ್ಲಂಘಿಸಿ ವಾಹನ ಪಾರ್ಕಿಂಗ್‌ಗೆ ಕಾದಿರಿಸಿದ ಜಾಗದಲ್ಲಿ ವ್ಯಾಪಾರ ಚಟುವಟಿಕೆ ನಡೆಸುತ್ತಿರುವ 50 ತಾಣಗಳನ್ನು ಗುರುತಿಸಿ 2 ತಿಂಗಳ ಹಿಂದೆ ಮಹಾನಗರ ಪಾಲಿಕೆಗೆ ವರದಿ ಸಲ್ಲಿಸಿದ್ದರು. ಆದರೆ ಪಾಲಿಕೆ ವತಿಯಿಂದ ಈ ತನಕ ಯಾವುದೇ ಪ್ರತಿಸ್ಪಂದನೆ ಸಿಕ್ಕಿಲ್ಲ ಎಂದು ಆಯುಕ್ತರು ವಿವರಿಸಿದರು.

ಪಾಲಿಕೆಗೆ ರಿಮೈಂಡರ್‌ ಕಳುಹಿಸುವುದರಿಂದ ಯಾವುದೇ ಪ್ರಯೋಜನ ಆಗಬಹುದೆಂಬ ನಿರೀಕ್ಷೆ ಇಲ್ಲ. ಹಾಗಾಗಿ ಅತಿಕ್ರಮಣವನ್ನು ತೆರವುಗೊಳಿಸುವ ಬಗ್ಗೆ ಎಲ್ಲ 50 ಕಟ್ಟಡಗಳ ಮಾಲಕರಿಗೆ ನೋಟಿಸ್‌ ಕಳುಹಿಸಲಾಗು ವುದು. ತೆರವು ಕಾರ್ಯಾಚರಣೆಗೆ ಪಾಲಿಕೆ ಮುಂದಾದರೆ ಪೊಲೀಸ್‌ ರಕ್ಷಣೆ ಒದಗಿಸಲಾಗುವುದು ಎಂದರು.

ನಗರದ ಒಟ್ಟು ವಾಹನ ಸಂಚಾರ, ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದೀಗ ಮೊದಲ ಹಂತದಲ್ಲಿ ನೋ ಪಾರ್ಕಿಂಗ್‌ ತಾಣಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಲಾಗುವುದು. ನಗರದಲ್ಲಿ ವಿವಿಧೆಡೆ ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯಗೊಂಡ ಬಳಿಕ ನಿಗದಿತ ಪಾರ್ಕಿಂಗ್‌ ಸ್ಥಳಗಳನ್ನು ಗುರುತಿಸಲಾಗುವುದು ಎಂದರು. ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಒಟ್ಟು 6 ಕರೆಗಳು ಮಾತ್ರ ಬಂದಿದ್ದು, 5 ಕರೆಗಳು ಸಂಚಾರ ಸಮಸ್ಯೆ ಬಗ್ಗೆ ಹಾಗೂ 1 ಕರೆ ಗ್ರಾಮ ಪಂಚಾಯತ್‌ನಲ್ಲಿ ದಲಿತ ಸಮುದಾಯಕ್ಕೆ ಲಭ್ಯವಿರುವ ಅನುದಾನ ಮತ್ತಿತರ ಸವಲತ್ತುಗಳಿಗೆ ಸಂಬಂಧಿಸಿದ್ದಾಗಿತ್ತು. ಡ್ರಗ್ಸ್‌ ಬಗ್ಗೆ ಯಾರೂ ಕರೆ ಮಾಡಿರಲಿಲ್ಲ. ಡಿಸಿಪಿ ಹರಿರಾಮ್‌ ಶಂಕರ್‌ ಉಪಸ್ಥಿತರಿದ್ದರು.

