Advertisement

ಪೊಲೀಸ್‌-ನೌಕಾಪಡೆ ಪ್ರಶ್ನೋತ್ತರ; ಉಳಿದ ಗೊಂದಲ

01:08 AM May 06, 2019 | sudhir |

ಉಡುಪಿ: ಸುವರ್ಣ ತ್ರಿಭುಜ ಜಲಸಮಾಧಿ ಆಗಿರುವುದನ್ನು ನೌಕಾಪಡೆ ಖಚಿತಗೊಳಿಸಿದ್ದರೂ ಕಾರಣವೇನು ಎಂಬುದನ್ನು ತಿಳಿಸಿಲ್ಲ. ಆದರೆ ಉಡುಪಿಯ ಅಂದಿನ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಅವರು 2019ರ ಜ.16ರಂದು ನೌಕಾಪಡೆಯ ಕಾರವಾರ ನೆಲೆಯ ಕಮಾಂಡಿಂಗ್‌ ಅಧಿಕಾರಿಗೆ ಕೆಲವು ಪ್ರಶ್ನೆಗಳನ್ನು ಒಳಗೊಂಡ ಪತ್ರ ಕಳುಹಿಸಿದ್ದು, ಅದಕ್ಕೆ ಕಮಾಂಡರ್‌ ಜ.21ರಂದು ಉತ್ತರ ನೀಡಿದ್ದರು. ಈ ಉತ್ತರ ಹಲವು ಗೊಂದಲ ಹುಟ್ಟು ಹಾಕುವಂತಿದೆ.

Advertisement

ಮೀನುಗಾರ ಗುಂಪುಗಳಿಗೆ ಮಾಹಿತಿ
“ಹಡಗಿಗೆ ತಾಗಿರುವ ಬಗ್ಗೆ ಅಲ್ಲಿನ ಮೀನುಗಾರರಿಗೆ ಮಾಹಿತಿ ನೀಡಲಾಗಿತ್ತೆ?’ ಎಂಬ ಪ್ರಶ್ನೆಗೆ “ಹಡಗಿಗೆ ನೀರಿನಡಿ ತಾಗಿರುವ ಬೋಟ್‌ ಅಥವಾ ಇತರ ವಸ್ತುವಿನ ಬಗ್ಗೆ ಡಿ.15ರಂದು ಬೆಳಗ್ಗೆ 10.30ಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಅಲ್ಲಿ ಹಿಂದಿನ ದಿನ ಅಥವಾ ಡಿ.15ರ ಮುಂಜಾವ ಅಂಥ ಘಟನೆ ಆಗಿಲ್ಲ ಎಂಬುದಾಗಿ ಬೋಟ್‌ನವರು ಖಚಿತಪಡಿಸಿದ್ದಾರೆ’ ಎಂದು ನೌಕಾಪಡೆಯ ಅಧಿಕಾರಿ ಉತ್ತರಿಸಿದ್ದಾರೆ.

