Advertisement
ರಾಜಧಾನಿ ವ್ಯಾಪ್ತಿಯಲ್ಲಿ ಸದ್ದಿಲ್ಲದೆ ಮಾದಕ ಲೋಕ ಬೀಡು ಬಿಟ್ಟಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಸಮೂಹವನ್ನು ಟಾರ್ಗೆಟ್ ಮಾಡಿ ಅಮಾಯಕ ವಿದ್ಯಾರ್ಥಿಗಳನ್ನು ಮಾದಕ ಜಾಲಕ್ಕೆಬೀಳಿಸುತ್ತಿದೆ. ಸಿಗರೇಟ್ ಉತ್ಪನ್ನಗಳಲ್ಲಿ ಗಾಂಜಾ ತುಂಬಿ ಯುವ ಸಮೂಹದ ಭವಿಷ್ಯವನ್ನೇ ದಿಕ್ಕುತಪ್ಪಿಸುವ ಕೆಲಸ ನಡೆಯುತ್ತಲೇ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದರೂ, ಅವರ ಕಣ್ಣು ತಪ್ಪಿಸಿ ತನ್ನ ಡ್ರಗ್ಸ್ ಲೋಕ ವಿಸ್ತರಿಸಿಕೊಂಡಿದೆ.
Related Articles
Advertisement
ನಗರ ಪೊಲೀಸರು ಮತ್ತು ಆರೋಹಣ ಎಂಬ ಖಾಸಗಿ ಸಂಸ್ಥೆ ಜಂಟಿ ಒಪ್ಪಂದದಂತೆ ನಗರದ ಪದವಿ ಪೂರ್ವ ಮತ್ತು ಪದವಿ ಹಾಗೂ ಎಂಜಿನಿಯರ್ ಕಾಲೇಜುಗಳ ಆಯ್ದ ವಿದ್ಯಾರ್ಥಿಗಳನ್ನು ಪೊಲೀಸ್ ಮಾರ್ಷಲ್‌ಗಳನ್ನಾಗಿ ನೇಮಿಸಿಕೊಳ್ಳಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಾದಕ ವಸ್ತು ನಿಯಂತ್ರಣ, ಸೈಬರ್ ಜಾಗೃತಿ, ಪೋಕೊÕà ಕಾಯ್ದೆ ಕುರಿತು ಅರಿವು ಮೂಡಿಸಲು ವಿದ್ಯಾರ್ಥಿಗಳನ್ನೊಳಗೊಂಡ ತಂಡ ರಚಿಸಲಾಗಿದೆ. ನಿರ್ದಿಷ್ಟ ಕಾಲೇಜಿನ ಮುಖ್ಯಸ್ಥರು ಹಾಗೂ ಉಪನ್ಯಾಸಕರ ಜತೆ ಸುದೀರ್ಷ ಚರ್ಚೆ ನಡೆಸಿ 50 ಮಂದಿ ಮಾರ್ಷಲ್‌ಗಳಿಗೆ 100 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬಳಿಕ ಎಲ್ಲ ವಿದ್ಯಾರ್ಥಿಗಳ ಪೂರ್ವಪರ ಹಾಗೂ ಕಾಲೇಜಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಆ ನಂತರ 50 ಮಂದಿಯನ್ನು ಮಾರ್ಷಲ್‌ಗಳನ್ನಾಗಿ ಆಯ್ದುಕೊಳ್ಳಲಾಗುತ್ತದೆ. ಸದ್ಯ ಈಶಾನ್ಯ ವಿಭಾಗದಲ್ಲಿ 1,100 ಹಾಗೂ ಪೂರ್ವ ವಿಭಾಗದಲ್ಲಿ 180 ಮಂದಿ ಪಿಯಸಿ, ಪ್ರಥಮ ವರ್ಷದ ಪದವಿ (ಎನ್
ಸಿಸಿ, ಎನ್‌ಎಸ್‌ಎಸ್ ಅಥವಾ ನಾಗರಿಕ ರಕ್ಷಣಾ ದಳದಲ್ಲಿ ಇರುವವರುಸೇರಿ) ಮತ್ತು ಎಂಜಿನಿಯರ್ ಕಾಲೇಜುಗಳ ವಿದ್ಯಾರ್ಥಿಗಳು ಪೊಲೀಸ್ ಮಾರ್ಷಲ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪೊಲೀಸ್ ಮಾರ್ಷಲ್‌ಗಳ ಕರ್ತವ್ಯವೇನು?: ಪೊಲೀಸ್ ಮಾರ್ಷಲ್‌ಗಳಿಗೆ ತಮ್ಮ ಕಾಲೇಜಿನ ಆಸು-ಪಾಸಿನಲ್ಲಿ ಏನೆಲ್ಲ ನಡೆಯುತ್ತಿದೆ? ತಮ್ಮ ಯಾವ ಸಹಪಾಠಿಗಳು ಡ್ರಗ್ಸ್ ವ್ಯಸನಿಗಳಾಗಿದ್ದಾರೆ? ಅವರಿಗೆ ಯಾರು ಮಾದಕ ವಸ್ತು ಪೂರೈಕೆ ಮಾಡುತ್ತಿದ್ದಾರೆ ಎಂಬ ವಿಚಾರ ಸಾಮಾನ್ಯವಾಗಿ ತಿಳಿದಿರುತ್ತದೆ. ಇನ್ನು ತಮ್ಮ ಶಾಲಾ- ಕಾಲೇಜುಗಳ 100 ಮೀಟರ್ ಅಂತರದಲ್ಲಿ ಯಾವ ತಂಬಾಕು ಉತ್ಪನ್ನ ಮಾರಾಟ ಮಳಿಗೆ ಇವೆ. ಅಲ್ಲಿ ಏನೆಲ್ಲ ದೊರೆಯುತ್ತದೆ. ಕೇವಲ ಸಿಗರೇಟ್ ಮಾತ್ರವೇ? ಅಥವಾ ಮಾದಕ ವಸ್ತು ದೊರೆಯುತ್ತದೆಯೇ? ಜತೆಗೆ ಪ್ರತ್ಯೇಕ ಸಿಗರೇಟ್ ಜೋನ್ ಇದೆಯೇ ಎಂಬುದನ್ನು ಮಾರ್ಷಲ್‌ಗಳು ಪತ್ತೆ ಹಚ್ಚಬೇಕು. ಬಳಿಕ ಈ ಮಾಹಿತಿಯನ್ನು ಫೋಟೋ, ಲೋಕೇಷನ್ ಸಮೇತ ಪೊಲೀಸ್ ಅಧಿಕಾರಿಗಳಿಗೆ ತಿಳಿಸಬೇಕು. ಈ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಮುಂದಿನ ಕಾನೂನು ಕ್ರಮಕೈಗೊಳ್ಳುತ್ತಾರೆ. ಆಯ್ದ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮುಖ್ಯಸ್ಥರ ಜತೆ ಚರ್ಚಿಸಿ, ಪೋಕೊÕà ಕಾಯ್ದೆ ಬಗ್ಗೆ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಆರೋಹಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಮನೀಷಾ ಭಟ್ ಮಾಹಿತಿ ನೀಡಿದರು.