Advertisement

ತುರ್ತು ಸಹಾಯವಾಣಿ ಸೇವೆ “112’ಕ್ಕೆ 4 ದಿನಗಳಲ್ಲಿ 91 ಕರೆ
ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿ ಯಲ್ಲಿ ಡಿ. 14ರಂದು ಚಾಲನೆಗೊಂಡಿರುವ ತುರ್ತು ಸಹಾಯವಾಣಿ ಸೇವೆ “112’ಕ್ಕೆ ನಾಲ್ಕು ದಿನಗಳ ಅವಧಿಯಲ್ಲಿ 91 ಕರೆಗಳು ಬಂದಿದ್ದು, ಬಹುತೇಕ ಕರೆಗಳು ವೈಯಕ್ತಿಕ ಅಸಮಾಧಾನದ ಸಣ್ಣ ಜಗಳಕ್ಕೆ ಸಂಬಂಧ ಪಟ್ಟವುಗಳಾಗಿವೆ ಎಂದು ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌ ತಿಳಿಸಿದ್ದಾರೆ. ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಹಾಯವಾಣಿ ಸೇವೆ “112’ಕ್ಕೆ ಉತ್ತಮ ಪ್ರತಿಸ್ಪಂದನೆ ಲಭಿಸಿದೆ ಎಂದರು.

ಪತಿ- ಪತ್ನಿ ನಡುವಣ ಜಗಳ, ಕೌಟುಂಬಿಕ ಸಮಸ್ಯೆ, ಮನೆಯಲ್ಲಿ ತಯಾರಿಸಿದ ಅಡು ಗೆಯ ಬಗ್ಗೆ ಕುಟುಂಬದ ಸದಸ್ಯರಲ್ಲಿ ಜಗಳ, ವೈಯಕ್ತಿಕ ಅಸಮಾಧಾನದಿಂದ ಹುಟ್ಟಿಕೊಂಡ ಸಣ್ಣ ಜಗಳ, ಆಸ್ತಿಗಾಗಿ ಜಗಳ- ಇವು ಈ ಸಹಾಯವಾಣಿಗೆ ಬಂದಿರುವ ಪ್ರಮುಖ ಕರೆಗಳಾಗಿವೆ ಎಂದರು. ಸ್ವೀಕೃತವಾದ 91 ಕರೆಗಳ ಪೈಕಿ ಒಂದು ಪ್ರಕರಣದಲ್ಲಿ ಮಾತ್ರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಹುಪಾಲು ಸಮಸ್ಯೆಗಳು ಠಾಣೆಯ ಮೆಟ್ಟಲೇರದೆ ಸಹಾಯವಾಣಿ ಸೇವೆಯ ಪೊಲೀಸರ ಭೇಟಿಯಿಂದ ಅಥವಾ ಅವರು ನಡೆಸಿದ ಸಂಧಾನ ಮಾತುಕತೆಯ ಹಿನ್ನೆಲೆಯಲ್ಲಿ ತತ್‌ಕ್ಷಣದ ಪರಿಹಾರ ಲಭಿಸಿ ಇತ್ಯರ್ಥ ಕಂಡಿವೆ. ಇದರಿಂದಾಗಿ ಠಾಣೆಗಳ ಮೇಲಣ ಹೊರೆ ಕಡಿಮೆಯಾಗಿದೆ ಎಂದರು.