ಗೋವಾದಲ್ಲಿ ನಾಪತ್ತೆ ಮಾಹಿತಿ ಯಾರದ್ದು?
“ಕರಾವಳಿ ಕಾವಲು ಪೊಲೀಸರು ನೀಡಿದ ಮಾಹಿತಿ ಯನ್ನು ನೌಕಾಪಡೆ ಅಥವಾ ಕೋಸ್ಟ್‌ ಗಾರ್ಡ್‌ ಜತೆ ಹಂಚಿಕೊಳ್ಳಲಾಗಿತ್ತೆ? ಕಾರ್ಯಾಚರಣೆಗೆ ಸೂಚಿಸಲಾಗಿತ್ತೆ?’ ಎಂಬ ಪ್ರಶ್ನೆಗೆ “ಮಲ್ಪೆಯ ಸಿಎಸ್‌ಪಿ ಡಿ.22ರಂದು ನೀಡಿದ ಮಾಹಿತಿ ಪ್ರಕಾರ ಸುವರ್ಣ ತ್ರಿಭುಜ ಡಿ.16ರ ಮುಂಜಾವ 1 ಗಂಟೆಯ ಬಳಿಕ ಗೋವಾ ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡಿದೆ. ಐಎನ್‌ಎಸ್‌ ಕೊಚ್ಚಿ ಹಡಗಿಗೆ ಹಾನಿಯಾಗಿರುವುದು ಡಿ.15ರಂದು ಸಿಂಧುದುರ್ಗ ಪ್ರದೇಶದಲ್ಲಿ. ಇವೆರಡೂ ಘಟನೆಗಳಿಗೆ ಸಂಬಂಧವಿಲ್ಲ. ಇವರೆಡೂ ಪ್ರತ್ಯೇಕ ಪ್ರದೇಶಗಳು’ ಎಂದು ಉತ್ತರಿಸಿದ್ದಾರೆ. ಇದು “ಬೋಟ್‌ ನಾಪತ್ತೆಯಾಗಿರುವುದು ಗೋವಾದಲ್ಲಿ’ ಎಂಬ ಸಂದೇಶವನ್ನು ಕರಾವಳಿ ಕಾವಲು ಪೊಲೀಸರೇ ನೌಕಾಪಡೆಗೆ ನೀಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ಇದು ಕೂಡ ಗೊಂದಲಕ್ಕೆ ಕಾರಣವಾಗಿದೆ.

ಸರಕು ನೌಕೆ ಸಂಚರಿಸಿದ್ದು ಹೌದು
ಸರಕು ನೌಕೆ ಸಂಚಾರದ ಬಗೆಗಿನ ಪ್ರಶ್ನೆಗೆ, “ಐಎನ್‌ಎಸ್‌ ಕೊಚ್ಚಿ ಹಡಗು ಸಂಚರಿಸಿದ ಪ್ರದೇಶದಲ್ಲಿ ಅದೇ ದಿನ ಸಂಚರಿಸಿದೆ’ ಎಂದು ಉತ್ತರಿಸಿದ್ದಾರೆ. ಇದು ಸರಕು ನೌಕೆಯ ಸಂಚಾರವನ್ನು ಖಚಿತಪಡಿಸಿದಂತಾಗಿದೆ.
ಈಗ ಮತ್ತೆ ಎಸ್‌ಪಿ ನಿಶಾ ಜೇಮ್ಸ್‌ ವರದಿ ಕೇಳಿ ಪತ್ರ ಬರೆದಿದ್ದಾರೆ. ದೊರೆಯುವ ಉತ್ತರ ಗೊಂದಲಗಳಿಗೆ ತೆರೆ ಎಳೆಯಬಹುದು.

ಹಾನಿಯಾಗಿದ್ದು 6.5 ಮೀ. ಆಳದಲ್ಲಿ
ಐಎನ್‌ಎಸ್‌ ಕೊಚ್ಚಿ ಹಡಗಿಗೆ ಹಾನಿ ಯಾಗಿರುವ ಕುರಿತು ಕೇಳಲಾಗಿದ್ದ ಪ್ರಶ್ನೆಗೆ, “ಡಿ.15ರಂದು ಹಡಗಿಗೆ ಹಾನಿಯಾಗಿತ್ತು. ಈ ಬಗ್ಗೆ ತಪಾಸಣೆ ನಡೆಸಿದಾಗ 6.5 ಮೀ. ಆಳದಲ್ಲಿ ಐಎನ್‌ಎಸ್‌ ಕೊಚ್ಚಿಯ ಸೋನಾರ್‌ ಡೋಮ್‌ಗೆ
ಹಾನಿಯಾಗಿರುವುದು ಗೊತ್ತಾಗಿದೆ. ಹಡಗಿನ ಇತರ ಯಾವುದೇ ಭಾಗಗಳಿಗೆ ಹಾನಿಯಾಗಿಲ್ಲ’ ಎಂದು ನೌಕಾಪಡೆ ಉತ್ತರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next