ಬೆಂಗಳೂರು: ಖಾಲಿ ನಿವೇಶನ ವ್ಯಾಜ್ಯದ ಸಂಬಂಧ ಪೊಲೀಸರು ತನಿಖೆ ನಡೆಸದೆ ಮಾನಸಿಕ ಕಿರುಕುಳ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಧಿಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ನ್ಯಾಯಾಲಯ ಸೂಚನೆ ಮೇರೆಗೆ ಬಾಣಸವಾಡಿ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಅದೇ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಾಣಸವಾಡಿ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ವಿ ಮುನಿರಾಜು, ಠಾಣೆಯ ಇತರೆ ಸಿಬ್ಬಂದಿಗಳಾದ ಉಮೇಶ್, ಬಾಬು, ಬಸವಲಿಂಗಪ್ಪ, ಎಸ್.ಎಂ ಖಾದ್ರಿ, ಚೌಡಪ್ಪ, ಮುನಿಕೃಷ್ಣ, ಚೆಲುವರಾಜು, ಕುಮಾರ ಸುನೀತಾ ಹಾಗೂ ಖಾಸಗಿ ವ್ಯಕ್ತಿಗಳು ಸೇರಿದಂತೆ ಒಟ್ಟು 19 ಮಂದಿಯ ವಿರುದ್ಧ ಅದೇ ಠಾಣೆಯಲ್ಲಿ ಮಾರ್ಚ್ 25ರಂದು ಜಾತಿನಿಂದನೆ, ಐಪಿಸಿ ಸೆಕ್ಷನ್ 209,354,392 ಎಫ್ಐಆರ್ ದಾಖಲಾಗಿದೆ.
ನಾಗಯ್ಯನಪಾಳ್ಯದ ನಿವಾಸಿ ಫೆಲೀನಾ ಹರಿಪ್ರಸಾದ್, ನಿವಾಸದ ಸಮೀಪದಲ್ಲಿ 12x 20 ವಿಸ್ತೀರ್ಣದ ಜಾಗವನ್ನು ಕಳೆದ ವರ್ಷ ಶರವಣ ಎಂಬಾತ ಖರೀದಿಸಿದ್ದರು. ಆದರೆ ಈ ಜಾಗ ತಮಗೆ ಸೇರಿದ್ದು. ಅದನ್ನು ಅತಿಕ್ರಮಿಸಲಾಗಿದೆ ಎಂದು ಆರೋಪಿಸಿದ ಮಹಿಳೆ, ಸೆಪ್ಟೆಂಬರ್ 25ರಂದು ಬಾಣಸವಾಡಿಯಲ್ಲಿ ದೂರು ನೀಡಿದ್ದರು. ಹೀಗಾಗಿ ನಿವೇಶನವನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ಅಲ್ಲದೆ ಇದಕ್ಕೆ ಪ್ರತಿಯಾಗಿ ಶರವಣ ಕೂಡ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.
ಈ ಮಧ್ಯೆ ಬಾಣಸವಾಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಶರವಣ ಜತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಮಹಿಳೆ ಶರವಣ, ಆ್ಯಂಟನಿ, ಹಾಗೂ ಬಾಣಸವಾಡಿ ಠಾಣೆಯ ಸಿಬ್ಬಂದಿ ಸೇರಿ ಒಟ್ಟು 19 ಮಂದಿ ವಿರುದ್ಧ 17ನೇಸಿಸಿಎಚ್ ನ್ಯಾಯಾಲಯದಲ್ಲಿ ಮಾನಸಿಕ ಹಾಗೂ ದೈಹಿಕ ಹಲ್ಲೆ , ಜಾತಿ ನಿಂದನೆ ಕೇಸು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿತ್ತು.
25 ದೂರು ದಾಖಲು!
ದೂರುದಾರ ಮಹಿಳೆ 2014ರಿಂದ ಹಲವು ವಿಚಾರಗಳ ಸಂಬಂಧ ನ್ಯಾಯಾಲಯದಲ್ಲಿ ಸುಮಾರು 25 ದೂರುಗಳನ್ನು ಹಲವರ ಮೇಲೆ ದಾಖಲಿಸಿದ್ದಾರೆ. ಈ ಪೈಕಿ ಹಿರಿಯ ಪೊಲೀಸ್ ಅಧಿಕಾರಿಗಳು, ಡಿಸಿಪಿ, ಎಸಿಪಿ, ಇನ್ಸಪೆಕ್ಟರ್ , ಪೊಲೀಸ್ ಪೇದೆಗಳ ವಿರುದ್ಧವೂ ದೂರು ನೀಡಿದ್ದಾರೆ. ಕೆಲವು ದೂರುಗಳನ್ನು ತನ್ನ ಗಂಡ, ಸಹೋದರ, ಸಹೋದರನ ಪತ್ನಿ ಸೇರಿದಂತೆ ಹಲವರ ಹೆಸರಿನಲ್ಲಿ ದೂರು ನೀಡಿದ್ದಾರೆ. ಈಗಾಗಲೇ ಹಲವು ಪ್ರಕರಣಗಳು ಇತ್ಯರ್ಥಗೊಂಡಿವೆ ಪೊಲೀಸ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.