10 ಸಾವಿರ ಪೊಲೀಸ್ ಮಾರ್ಷಲ್ ಸೃಷ್ಟಿ : ಮಾರ್ಷಲ್‌ಗಳಿಗೆ ಈಗಾಗಲೇ 3 ತಿಂಗಳು ಪೊಲೀಸ್ ಇನ್‌ಸ್ಪೆಕ್ಟರ್, ಎಸಿಪಿ ಹಂತದ ಅಧಿಕಾರಿಗಳು ತರಬೇತಿ ನೀಡಿದ್ದಾರೆ. ಪ್ರತಿ ಮಾರ್ಷಲ್ ಮುಂದಿನ ದಿನಗಳಲ್ಲಿ 50 ವಿದ್ಯಾರ್ಥಿಗಳಿಗೆ ಮಾದಕ ವಸ್ತು ಕುರಿತು ಅರಿವು ಮೂಡಿಸಬೇಕು. ಸದ್ಯ 800 ಪೊಲೀಸ್ ಮಾರ್ಷಲ್‌ಗಳು ತರಬೇತಿ ಪಡೆಯುತ್ತಿದ್ದು, 2024ರ ಅಂತ್ಯದಲ್ಲಿ ನಗರದಲ್ಲಿ 10 ಸಾವಿರ ಪೊಲೀಸ್ ಮಾರ್ಷಲ್‌ಗಳನ್ನು ಸೃಷ್ಟಿಸಲು ಆರೋಹಣ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಯೋಜನೆ ರೂಪಿಸಿದೆ.
ಸದ್ಯ ಪೊಲೀಸ್ ಮಾರ್ಷಲ್‌ಗಳನ್ನು ಡ್ರಗ್ಸ್, ಪೋಕ್ಸೋ, ಸೈಬರ್ ಜಾಗೃತಿಗೆ ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಾರ್ಯಾಚರಣೆಗೂ ಬಳಸಿಕೊಳ್ಳಲಾಗುವುದು. ಉತ್ತಮ ಸೇವೆ ಸಲ್ಲಿಸಿದ್ದ ಮಾರ್ಷಲ್‌ಗಳಿಗೆ ನಗರ ಪೊಲೀಸ್ ಆಯುಕ್ತರಿಂದ ಪ್ರಶಂಸನ ಪತ್ರ ಕೊಡಿಸಲಾಗುತ್ತದೆ.-ವಿನಯ್, ಆರೋಹಣ ಸಂಸ್ಥೆಯ ನಿರ್ದೇಶಕರು.
ಈ ಹೊಸ ಮಾರ್ಗದಿಂದ ಉತ್ತಮ ಫಲಿತಾಂಶ ಸಿಗಲಿದೆ ಎಂಬ ನಿರೀಕ್ಷೆಯಿದೆ. ಸಾಮಾನ್ಯವಾಗಿ ಪೊಲೀಸರು, ಪೂರೈಕೆದಾರರು ಅಥವಾ ಪೆಡ್ಲರ್‌ಗಳು ಹಾಗೂ ವ್ಯಸನಿಗಳ ಮೇಲೆ ನಿಗಾವಹಿಸುತ್ತಾರೆ. ಇದೀಗ ನೂತನ ಪೊಲೀಸ್ ಮಾರ್ಷಲ್‌ಗಳು, ವಿದ್ಯಾರ್ಥಿಗಳು ಮಾತ್ರವಲ್ಲದೆ, ಸಾರ್ವಜನಿ ಕರಿಗೂ ಮಾದಕ ವಸ್ತು, ಸೈಬರ್ ಕುರಿತು ಅರಿವು ಮೂಡಿಸುವುದರಿಂದ ಗಣನೀಯ ಪ್ರಮಾಣದಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ನೆರವಾಗುತ್ತದೆ.-ಬಿ.ದಯಾನಂದ, ನಗರ ಪೊಲೀಸ್ ಆಯುಕ್ತ
– ಮೋಹನ್ ಭದ್ರಾವತಿ