ಹೈದರಾಬಾದ್: ಇನ್ನೊಂದು ತಿಂಗಳ ಕಾಲ ಅಂದರೆ ಅ.27ರ ಭಾನುವಾರ ಸಂಜೆ 6ರಿಂದ ನ.28ರ ಸಂಜೆ 6ರವರೆಗೆ ಹೈದರಾಬಾದ್‌ನಲ್ಲಿ ಎಲ್ಲೆಂದರಲ್ಲಿ ಮೆರವಣಿಗೆ, ಧರಣಿ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ! ಒಂದು ತಿಂಗಳ ಕಾಲ ನಗರದಲ್ಲಿ ನಿಷೇ ಧಾಜ್ಞೆ ಹೇರಿ ಹೈದರಾಬಾದ್ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಇಂದಿರಾ ಪಾರ್ಕ್ ಧರಣಿ ಚೌಕ್‌ನಲ್ಲಿ ಮಾತ್ರ ಶಾಂತಿಯುತ ಧರಣಿ ಮತ್ತು ಪ್ರತಿಭಟನೆಗಳಿಗೆ ಅವಕಾಶವಿದೆ ಎಂದು ಆದೇಶದಲ್ಲಿ ಉಲ್ಲೇಖೀಸಿದ್ದಾರೆ. ಹೀಗಾಗಿ ಇಂದಿರಾ ಪಾರ್ಕ್ ಹೊರತುಪಡಿಸಿ ಹೈದರಾಬಾದ್ ಮತ್ತು ಸಿಕಂದರಾಬಾದ್‌ನ ಬೇರೆಲ್ಲೂ ಧರಣಿಗೆ ಅನುಮತಿ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕೆಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಧರಣಿ, ಪ್ರತಿಭಟನೆಗಳ ಮೂಲಕ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಸಂಚು ರೂಪಿಸಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೇರಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಸಚಿವಾಲಯ, ಸೂಕ್ಷ್ಮ ಸ್ಥಳಗಳ ಬಳಿ ಪ್ರತಿಭಟಿಸಿದರೆ ದಂಡ ಸಹಿತ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ದೀಪಾವಳಿ ತಡೆಗೆ ಯತ್ನ: ಬಿಜೆಪಿ
ನಿಷೇಧಾಜ್ಞೆ ನಿರ್ಧಾರಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹಿಂದೂಗಳ ಹಬ್ಬ ದೀಪಾವಳಿ ಸಂಭ್ರಮಕ್ಕೆ ತಡೆಯೊಡ್ಡಲು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ನಡೆಸಿರುವ ಪಿತೂರಿ ಇದು ಎಂದು ಕಿಡಿಕಾರಿದೆ.