ಪ್ರತಿಸ್ಪಂದನೆಯ ಅವಧಿ 1 ಗಂಟೆಯಿಂದ 40 ನಿಮಿಷಕ್ಕೆ ಇಳಿಕೆ
ಅತ್ಯಂತ ಕಡಿಮೆ ಅವಧಿಯಲ್ಲಿ ಸೇವೆ ಒದಗಿಸು ವುದು ಈ ಸಹಾಯವಾಣಿ ಸೇವೆಯ ಉದ್ದೇಶ. ಅದರಂತೆ ಇಲ್ಲಿ ಸಾರ್ವಜನಿಕರ ಕರೆಗೆ ಪೊಲೀಸರ ಪ್ರತಿಸ್ಪಂದನೆಯ ಅವಧಿ ಇಳಿಕೆಯಾಗಿದೆ. ಈ ಹಿಂದೆ ಸಾಮಾನ್ಯ ವಾಗಿ ಒಂದು ಕರೆಗೆ ಪೊಲೀಸ್‌ ಸ್ಪಂದನೆಗೆ 1 ಗಂಟೆ ಬೇಕಿದ್ದರೆ ಈಗ ಸಹಾಯವಾಣಿ ಸೇವೆ “112’ರಿಂದಾಗಿ 40 ನಿಮಿಷದೊಳಗೆ ಸ್ಪಂದಿಸಲು ಸಾಧ್ಯವಾಗಿದೆ ಎಂದರು. ಸಾರ್ವಜನಿಕರು ಈ ಸಹಾಯವಾಣಿ ಸೇವೆ “112’ರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಫುಟ್‌ಪಾತ್‌ನಲ್ಲಿ ನಿಲ್ಲಿಸಿದ ವಾಹನಗಳ ತೆರವು
ಲಾಲ್‌ಬಾಗ್‌ನ ಸಾಯಿಬೀನ್‌ ಕಾಂಪ್ಲೆಕ್ಸ್‌ ಬಳಿಯ ಫುಟ್‌ಪಾತ್‌ ಮೇಲೆ ವಾಹನಗಳನ್ನು ನಿಲ್ಲಿಸಲಾಗಿದೆ ಎಂದು ನಾಗರಿಕರೊಬ್ಬರಿಂದ ಬಂದ ಫೋನ್‌ ಕರೆಗೆ ಸ್ಪಂದಿಸಿದ ಆಯುಕ್ತರು, ತತ್‌ಕ್ಷಣ ಫ‌ುಟ್‌ಪಾತ್‌ನಲ್ಲಿ ನಿಲ್ಲಿ ಸಿದ್ದ ವಾಹನಗಳನ್ನು ತೆರವು ಮಾಡಿಸಿ ಅದರ ಫೋಟೊ ಕಳುಹಿಸಿ ಕೊಡುವಂತೆ ಸಂಬಂಧಪಟ್ಟ ಪೊಲೀಸ್‌ ಠಾಣೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಮುಖ ಅಹವಾಲುಗಳು
– ಉರ್ವ ಮಾರ್ಕೆಟ್‌ನಲ್ಲಿ ರಸ್ತೆ ಮಧ್ಯದಲ್ಲಿಯೇ ಬಸ್‌ ಮತ್ತಿತರ ವಾಹನಗಳನ್ನು ನಿಲ್ಲಿಸುತ್ತಿರುವ ಬಗ್ಗೆ ಇಬ್ಬರು ನಾಗರಿಕರು ಕರೆ ಮಾಡಿ ತಿಳಿಸಿದರು.

– ಕೊಟ್ಟಾರ ಚೌಕಿಯಲ್ಲಿ ಉಡುಪಿ ಭಾಗದಿಂದ ಬರುವ ವಾಹನಗಳಿಗೆ ಸರ್ವಿಸ್‌ ರಸ್ತೆಯ ವ್ಯವಸ್ಥೆ ಇಲ್ಲ; ಇದ ರಿಂದಾಗಿ ಅಲ್ಲಿನ ಜಂಕ್ಷನ್‌ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಓರ್ವರು ತಿಳಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ಕೊಟ್ಟಾರ ಚೌಕಿ ಜಂಕ್ಷನ್‌ನಲ್ಲಿ ವಾಹನಗಳ ಮಿತಿ ಮೀರಿದ ವೇಗಕ್ಕೆ ಕಡಿವಾಣ ಹಾಕಿ ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲ ಮಾಡಿಕೊಡಲು ಸಾಧ್ಯವೇ ಎಂದು ಪರಿಶೀಲಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು. ಬೈಕಂಪಾಡಿ ಬಳಿ ಪಣಂಬೂರು ಪೊಲೀಸ್‌ ಠಾಣೆಯ ಮಾರ್ಗದಲ್ಲಿ ಟ್ರಕ್‌ಗಳನ್ನು ನಿಲುಗಡೆ ಮಾಡುತ್ತಿರುವ ಬಗ್ಗೆ ನಾಗರಿಕರೊಬ್ಬರು ಕರೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next